ಕೆಎಲ್ ರಾಹುಲ್ ಮೇಲೆ ಬಾಟಲ್ ಕಾರ್ಕ್ ಬಿಸಾಕಿ ದುರ್ವರ್ತನೆ ತೋರಿದ ಪ್ರೇಕ್ಷಕರು

ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ ಎರಡನೇ ಪಂದ್ಯ ಕ್ರಿಕೆಟ್ ಕಾಶಿ ಎಂದೇ ಖ್ಯಾತಿಯನ್ನು ಹೊಂದಿರುವ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಆಗಸ್ಟ್ 12ರ ಬುಧವಾರದಂದು ಆರಂಭವಾದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದ ಮೊದಲ 3 ದಿನಗಳು ಮುಗಿದಿದ್ದು ಎರಡೂ ತಂಡಗಳು ಸಹ ತಮ್ಮ ಮೊದಲ ಇನ್ನಿಂಗ್ಸ್‌ನ ಬ್ಯಾಟಿಂಗ್ ಮುಗಿಸಿವೆ.
ಬುಧವಾರ ಆರಂಭವಾದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ವಿರಾಟ್ ಕೊಹ್ಲಿ ಪಡೆಗೆ ಬ್ಯಾಟಿಂಗ್ ಮಾಡುವ ಅವಕಾಶ ನೀಡಿದರು. ಟೀಮ್ ಇಂಡಿಯಾ ಪರ ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ಕೆಎಲ್ ರಾಹುಲ್ ಮತ್ತು ರೋಹಿತ್ ಶರ್ಮಾ ಉತ್ತಮ ಆರಂಭವನ್ನು ಮಾಡಿದರು. ರೋಹಿತ್ ಶರ್ಮಾ 83 ರನ್ ಬಾರಿಸಿದರೆ ಕೆಎಲ್ ರಾಹುಲ್ ಅಬ್ಬರದ 129 ರನ್ ಬಾರಿಸುವುದರ ಮೂಲಕ ಶತಕ ಸಿಡಿಸಿ ಮಿಂಚಿದರು. ಇನ್ನುಳಿದಂತೆ ವಿರಾಟ್ ಕೊಹ್ಲಿ 42, ರವೀಂದ್ರ ಜಡೇಜಾ 40 ಮತ್ತು ರಿಷಭ್ ಪಂತ್ 37 ರನ್ ಗಳಿಸಿದ್ದು ಬಿಟ್ಟರೆ ಟೀಮ್ ಇಂಡಿಯಾದ ಇತರ ಯಾವುದೇ ಆಟಗಾರ ಕೂಡ ಎರಡಂಕಿ ಮುಟ್ಟುವಲ್ಲಿ ಸಫಲರಾಗಲಿಲ್ಲ.
ಅತ್ತ ಮೊದಲನೇ ಇನ್ನಿಂಗ್ಸ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಅಜೇಯ 180 ರನ್ ಗಳಿಸಿ ಇಂಗ್ಲೆಂಡ್ ತಂಡದ ಮೊತ್ತ 391ಕ್ಕೆ ತಲುಪುವಲ್ಲಿ ಸಹಕಾರಿಯಾದರು. ಹೀಗೆ ಇಂಗ್ಲೆಂಡ್ ತಂಡ ಬ್ಯಾಟಿಂಗ್ ಮಾಡುತ್ತಿದ್ದ ವೇಳೆ ಭಾರತ ತಂಡದ ಆಟಗಾರ ಕೆಎಲ್ ರಾಹುಲ್ ಬೌಂಡರಿ ಗೆರೆ ಪಕ್ಕ ನಿಂತು ಕ್ಷೇತ್ರ ರಕ್ಷಣೆಯಲ್ಲಿ ತೊಡಗಿದ್ದರು. ಭಾರತ ತಂಡದ ಬೌಲರ್ ಮೊಹಮ್ಮದ್ ಶಮಿ 69ನೇ ಓವರ್ ಮಾಡುತ್ತಿದ್ದ ಸಂದರ್ಭದಲ್ಲಿ ಬೌಂಡರಿ ಗೆರೆಯ ಪಕ್ಕ ನಿಂತಿದ್ದ ಕೆಎಲ್ ರಾಹುಲ್ ಮೇಲೆ ಪಂದ್ಯ ವೀಕ್ಷಿಸಲು ಬಂದಿದ್ದ ಕೆಲ ಕಿಡಿಗೇಡಿಗಳು ಶಾಂಪೇನ್ ಬಾಟಲಿಯ ಮುಚ್ಚಳಗಳನ್ನು ಎಸೆಯುವ ಮೂಲಕ ದುಷ್ಕೃತ್ಯ ಮೆರೆದಿದ್ದಾರೆ.
ಪ್ರವಾಸಕ್ಕೆ ಬರುವ ಇತರೆ ರಾಷ್ಟ್ರಗಳ ಕ್ರಿಕೆಟಿಗರಿಗೆ ಆಂಗ್ಲ ಪ್ರೇಕ್ಷಕರು ಈ ರೀತಿ ಅಸಭ್ಯ ವರ್ತನೆ ತೋರುವುದರ ಮೂಲಕ ಅವಮಾನ ಮಾಡಲು ಯತ್ನಿಸುವುದು ಆಗಾಗ ನಡೆಯುತ್ತಲೇ ಇರುತ್ತವೆ. ಹೀಗೆ ಕೆಎಲ್ ರಾಹುಲ್ ಮೇಲೆ ಬಾಟಲಿಯ ಮುಚ್ಚಳಗಳನ್ನು ಎಸೆದ ಕಾರಣಕ್ಕೆ ನಾಯಕ ವಿರಾಟ್ ಕೊಹ್ಲಿ ಪಂದ್ಯದ ತೀರ್ಪುಗಾರರಾಗಿ ಜೊತೆ ಕೆಲ ಸಮಯದ ಕಾಲ ಮಾತುಕತೆಯನ್ನು ನಡೆಸಿ ಬೇಸರ ವ್ಯಕ್ತಪಡಿಸಿದರು, ಹೀಗಾಗಿ ಪಂದ್ಯ ಕೆಲ ಸಮಯ ಸ್ಥಗಿತಗೊಂಡಿತ್ತು.
ಸದ್ಯ ಕೆಎಲ್ ರಾಹುಲ್ ಮೇಲೆ ಆಂಗ್ಲ ಪ್ರೇಕ್ಷಕರು ಮಾಡಿರುವ ಈ ದುಷ್ಕೃತ್ಯದ ಕುರಿತು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದ ಟೀಕೆಗಳು ವ್ಯಕ್ತವಾಗುತ್ತಿದ್ದು ಈ ರೀತಿ ದುರ್ವರ್ತನೆ ತೋರಿಸುವ ಪ್ರೇಕ್ಷಕರನ್ನು ಇನ್ನು ಮುಂದಿನ ಯಾವುದೇ ಪಂದ್ಯಗಳಿಗೂ ಸಹ ಮೈದಾನಕ್ಕೆ ಪ್ರವೇಶ ನೀಡಬಾರದು ಎಂದು ಕ್ರೀಡಾಭಿಮಾನಿಗಳು ಕಿಡಿಕಾರಿದ್ದಾರೆ.
ಇಷ್ಟು ಮಾತ್ರವಲ್ಲದೆ ಈ ಹಿಂದೆ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದಾಗಲೂ ಸಹ ಅಲ್ಲಿನ ಪ್ರೇಕ್ಷಕರು ಮೊಹಮ್ಮದ್ ಸಿರಾಜ್ ವಿರುದ್ಧ ಜನಾಂಗೀಯ ನಿಂದನೆ ಮಾಡುವುದರ ಮೂಲಕ ತಮ್ಮ ದುರ್ಬುದ್ಧಿಯನ್ನು ತೋರಿಸಿದ್ದರು. ಹೀಗಾಗಿ ಈ ರೀತಿಯ ಅಸಭ್ಯ ವರ್ತನೆ ತೋರಿಸುವ ಕಿಡಿಗೇಡಿಗಳ ವಿರುದ್ಧ ದೊಡ್ಡ ಕಠಿಣ ಕ್ರಮ ಜರುಗಿಸುವುದರ ಮೂಲಕ ಮುಂದೊಮ್ಮೆ ಈ ರೀತಿಯ ವರ್ತನೆ ತೋರಲು ಹಿಂಜರಿಯುವಂತಹ ಶಿಕ್ಷೆ ನೀಡಬೇಕೆಂದು ಕ್ರೀಡಾಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.