ನನ್ನನ್ನು ಕೇಳಲು ನೀವ್ಯಾರು : ಸಮಸ್ಯೆ ಹೇಳಿಕೊಂಡ ಯುವಕರ ವಿರುದ್ಧ ಹರಿಹಾಯ್ದ ಪ.ಪಂ ಸದಸ್ಯೆ

ಹನೂರು: ನಿಮ್ಮ ವಾರ್ಡಿನಲ್ಲಿ ಚುನಾವಣೆಗೆ ನಿಲ್ಲುವವರೇ ಯಾರೂ ಇರಲಿಲ್ಲ, ನನ್ನನ್ನು ಮಂಜುನಾಥಣ್ಣ ನಿಲ್ಲಿಸಿ ಗೆಲ್ಲಿಸಿದ್ದಾರೆ. ನೀವು ಯಾರೂ ನನ್ನನ್ನು ಕೇಳುವುದಕ್ಕೆ ಎಂದು ಪ.ಪಂ 1ನೇ ವಾರ್ಡಿನ ಸದಸ್ಯೆ ಮುಮ್ತಾಜ್ ಬೇಗಂ ಯುವಕರ ಮೇಲೆ ಹರಿಹಾಯ್ದ ಘಟನೆ ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಜರುಗಿದೆ.
ಏನಿದು ಘಟನೆ:? ಪಟ್ಟಣ ಪಂಚಾಯಿತಿಯ 1ನೇ ವಾರ್ಡಿಗೆ ಒಳಪಡುವ ಅಂಬೇಡ್ಕರ್ ನಗರದ ಯುವಕರು ತಮ್ಮ ವಾರ್ಡಿಗೆ ಸಮರ್ಪಕವಾಗಿ ಮೂಲಭೂತ ಸೌಕರ್ಯ ದೊರಕುತ್ತಿಲ್ಲ. ವಾರ್ಡಿಗೆ ನೀರು ಸರಬರಾಜು ಮಾಡುವ ನೀರುಗಂಟಿಗಳು ತಡರಾತ್ರಿ 2 ಗಂಟೆ, 3 ಗಂಟೆ, 4 ಗಂಟೆಗೆ ನೀರು ಬಿಡುತ್ತಾರೆ.
ಇದರಿಂದ ವಾರ್ಡಿನ ಮಹಿಳೆಯರು ನಿದ್ದೆಯನ್ನು ತ್ಯಜಿಸಿ ನೀರಿನ ಕೊಳಾಯಿಯನ್ನೇ ಕಾದುಕುಳಿತುಕೊಳ್ಳಬೇಕಾದ ಪರಿಸ್ಥಿತಿಯಿದೆ. ಈ ಬಗ್ಗೆ ವಾರ್ಡಿನ ಮುಖಂಡರು, ಯುವಕರು ಸಂಬಂಧಪಟ್ಟ ವಾರ್ಡಿನ ಸದಸ್ಯೆ ಮತ್ತು ನೀರುಗಂಟಿಗಳ ಗಮನಕ್ಕೆ ತಂದರೂ ಸಮಸ್ಯೆ ತಲೆದೋರಿಲ್ಲ. ವಾರ್ಡಿನಲ್ಲಿ ಚರಂಡಿಗಳು ಗಬ್ಬೆದ್ದು ನಾರುತ್ತಿದ್ದು ಹಬ್ಬ-ಹರಿದಿನಗಳಲ್ಲಿ ಮಾತ್ರ ಶುಚಿತ್ವಾವಾಗುತ್ತದೆಯೇ ಹೊರತು ಬಾಕಿ ದಿನಗಳಲ್ಲಿ ಗಬ್ಬೆದು ನಾರುತ್ತಿವೆ. ಬೀದಿ ದೀಪಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ, ಇದರ ಪರಿಣಾಮ ಶುಕ್ರವಾರ ತಡರಾತ್ರಿ ದ್ವಿಚಕ್ರ ವಾಹನ ಸವಾರ ಬಿದ್ದು ಪ್ರಾಣವನ್ನೇ ಬಿಟ್ಟಿದ್ದಾನೆ.
ಈ ಬಗ್ಗೆ ಗಮನಹರಿಸಬೇಕಾದ ವಾರ್ಡಿನ ಸದಸ್ಯೆ ಮುಮ್ತಾಜ್ ಬೇಗಂ ನಿರ್ಲಕ್ಷ್ಯ ಧೋರಣೆ ತಳೆದಿದ್ದಾರೆ. ಈ ಬಗ್ಗೆ ದೂರವಾಣಿಯಲ್ಲಿ ಮಾತನಾಡಿದರೆ ಬೇಜವಾಬ್ದಾರಿತನದ ಹೇಳಿಕೆ ನೀಡುತ್ತಾರೆ ಎಂದು ಮುಖ್ಯಾಧಿಕಾರಿಗಳ ಬಳಿ ಅಳಲನ್ನು ತೋಡಿಕೊಳ್ಳುತ್ತಿದ್ದರು.
ಈ ವೇಳೆಗೆ ಸ್ಥಳಕ್ಕಾಗಮಿಸಿದ ಸದಸ್ಯೆ ಮುಮ್ತಾಜ್ ಬೇಗಂ ಯುವಕರನ್ನು ಸಮಜಾಯಿಸಿ ನೀಡಿ ಸಮಾಧಾನಪಡಿಸಲು ಮುಂದಾದರು. ಈ ವೇಳೆ ಮಾತಿಗೆ ಮಾತು ಬೆಳೆದು ವಾಗ್ವಾದ ನಡೆಯುತ್ತಿರುವಾಗಲೇ ನನ್ನನ್ನು ಕೇಳಲು ನೀವು ಯಾರು?, ನಿಮ್ಮ ವಾರ್ಡಿಗೆ ಚುನಾವಣೆಗೆ ನಿಲ್ಲುವವರೇ ಇರಲಿಲ್ಲ, ಈ ಸಂದರ್ಭದಲ್ಲಿ ಮಂಜುನಾಥಣ್ಣ ಅವರು ನನನ್ನು ತಂದು ಚುನಾವಣೆಗೆ ನಿಲ್ಲಿಸಿ ಗೆಲ್ಲಿಸಿದ್ದಾರೆ, ನೀವು ಏನೇ ಕೇಳುವುದಿದ್ದರೂ ಅವರನ್ನು ಕೇಳಿ ಎಂದು ಉದ್ಧಟತನದ ಮಾತುಗಳನ್ನಾಡದರು.
ಇದರಿಂದ ಕುಪಿತರಾದ ಯುವಕರ ತಂಡ ತಮ್ಮ ವಾರ್ಡಿಗೆ ಸಮರ್ಪಕ ಮೂಲಭೂತ ಸವಲತ್ತುಗಳೂ ದೊರಕುತ್ತಿಲ್ಲ, ಅಲ್ಲದೆ ಸಂಬಂಧಪಟ್ಟ ವಾರ್ಡ್ ಸದಸ್ಯೆ ಉದ್ಧಟತನದ ಹೇಳಿಕೆ ನೀಡುತ್ತಾರೆ. ಆದುದರಿಂದ ಅವರ ದುರಾಡಳಿತದ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಮುಖ್ಯಾಧಿಕಾರಿಗಳಿಗೆ ಲಿಖಿತ ಮನವಿ ಸಲ್ಲಿಸಿ ತೆರಳಿದರು.
ಈ ಸಂದರ್ಭದಲ್ಲಿ 1ನೇ ವಾರ್ಡಿನ ಸಿದ್ಧರಾಜು, ಶಿವು, ಕಾರ್ತಿಕ್, ಶಿವಕುಮಾರ್ ಇನ್ನಿತರರು ಹಾಜರಿದ್ದರು.