ಇಡೀ ಆಫ್ಘನ್ ಗೆದ್ದ ತಾಲಿಬಾನ್​ಗೆ ಅದೊಂದು ಪ್ರಾಂತ್ಯ ಮಾತ್ರ ನಡುಕ ಹುಟ್ಟಿಸಿದೆ: ರೋಚಕ ಸ್ಟೋರಿ ಇದು!

ಇಡೀ ಆಫ್ಘನ್ ಗೆದ್ದ ತಾಲಿಬಾನ್​ಗೆ ಅದೊಂದು ಪ್ರಾಂತ್ಯ ಮಾತ್ರ ನಡುಕ ಹುಟ್ಟಿಸಿದೆ: ರೋಚಕ ಸ್ಟೋರಿ ಇದು!

ಇಡೀ ಅಫ್ಘಾನಿಸ್ತಾನವೇ ತಾಲಿಬಾನಿಗಳ ವಶವಾಗಿಬಿಡ್ತು ಅಂತಾ ಹೇಳೋ ಹೊತ್ತಿಗೆ ರೆಡಿಯಾಗಿದೆ ಪ್ರತಿರೋಧ. ತಾಲಿಬಾನಿಗಳ ಅಟ್ಟ ಹಾಸಕ್ಕೆ ಮರೆಯಾಗಿದ್ದ ಸೈನಿಕರೆಲ್ಲರನ್ನೂ ಒಗ್ಗೂಡಿಸ್ತಿದ್ದಾರೆ ಹಾಲಿ ಉಪಾಧ್ಯಕ್ಷ ಅಮ್ರುಲ್ಲಾ ಸಲೇಹ್. ಅದರಲ್ಲೂ ತಾಲಿಬಾನಿಗಳ ಎದೆಯಲ್ಲಿ ಹೊಸ ನಡುಕ ತಂದಿದೆ ತಾಲಿಬಾನಿ ಹಿಡಿತಕ್ಕೆ ಸಿಗದ ಏಕೈಕ ಪ್ರಾಂತ್ಯ ಪಂಜ್​ಶಿರ್. ಇಲ್ಲಿನ ಅಜ್ಞಾತ ಸ್ಥಳದಿಂದಲೇ ಗುಡುಗಿದ್ದಾರೆ ಅಮ್ರುಲ್ಲಾ ಸಲೇಹ್,.

20 ವರ್ಷಗಳ ಬಳಿಕ ತಿರುಗಿಬಿದ್ದ ತಾಲಿಬಾನ್ ರಕ್ತಪಿಪಾಸುಗಳು, ಅಫ್ಘಾನಿಸ್ತಾನವನ್ನ ಕೈವಶ ಮಾಡಿಕೊಂಡಿದ್ದಾರೆ. ಯಾವಾಗ ಎರಡು ದಿನಗಳ ಹಿಂದೆ ಕಾಬೂಲ್ ತಾಲಿಬಾನಿಗಳ ತೆಕ್ಕೆಗೆ ಸೇರಿತೋ, ಅಫ್ಘಾನಿಸ್ತಾನ ಇಸ್ಲಾಮಿಕ್ ಉಗ್ರರ ಕಪಿಮುಷ್ಠಿಗೆ ಸೇರಿಬಿಟ್ಟಂತಾಗಿದೆ. ಆಫ್ಘನ್​​ನಿಂದ ಬಹುತೇಕ ರಾಷ್ಟ್ರಗಳು, ತಮ್ಮ ರಾಯಭಾರಿ ಕಚೇರಿ ಖಾಲಿ ಮಾಡಿಸಿದ್ರೆ, ಮುಂಬರೋ ಭಯಾನಕ ಸ್ಥಿತಿ ಸುಳಿವನ್ನರಿತ ಸಹಸ್ರಾರು ಮಂದಿ ಎದ್ವೋ..ಬಿದ್ವೋ ಅಂತಾ ದೇಶ ಬಿಟ್ಟರು. ಕಾಬೂಲ್​ನ ಅಧ್ಯಕ್ಷರ ನಿವಾಸಕ್ಕೆ ಲಗ್ಗೆ ಇಟ್ಟ ತಾಲಿಬಾನಿಗಳು, ಸಂಸತ್​ ಕೂಡ ಕಬ್ಜಾ ಮಾಡಿಕೊಂಡಾಗ ಎಲ್ಲರಿಗೂ ಅನಿಸಿದ್ದು ಅಫ್ಘಾನಿಸ್ತಾನ್ ಪೂರ್ಣ ತಾಲಿಬಾನ್ ಕೈವಶ ಆಯ್ತು ಅಂತಾನೇ. ಆದ್ರೆ, ಇಡೀ ಆಫ್ಘಾನ್ ತಾಲಿಬಾನಿಗಳ ಹಿಡಿತಕ್ಕೆ ಬಂದ್ರೂ, ಅದೊಂದು ಪ್ರಾಂತ್ಯ ಮಾತ್ರ ತಾಲಿಬಾನಿಗಳ ಹಿಡಿತಕ್ಕೆ ಸಿಗಲೇ ಇಲ್ಲ. ಇವತ್ತಿಗೂ ಸ್ವತಂತ್ರ್ಯವಾಗೇ ಉಳಿದಿದೆ ಆ ಪ್ರದೇಶ. ಅದು..ಪಂಜ್​ಶಿರ್!

ತಾಲಿಬಾನಿಗಳ ವಿರುದ್ಧ ಹೋರಾಟಕ್ಕೆ ಸಜ್ಜಾಗುತ್ತಿರೋ ಪಂಜ್​ಶಿರ್ ನಾರ್ದನ್ ಅಲಯನ್ಸ್​ ಯೋಧರು, ತಾಲಿಬಾನಿಗಳಿಗೆ ಮಣಿಯೋದಿಲ್ಲ ಅನ್ನೋ ಕಠಿಣ ಸಂದೇಶ ರವಾನಿಸಿದ್ದಾರೆ. ಇಷ್ಟು ಮಾತ್ರವಲ್ಲ, ಈ ಪ್ರದೇಶದ ಬೆಟ್ಟವೊಂದರ ಮೇಲೆ ನಾರ್ದನ್ ಅಲಯನ್ಸ್​​ ಧ್ವಜವನ್ನು ಹಾರಿಸೋ ಮುಖಾಂತರ ತಾಲಿಬಾನಿಗಳ ವಿರುದ್ಧ ಕದನಕ್ಕೆ ಪಂಜ್​ಶಿರ್​​ ಹೋರಾಟಗಾರರು ಮುನ್ನುಡಿ ಬರೆದಿದ್ದಾರೆ. 2001ರ ಬಳಿಕ ಈ ಪ್ರದೇಶದಲ್ಲಿ ನಾರ್ದನ್ ಅಲಯನ್ಸ್ ಧ್ವಜ ಹಾರಾಡುತ್ತಿರೋದು ಇದೇ ಮೊದಲು.

ಏನಿದು ನಾರ್ದನ್ ಅಲಯನ್ಸ್?
ಹಾಗೆ ನೋಡಿದ್ರೆ ಈ ನಾರ್ದನ್ ಅಲಯನ್ಸ್​​ಗೆ ಅಧಿಕೃತ ಹೆಸರು ಯುನೈಟಡ್ ಇಸ್ಲಾಮಿಕ್ ಫ್ರಂಟ್ ಫಾರ್ ದಿ ಸಾಲ್ವೇಷನ್ ಆಫ್ ಅಫ್ಘಾನಿಸ್ತಾನ್ ಅಂತಾ. 1996ರಲ್ಲಿ ಅಸ್ತಿತ್ವಕ್ಕೆ ಬಂದ ಏಕೀಕೃತ ಸೇನಾ ಪಡೆ ಗುರಿ ಆಗ ಅಧಿಕಾರಕ್ಕೇರಿದ್ದ ತಾಲಿಬಾನ್ ವಿರುದ್ಧ ಹೋರಾಟ. ಕ್ರಮೇಣ, ಅಮೆರಿಕಾ ನೆರವಿನಿಂದ ತಾಲಿಬಾನ್​​ ಹುಟ್ಟಡಗಿಸಿದ್ದ ನಾರ್ದನ್ ಅಲಯನ್ಸ್​​ನಲ್ಲಿ ಘಟಾನುಘಟಿ ನಾಯಕರ ದಂಡೇ ಇತ್ತು. ಇದರಲ್ಲಿ ಪಂಜ್​ಶೀರ್ ಪ್ರಾಂತ್ಯದ ಅಗ್ರ ಸೇನಾನಿ ಅಹ್ಮದ್ ಶಾ ಮಸೂದ್, ಅತ್ಯುಗ್ರ ಸಮರ ಸೇನಾನಿಯಂದೇ ಹೆಸರು ಪಡೆದವರು. ಆಗ ನಾರ್ದನ್ ಅಲಯನ್ಸ್​ಗೆ ಭಾರತ, ತಜಕಿಸ್ತಾನ ಸೇರಿದಂತೆ ನಾನಾ ದೇಶಗಳ ಬೆಂಬಲ ಇತ್ತು. ಆನಂತರ ಅಮೆರಿಕ ಕೂಡ ಕೈಜೋಡಿಸಿದ ಪರಿಣಾಮ, ತಾಲಿಬಾನ್​ ಆಡಳಿತ ಪತನವಾಯಿತು. ಇದಾದ ಬೆನ್ನಲ್ಲೇ 2001ರಲ್ಲಿ ಹೊಸ ಸರ್ಕಾರಕ್ಕೆ ಮೈತ್ರಿ ರಚನೆಯಾದ ಬೆನ್ನಲ್ಲೇ ವಿಸರ್ಜನೆಯಾಗಿದ್ದ ನಾರ್ದನ್ ಅಲಯನ್ಸ್ ಇದೀಗ ಮತ್ತೆ ಮೇಲೆದ್ದಿದೆ.

ಅಫ್ಘಾನಿಸ್ತಾನದ ಉತ್ತರಕ್ಕಿರೋ ಬೆಟ್ಟಗುಡ್ಡ, ಕಣಿವೆ ಪ್ರದೇಶ ಪಂಜ್​ಶಿರ್ ಈವರೆಗೂ ತಾಲಿಬಾನಿಗಳ ಹಿಡಿತಕ್ಕೆ ಸಿಕ್ಕಿಲ್ಲ. ಇದರ ಬದಲಾಗಿ ತಾಲಿಬಾನ್ ವಿರೋಧಿ ರಂಗವನ್ನ ಬಲಿಷ್ಠಗೊಳ್ಳೋಕೆ ರಣರಂಗವಾಗುತ್ತಿದೆ ಈ ಪಂಜ್​ಶಿರ್. ಈಗಾಗಲೇ ತಾವೇ ಅಫ್ಘಾನಿಸ್ತಾನದ ಹಂಗಾಮಿ ಅಧ್ಯಕ್ಷ ಅಂತಾ ಸ್ವಯಂ ಘೋಷಿಸಿಕೊಂಡಿರೋ ಉಪಾಧ್ಯಕ್ಷ ಅಮ್ರುಲ್ಲಾ ಸಲೇಹ್​, ಸದ್ಯಕ್ಕೆ ಆಶ್ರಯ ಪಡೆದಿರೋದು ಇದೇ ಪ್ರದೇಶದಲ್ಲಿ ಎನ್ನಲಾಗುತ್ತಿದೆ. ತಾಲಿಬಾನಿಗಳೀಗೆ ಪ್ರತಿರೋಧ ಒಡ್ಡೋ ಭರವಸೆ ಮೂಡಿಸಿರೋ ಅಮ್ರುಲ್ಲಾ ಸಲೇಹ್, ಈಗಾಗ್ಲೇ ಸರಣಿ ಟ್ವೀಟ್​ಗಳ ಮೂಲಕ ಉಗ್ರರ ವಿರುದ್ಧ ದನಿ ಎತ್ತಿದ್ದಾರೆ. ತಾವೇ ಹಂಗಾಮಿ ಅಧ್ಯಕ್ಷ ಎಂದು ಘೋಷಿಸಿಕೊಂಡಿರೋ ಮಧ್ಯೆಯೇ ಅಮ್ರುಲ್ಲಾ ಸಲೇಹ್​​ರದ್ದು ಎನ್ನಲಾದ ಆಡಿಯೋ ಬಹಿರಂಗವಾಗಿದೆ. ಇದರಲ್ಲಿ ಅಫ್ಘಾನಿಸ್ಥಾನದ ಸಂವಿಧಾನ ಪ್ರಕಾರ ಅಧ್ಯಕ್ಷರು, ಗೈರಾದ್ರೆ, ಅಥವಾ ರಾಜೀನಾಮೆ ಕೊಟ್ರೆ, ಅಥವಾ ಅವರ ಕರ್ತವ್ಯ ನಿಭಾಯಿಸಲು ಅಸಮರ್ಥರಾದ್ರೆ, ಮೊದಲ ಉಪಾಧ್ಯಕ್ಷರೇ ತನ್ನಿಂದ ತಾನೇ ಕಾನೂನುಬದ್ಧ ಉಸ್ತುವಾರಿ ಅಧ್ಯಕ್ಷರಾಗಲಿದ್ದಾರೆ ಎಂದು ಸಲೇಹಿ ಪ್ರತಿಪಾದಿಸಿದ್ದಾರೆ.

ಅಧ್ಯಕ್ಷರಾಗಿದ್ದ ಅಶ್ರಫ್ ಘನಿ ದೇಶದಿಂದ ಪಲಾಯನಗೈದಿರೋದ್ರಿಂದ ಅವರ ಕರ್ತವ್ಯ, ಹೊಣೆಗಾರಿಕೆ ಹಾಗೂ ಹುದ್ದೆಯನ್ನು ತೆರವು ಮಾಡಿದಂತಾಗಿದೆ. ನಾನು ದೇಶದಲ್ಲೇ ನೆಲೆಸಿರೋದ್ರಿಂದ, ಪ್ರಸಕ್ತ ಕಾನೂನುಬದ್ಧ ಉಸ್ತುವಾರಿ ಅಧ್ಯಕ್ಷ ಎಂದು ಸಲೇಹಿ ಘೋಷಿಸಿಕೊಂಡಿದ್ದಾರೆ. ಇಷ್ಟಲ್ಲದೇ, ಅಜ್ಞಾತ ಸ್ಥಳದಿಂದಲೇ ಟ್ವೀಟ್ ಮೂಲಕ ತಾಲಿಬಾನಿಗಳಿಗೆ ಸಲೇಹಿ ಸತತವಾಗಿ ಕುಟುಕಿದ್ದಾರೆ. ತಾವು ಎಂತಹ ಪರಿಸ್ಥಿತಿಯಲ್ಲೂ ತಾಲಿಬಾನ್ ಉಗ್ರರಿಗೆ ತಲೆಬಾಗುವುದಿಲ್ಲ. ನನ್ನ ಹೀರೋ, ಕಮಾಂಡರ್, ಮಾರ್ಗದರ್ಶಿಯಾಗಿದ್ದ ಅಹ್ಮದ್ ಶಾ ಮಸೂದ್​​ರ ಆತ್ಮ ಹಾಗೂ ಹಾಕಿಕೊಟ್ಟ ಆದರ್ಶಕ್ಕೆ ಎಂದಿಗೂ ತಾವು ದ್ರೋಹ ಎಸಗಲ್ಲ. ತಾಲಿಬಾನ್​ ಕೆಳಗೆ ತಾವು ಯಾವತ್ತೂ ಇರೋದಿಲ್ಲ ಎಂದು ಟ್ವೀಟ್ ಮಾಡೋ ಮೂಲಕ ಅಮ್ರುಲ್ಲಾ ಸಲೆಹ್ ತಾಲಿಬಾನಿಗಳಿಗೆ ಸೆಡ್ಡು ಹೊಡೆದಿದ್ದಾರೆ.

ತಾಲಿಬಾನಿಗಳ ವಿರುದ್ಧ ಹೆಡೆಮುರಿ ಕಟ್ಟೋಕೆ ಸಿದ್ಧತೆ ನಡೆಸಿರೋ ಅಮ್ರುಲ್ಲಾ ಸಲೇಹ್, ತಾವು ಶರಣಾಗೋ ಪ್ರಶ್ನೆಯೇ ಇಲ್ಲ, ನನ್ನ ಮಾತು ಕೇಳೋ ಲಕ್ಷಾಂತರ ಜನರನ್ನ ನಿರಾಸೆಗೊಳಿಸಲ್ಲ ಅಂತಾ ಸ್ಪಷ್ಟಪಡಿಸಿದ್ದಾರೆ. ಇನ್ನೊಂದೆಡೆ, ಪಂಜ್​ಶಿರ್​ನ ವೀರ, ತಾಲಿಬಾನ್​ ವಿರೋಧೀ ಹೋರಾಟಗಾರ ಅಹ್ಮದ್ ಶಾ ಮಸೂದ್​ರ ಪುತ್ರನನ್ನ ಭೇಟಿಯಾದ ಅಮ್ರುಲ್ಲಾ ಸಲೇಹ್, ತಾಲಿಬಾನ್ ವಿರುದ್ಧದ ಹೋರಾಟಕ್ಕೆ ಪರಸ್ಪರ ಸಹಕಾರದ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ ಎನ್ನಲಾಗಿದೆ. ಈ ಸಂಬಂಧಪಟ್ಟಂತೆ, ಇಬ್ಬರೂ ನಾಯಕರು ಜತೆಗಿದ್ದ ಫೋಟೋ ಕೂಡ ಹೊರಬಂದಿದೆ. ಈ ಪ್ರದೇಶದಲ್ಲಿ ತನ್ನದೇ ಆದ ಬಲಿಷ್ಠ ಶಸಸ್ತ್ರ ಪಡೆ ಹೊಂದಿರೋ ಅಹ್ಮದ್ ಮಸೂದ್​, ತಾಲಿಬಾನ್ ವಿರೋಧಿ ಹೋರಾಟಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಇದರ ಬೆನ್ನಲ್ಲೇ ತಮ್ಮದೇ ಆದ ಬಲಾಢ್ಯ ಪಡೆ ಹೊಂದಿರೋ ಅಹ್ಮದ್ ಮಸೂದ್ ಕೂಡ ತಾಲಿಬಾನ್​ ವಿರುದ್ಧ ನಿರ್ಣಾಯಕ ಕದನಕ್ಕೆ ಅಣಿಯಾಗಿದ್ದಾರೆ ಎಂದು ಹೇಳಲಾಗಿದೆ. ಇದಲ್ಲದೇ, ತಾಲಿಬಾನ್ ವಿರುದ್ಧ ಹೋರಾಟಕ್ಕೆ ತಾಲಿಬಾನ್ ವಿರೋಧಿಗಳು, ಆಫ್ಘನ್ ಸೈನಿಕರು ಒಗ್ಗೂಡುವಂತೆ ಅಹ್ಮದ್ ಮಸೂದ್ ಕರೆ ಕೊಟ್ಟಿದ್ದಾರೆ. ತಾಲಿಬಾನ್ ಬಲಿಷ್ಠವಾದ ಬೆನ್ನಲ್ಲೇ ಚದುರಿ ಹೋಗಿದ್ದ ಆಫ್ಘನ್ ಸೈನಿಕರು, ಈಗ ಒಗ್ಗೂಡಿ ಪಂಜ್​ಶೀರ್​ನತ್ತ ಹೆಜ್ಜೆ ಇಟ್ಟಿದ್ದಾರೆ. ತಾಲಿಬಾನ್​​ ಪಾರಮ್ಯಕ್ಕೆ ಬ್ರೇಕ್ ಹಾಕಲು ವೇದಿಕೆ ರೆಡಿಯಾದ ಹಿನ್ನೆಲೆಯಲ್ಲಿ, ತಾಲಿಬಾನ್ ವಿರೋಧಿಗಳು ಇದೀಗ ಪಂಜ್​ಶಿರ್ ಪ್ರಾಂತ್ಯದತ್ತ ಧಾವಿಸುತ್ತಿದ್ದಾರೆ.

ತಾಲಿಬಾನ್ ವಿರುದ್ಧ ರಣಕಹಳೆ ಮೊಳಗಿಸಿರೋ ಅಮ್ರುಲ್ಲಾ ಸಲೇಹ್, ಅಹ್ಮದ್ ಶಾ ಮಸೂದ್​ರ ಪುತ್ರ ಅಹ್ಮದ್ ಮಸೂದ್​​ಗೆ ಆಫ್ಘಾನ್​​​ನ ಮಾಜಿ ರಕ್ಷಣಾ ಸಚಿವ ಬಿಸ್ಮಿಲ್ಲಾ ಖಾನ್ ಮೊಹಮದಿ ಕೂಡ ಸಾಥ್ ಕೊಟ್ಟಿದ್ದಾರೆ. ಹೀಗೆ ತಾಲಿಬಾನಿಗಳ ವಿರುದ್ಧ ನಿರ್ಣಾಯಕ ಸಂಗ್ರಾಮಕ್ಕೆ ಮೂವರು ಬಲಿಷ್ಠ ನಾಯಕರು ಕೈಜೋಡಿಸಿದ್ದಾರೆ. ಇವರೆಲ್ಲಾ ಸೇರಿ ಪಂಜ್​ಶಿರ್​ನಲ್ಲಿ ತಾಲಿಬಾನ್ ವಿರೋಧಿ ಸಂಯುಕ್ತ ಪಡೆ ಸಜ್ಜುಗೊಳಿಸೋಕೆ ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಹೀಗಾಗಿ ಎಲ್ಲವೂ ಮುಗಿದೇ ಹೋಯ್ತು ಅಂತಾ ಅನ್ಕೊಳ್ಳೋದರಲ್ಲಿ ಮತ್ತೆ ಸಿಡಿದೆದ್ದಿದೆ ತಾಲಿಬಾನ್ ವಿರೋಧಿ ರಂಗ.

ಅಫ್ಘಾನಿಸ್ತಾನದ ಇತಿಹಾಸ ನೋಡಿದ್ರೆ ಮೊದಲಿನಿಂದಲೂ ಕ್ಷೋಭೆ..ಕ್ಷೋಭೆ.. 1980ರ ದಶಕದಲ್ಲಿ ರಷ್ಯಾ ಅಫ್ಘನ್​ನಲ್ಲಿ ರುದ್ರಕುಣಿತ ಮಾಡಿದ್ರೆ, 1996ರಲ್ಲಿ ತಾಂಡವವಾಡಿದ್ದು ಇದೇ ತಾಲಿಬಾನಿಗಳು. ಈ ಎರಡೂ ಸಂದರ್ಭಗಳಲ್ಲಿ ಇವರಿಬ್ಬರ ಕೈಗೆ ಸಿಲುಕದೇ ಸಾಹಸ ಪ್ರದರ್ಶಿಸಿದ ಪ್ರಾಂತ್ಯ ಪಂಜ್​ಶಿರ್. ಇದೀಗ ಈ ಬಾರಿಯೂ ತಾಲಿಬಾನಿಗಳಿಗೆ ಚಳ್ಳೆಹಣ್ಣು ತಿನ್ನಿಸಿದೆ ಈ ಪಂಜ್​ಶಿರ್.

ಇತಿಹಾಸದಲ್ಲೇ ಅಭೇದ್ಯ ಕೋಟೆ ಈ ಪಂಜ್​ಶಿರ್!
ಪ್ರಾಕೃತಿಕ ಸಿರಿಯನ್ನ ಮೈದೆಳದುಕೊಂಡ ರಮ್ಯ ವಿಹಾರ ಸ್ಥಳ ಈ ಪಂಜ್​ಶಿರ್. ಬೆಟ್ಟಗುಡ್ಡಗಳು..ನದಿ-ಸರೋವರಗಳು..ಸುತ್ತಲೂ ಹಸಿರು ರಾಶಿ..ಭೂಲೋಕದ ಸ್ವರ್ಗ ಎಂಬಂತೆ ಭಾಸವಾಗೋ ರಮ್ಯ ನೋಟ. ನಮ್ಮ ಕಾಶ್ಮೀರದಂತೆ ಮನಮೋಹಕ ತಾಣಗಳ ಪ್ರಾಂತ್ಯ ಈ ಪಂಜ್​ಶಿರ್. ಅಫ್ಘಾನಿಸ್ತಾನದ ಖ್ಯಾತ ಪ್ರವಾಸಿತಾಣ ಕೂಡ ಹೌದು. ಪಂಜ್​ಶಿರ್ ಎಷ್ಟು ರಮಣೀಯವೋ..ಅಷ್ಟೇ ಕೆಚ್ಚೆದೆ ಸಾಹಸಕ್ಕೆ ಹೆಸರು. ಧೈರ್ಯ- ಸ್ಥೈರ್ಯಕ್ಕೆ ಖ್ಯಾತಿವೆತ್ತಿದೆ ಈ ಪ್ರದೇಶ. ನಿಮಗೆ ಗೊತ್ತಿ ರಲಿ. ಈವರೆಗೂ ಯಾವ ಬಲಾಢ್ಯ ಸೇನೆಗೂ ಮಣಿಯದ ಗಟ್ಟಿಶಾಲಿ ಪ್ರಾಂತ್ಯ ಅಂದ್ರೆ ಪಂಜ್​ಶಿರ್ ಒಂದೇ. 1970-80ರ ದಶಕಗಳಲ್ಲಿ ಇಡೀ ಅಫ್ಘಾನಿಸ್ತಾನದಲ್ಲಿ ಪಾರಮ್ಯ ಮೆರೆದ ರಷ್ಯಾಗೆ, ಸುತ್ತಲೂ ಬೆಟ್ಟಗುಡ್ಡ, ನದಿಗಳ ಪ್ರಾಕೃತಿಕ ರಕ್ಷಣೆ ಹೊಂದಿದ ಈ ಪಂಜ್​​ಶಿರ್​ ಅನ್ನು ವಶಪಡಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲ. ಇದು ಹಾಗಿರಲಿ. ಈ ಹಿಂದೆ 1996ರಿಂದ 2001ರವೆರೆಗೆ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ನಡೆಸಿದ ಮೊದಲ ಅವಧಿ ಆಡಳಿತದ ವೇಳೆಯೂ ರಕ್ತಪಿಪಾಸು ಉಗ್ರರಿಗೆ ಒಲಿಯಲೇ ಇಲ್ಲ ಈ ಪ್ರಾಂತ್ಯ.

ಆಗ ಈ ಪ್ರದೇಶವನ್ನ ವಶಪಡಿಸಿಕೊಳ್ಳಲು ತಾಲಿಬಾನಿಗಳು ಎಷ್ಟೇ ತಂತ್ರಗಾರಿಕೆ ಮೆರೆದರೂ, ಗುಡ್ಡಗಾಡು ಪ್ರದೇಶದಲ್ಲಿ ಗೆರಿಲ್ಲಾ ಯುದ್ಧ ತಂತ್ರಗಳನ್ನ ಮೈಗೂಡಿಸಿಕೊಂಡಿದ್ದ ಪಂಜ್​ಶಿರ್ ನಾರ್ದನ್ ಅಲಿಯನ್ಸ್ ಸೇನೆ, ತಾಲಿಬಾನಿಗಳನ್ನ ಓಡಿಸೋದರಲ್ಲಿ ಸಫಲವಾಯಿತು. ಅಷ್ಟು ಮಾತ್ರವಲ್ಲ..ಈ ಪ್ರದೇಶ ಗೆಲ್ಲಲೇಬೇಕು ಅಂತಾ ರೋಷದಿಂದ ಮುನ್ನುಗ್ಗಿದ ತಾಲಿಬಾನಿಗಳು, ಇಲ್ಲಿ ಅನುಭವಿಸಿದ್ದು ಅಪಾರ ಸಾವು-ನೋವು. ಇಲ್ಲಿ ಪಂಜ್​ಶಿರ್ ಯೋಧರ ಭೀಕರ ದಾಳಿಗೆ ಬಲಿಯಾದ ತಾಲಿಬಾನ್ ಉಗ್ರರ ಸಂಖ್ಯೆ ಎಷ್ಟು ಗೊತ್ತಾ? ಸುಮಾರು 30 ಸಾವಿರ.!

ಪಂಜ್​ಶಿರ್​ಗೆ ರಕ್ಷಾಕವಚದಂತಿದ್ದಾತ, ಸಿಂಹ ಅಂತಾನೇ ಖ್ಯಾತಿ ಪಡೆದಿದ್ದ ಅಗ್ರ ಬಂಡುಕೋರ ಗೆರಿಲ್ಲಾ ನಾಯಕ ಅಹಮದ್ ಶಾ ಮಸೂದ್.! ಚಿಕ್ಕ ವಯಸ್ಸಿನಲ್ಲೇ ಮುಜಾಹಿದ್ಧೀನ್ ಯುದ್ಧ ತರಬೇತಿ ಪಡೆದ ಮಸೂದ್, ರಣತಂತ್ರಗಾರ ಕೂಡ ಹೌದು. ಉನ್ನತ ವ್ಯಾಸಂಗ ಮಾಡಿದರೂ, ಈ ಮಸೂದ್ ತಾಯ್ನಾಡು ರಕ್ಷಣೆಗೆ ಸದಾ ಸಿದ್ಧನಾಗಿದ್ದ. 1979-80ರಲ್ಲಿ ಸೋವಿಯತ್ ರಷ್ಯಾ ಆಕ್ರಮಣವನ್ನ ಯಶಸ್ವಿಯಾಗಿ ತಡೆದ ಕೀರ್ತಿ ಮಸೂದ್​ಗೆ ಸಲ್ಲುತ್ತದೆ. ಆ ಬಳಿಕ 1990ರ ದಶಕದಲ್ಲಿ ಮಿಲಿಟರಿ ಮುಖ್ಯಸ್ಥ ಕೂಡ ಆಗಿದ್ದ ಈತ ಆನಂತರ ಹೆಡೆ ಬಿಚ್ಚಿದ ತಾಲಿಬಾನ್​ ಗೂ ಪರಮ ವಿರೋಧಿ.

ಈ ಹಿಂದೆ ತಾಲಿಬಾನ್​ಗೆ ಪಂಜ್​ಶಿರ್ ಮಣಿಯದಂತೆ ಭದ್ರಕೋಟೆ ಕಟ್ಟಿದ್ದು ಈ ಅಹ್ಮದ್ ಶಾ ಮಸೂದ್. ತಾಲಿಬಾನ್ ಆಡಳಿತದ 1996-2001ರ ಅವಧಿಯಲ್ಲಿ ಪಂಜ್​ಶಿರ್, ತಾಲಿಬಾನಿಗಳ ವಶವಾಗದಂತೆ ಹಿಮ್ಮೆಟ್ಟಿಸಿದ ಧೀರ ಕಮಾಂಡರ್ ಈ ಮಸೂದ್. ಹೀಗಾಗಿಯೇ ತಾಲಿಬಾನಿಗಳಿಗೆ, ಆಲ್​ಕೈದಾ ಉಗ್ರಸಂಘಟನೆಗಳ ಪಾಲಿಗೆ ಮೊದಲ ಶತ್ರುವಾಗಿದ್ದ ಮಸೂದ್ ರನ್ನ ಹೊಡೆದುಹಾಕಲೇಬೇಕು ಅಂತಾ ಪಣತೊಟ್ಟ ಆಲ್​ಕೈದಾ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್, ಸ್ಕೆಚ್ ರೆಡಿಮಾಡಿಯೇ ಬಿಟ್ಟ.

ಅಮೆರಿಕಾ ಅವಳಿ ಗೋಪುರಗಳ ಮೇಲಿನ ದಾಳಿಗೆ ಕೇವಲ 2 ದಿನ ಮುನ್ನ, ಅಂದ್ರೆ 2001ರ ಸೆಪ್ಟೆಂಬರ್ 9ರಂದು ಆಲ್​ಕೈದಾ ಉಗ್ರರು ನಡೆ ಸಿದ ಆತ್ಮಾಹುತಿ ಬಾಂಬ್ ದಾಳಿಗೆ ಅಹ್ಮದ್ ಶಾ ಮಸೂದ್​​ ಬಲಿಯಾಗಬೇಕಾಯಿತು. ಹುತಾತ್ಮರಾದರೂ, ಪಂಜ್​ಶಿರ್​ನಲ್ಲಿ ಈತ ಸದಾ ಹೀರೋ. ಎಷ್ಟರಮಟ್ಟಿಗೆ ಈತ ಪಂಜ್​ಶಿರ್ ಜನಮಾನಸದಲ್ಲಿ ಚಿರಸ್ಥಾಯಿ ಎಂದ್ರೆ, ಸೆಪ್ಟೆಂಬರ್ 9 ಅನ್ನ ಮಸೂದ್ ಡೇ ಎಂದೇ ಶೋಕಾ ಚರಣೆ ಮಾಡಲಾಗುತ್ತಿದೆ. ಇದಾದ ನಂತರ ಮಸೂದ್ ಪುತ್ರ ಅಹ್ಮದ್ ಮಸೂದ್, ಈ ಪ್ರದೇಶದಲ್ಲಿ ಅದೇ ಹಿಡಿತ ಸಾಧಿಸಿದ್ದಾನೆ. ಹಿರಿಯ ಮಸೂದ್ ಬಲಿಯಾದರೂ, ತಾಲಿಬಾನಿಗಳಿಗೆ ಎಂಟ್ರಿ ಕೊಟ್ಟಿಲ್ಲ ಈ ಗಂಡೆದೆ ನೆಲ. ಈಗಲೇ ಅದೇ ಹುರುಪಿನಲ್ಲಿರೋ ಪಂಜ್​ಶಿರ್ ಯುವ ಕರು, ತಾಲಿಬಾನಿಗಳ ವಿರುದ್ಧ ಹೋರಾಟಕ್ಕೆ ಸಜ್ಜಾಗಿನಿಂತಿದ್ದಾರೆ.

ಇದೀಗ ತಾಲಿಬಾನಿಗಳ ವಿರುದ್ಧ ಗೆರಿಲ್ಲಾ ರೀತಿ ಸಮರಕ್ಕೆ ಜೂನಿಯರ್ ಅಹ್ಮದ್ ಮಸೂದ್ ರೆಡಿಯಾಗಿದ್ದಾನೆ. ದೇಶದ ಹಂಗಾಮಿ ಅಧ್ಯಕ್ಷ ಎಂದು ಘೋಷಿಸಿಕೊಂಡ ಅಮ್ರುಲ್ಲಾ ಸಲೇಹ್​ಗೆ ಅಹ್ಮದ್ ಪೂರ್ಣ ಪ್ರಮಾಣದ ಸಾಥ್ ಕೊಟ್ಟಿದ್ದಾನೆ. ತಾಲಿಬಾನ್ ವಿರೋಧಿಗಳನ್ನ ಮರುಸಂಘಟಿಸುತ್ತಿರೋ ಅಹ್ಮದ್ ಮಸೂದ್, ಅಫ್ಘಾನಿ ಸ್ತಾನದಿಂದ ತಾಲಿಬಾನಿಗಳನ್ನ ಮತ್ತೆ ಹೊಡೆದೋಡಿಸೋ ಕನಸು ಕಂಡಿದ್ದಾನೆ. ಇದಕ್ಕೆ ಮೊದಲ ಹೆಜ್ಜೆಯಾಗಿ ಪಂಜ್​ಶಿರ್​ನಿಂದ ರಣಕಹಳೆಯಂತೂ ಮೊಳಗಿದೆ.

ತಾಲಿಬಾನಿಗಳ ಪೂರ್ಣ ಗೆಲುವಿಗೆ ಬ್ರೇಕ್ ಹಾಕಿನಿಂತಿದ್ದಾರೆ ಉಪಾಧ್ಯಕ್ಷ ಅಮ್ರುಲ್ಲಾ ಸಲೇಹ್. ತಾಲಿಬಾನ್ ವಿರೋಧಿಗಳನ್ನ ಮರು ಸಂಘ ಟಿಸುತ್ತಿರೋ ಅಮ್ರುಲ್ಲಾ, ಎಷ್ಟೇ ಜೀವಬೆದರಿಕೆ ಇದ್ರೂ ಡೋಂಟ್ ಕೇರ್ ಅನ್ನದೇ ಮುನ್ನುಗ್ಗುತ್ತಿದ್ದಾರೆ. ಇನ್ನೊಂದೆಡೆ ತಾಲಿಬಾನ್​ ವಿರುದ್ಧ ತಿರುಗಿಬಿದ್ದ ಪ್ರಜೆಗಳು, ತಾಲಿಬಾನಿ ಧ್ವಜ ಇಳಿಸೋಕೆ ಮುಂದಾದ ಘಟನೆ ಜಲಾಲಾಬಾದ್​ನಲ್ಲಿ ನಡೆದಿರೋದು ಅಂತರ್ಯುದ್ಧದ ಭೀತಿ ಸೃಷ್ಟಿಸಿದೆ.

ಕಾಬೂಲ್ ವಶಪಡಿಸಿಕೊಂಡ ಬಳಿಕ ಇಡೀ ದೇಶವೇ ತನ್ನ ಮುಷ್ಠಿಯಲ್ಲಿದೆ ಎಂದೇ ಭಾವಿಸಿತು ತಾಲಿಬಾನ್. ಆದ್ರೆ, ಇದು ಅಂದುಕೊಂಡಷ್ಟು ಸುಲಭವಾಗಿಲ್ಲ ಅಲ್ಲಿನ ಪರಿಸ್ಥಿತಿ. ಏಕೇಂದ್ರೆ ಒಂದೆಡೆ, ಪಂಜ್​ಶಿರ್ ಪ್ರಾಂತ್ಯದಲ್ಲಿ ತಾಲಿಬಾನ್ ವಿರುದ್ಧ ಹೋರಾಟಕ್ಕೆ ಗೆರಿಲ್ಲಾ ಪಡೆ, ಮಾಜಿ ಸೈನಿಕರು ಮರುಸಂಘಟಿತರಾಗುತ್ತಿದ್ರೆ, ಇನ್ನೊಂದೆಡೆ, ತಾಲಿಬಾನ್ ಆಡಳಿತ ವಿರುದ್ಧ ನಾಗರೀಕರೇ ತಿರುಗಿಬೀಳೋ ಸಾಧ್ಯತೆ ದಟ್ಟವಾದಂತಿದೆ. ಇದಕ್ಕೆ ಸಾಕ್ಷಿ ಎಂಬಂತೆ ತಾಲಿಬಾನಿ ಹಿಡಿತದಲ್ಲಿರೋ ಜಲಾಲಾಬಾದ್​​ನಲ್ಲಿ ತಾಲಿಬಾನ್ ಧ್ವಜವನ್ನ ಕೆಳೆಗಿಳಿಸೋಕೆ ನಾಗರೀಕರೇ ಮುಂದಾಗಿದ್ದಾರೆ.

ತಾಲಿಬಾನ್ ಆಡಳಿತಕ್ಕೆ ಬಂದಾಕ್ಷಣ, ಅಲ್ಲಿನ ಜನತೆಗೆ ಸ್ವತಂತ್ರ ಸಿಕ್ಕಿದೆ ಅಂತಾ ಪಾಕ್ ಬೊಗಳೆ ಬಿಟ್ಟಿದ್ದು ಗೊತ್ತೇ ಇದೆ. ಆದ್ರೆ, ಇದೇ ಅಫ್ಘಾನಿ ಸ್ತಾನ ಜನ ತಾಲಿಬಾನ್ ವಿರುದ್ಧ ರೊಚ್ಚಿಗೆದ್ದಿದ್ದಾರೆ. ತಾಲಿಬಾನ್ ಧ್ವಜ ಇಳಿಸೋಕೆ ಮುಂದಾಗಿದ್ದಾರೆ. ಆದ್ರೆ, ಇಲ್ಲೂ ಕ್ರೌರ್ಯ ಮೆರೆದ ತಾಲಿಬಾನಿ ಉಗ್ರರು, ನಾಗರೀಕರ ಮೇಲೆಯೇ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾರೆ. ಇದರಿಂದ ಕನಿಷ್ಟ ಮೂವರು ನಾಗರೀಕರು ಬಲಿಯಾಗಿದ್ದಾರೆ. ಉಗ್ರರು ಏನೇ ಗುಂಡಿನ ದಾಳಿ ನಡೆಸಿದ್ರೂ, ಅಲ್ಲಿನ ಜನರ ಭಾವನೆಗಳನ್ನ ಹತ್ತಿಕ್ಕೋಕೆ ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ತಾಲಿಬಾನ್ ವಿರುದ್ಧ ಜನರೇ ದಂಗೆ ಏಳೋ ಮೂಲಕ ಅಂತರ್ಯುದ್ಧದ ಮುನ್ಸೂಚನೆ ಸಿಕ್ಕಂತಾಗಿದೆ.

ಇನ್ನೊಂದೆಡೆ ರಣೋತ್ಸಾಹಿ ಪಂಜ್​ಶಿರ್​​ನಲ್ಲಿ ತಾಲಿಬಾನ್​​ ವಿರುದ್ಧ ನಾಗರೀಕರು ಬೀದಿಗಿಳಿದಿದ್ದಾರೆ. ಒಂದೆಡೆ, ತಾಲಿಬಾನಿಗಳನ್ನ ಮಣಿ ಸೋಕೆ ಯುವ ಹೋರಾಟಗಾರರು ತರಬೇತಿ ನಿರತರಾದ್ರೆ, ಮತ್ತೊಂದೆಡೆ, ಇಲ್ಲಿನ ಜನ ಕೂಡ ಪ್ರತಿಭಟನೆಗಿಳಿದಿದ್ದಾರೆ. ಇನ್ನ, ತಾಲಿಬಾನ್ ವಿರುದ್ಧ ತೊಡೆತಟ್ಟಿರೋ ಆಫ್ಘಾನ್​ನ ಅಧಿಕೃತ ಉಪಾಧ್ಯಕ್ಷ, ಸ್ವಯಂಘೋಷಿತ ಹಂಗಾಮಿ ಅಧ್ಯಕ್ಷ ಅಮ್ರುಲ್ಲಾ ಸಲೇಹ್ ಹೋರಾಟಕ್ಕೆ ಹೆಸರಾದವರು. ಇದೀಗ ಆಫ್ಘನ್​ ಅನ್ನ ತಾಲಿಬಾನಿಗಳ ರಕ್ಕಸಹಿಡಿತದಿಂದ ರಕ್ಷಿಸಲೇಬೇಕು ಅಂತಾ ಪಣತೊಟ್ಟು ನಿಂತ ಸಲೇಹ್, ಇದಕ್ಕಾಗಿ ಸೇನೆಗಳನ್ನ ಸಂಘಟಿಸುತ್ತಿದ್ದಾರೆ. ಜತೆಗೆ ತಮ್ಮ ತವರುನೆಲ ಪಂಜ್​ಶಿರ್​ನ ಬೆಂಬಲ ಕ್ರೋಢೀಕರಿಸಿಕೊಂಡಿರೋ ಸಲೇಹ್, ಇದೀಗ ತಾಲಿಬಾನ್ ವಿರುದ್ಧ ಹೋರಾಟಕ್ಕೆ ಇತರೆ ದೇಶಗಳ ನೆರವನ್ನ ಕೂಡ ಯಾಚಿಸಿದ್ದಾರೆ. ಪಾಕ್​ ನಡೆ ಖಂಡಿಸುತ್ತಾ ಬಂದಿ ರೋ ಅಮ್ರುಲ್ಲಾ, ಭಾರತದ ಜತೆ ಉತ್ತಮ ಸಂಬಂಧ ಹೊಂದಿರೋದು ಗಮನಾರ್ಹ.

2001ರ ಅಮೆರಿಕಾ ಅವಳಿ ಗೋಪುರ ದಾಳಿ ಬೆನ್ನಲ್ಲೇ ಅಲ್​ಖೈದಾ, ತಾಲಿಬಾನ್​ ನಂತಹ ಉಗ್ರ ಸಂಘಟನೆಗಳ ವಿರುದ್ಧ ದನಿ ಎತ್ತಿದ ಸಲೇಹ್, ಆ ಬಳಿಕ ಸಿಐಎಗೆ ಸಾಥ್ ಕೊಟ್ಟರು. ಆನಂತರ 2004ರಲ್ಲಿ ಅಮೆರಿಕಾ ಬೆಂಬಲದೊಂದಿಗೆ ಅಧಿಕಾರಕ್ಕೇರಿದ ಆಫ್ಘನ್ ಸರ್ಕಾರದ ಗುಪ್ತಚರ ಇಲಾಖೆ ಎನ್​ಡಿಎಸ್​​​ನ ಮುಖ್ಯಸ್ಥರಾದರು. ಈ ಸಮಯದಲ್ಲೇ ವ್ಯವಸ್ಥಿತ ಗುಪ್ತದಳ ಮಾಹಿತಿಜಾಲದ ಮೂಲಕ ಪಾಕ್​ ಗಡಿ ಯುದ್ಧಕ್ಕೂ ಕಣ್ಣಿಟ್ಟರು. ತಾಲಿಬಾನಿಗಳ ಚಲನವಲನಗಳ ಮೇಲೆ ಹದ್ದಿನ ಕಣ್ಣಿಟ್ಟರು.

ಇನ್ನ, ತಾಲಿಬಾನಿಗಳ ವಿರುದ್ಧ ಘರ್ಜಿಸುತ್ತಿರೋ ಅಮ್ರುಲ್ಲಾ ಸಲೇಹ್ ಈ ಹಿಂದಿನಿಂದಲೂ ತಾಲಿಬಾನಿಗಳ ಹಿಟ್​ಲಿಸ್ಟ್​ನಲ್ಲಿದ್ದಾರೆ. ಅದೆ ಷ್ಟೋ ಬಾರಿ ಅಮ್ರುಲ್ಲಾ ಸಲೇಹ್ ಹತ್ಯೆ ಯತ್ನ ನಡೆದಿದೆ. ಅಮೆರಿಕಾ ಕಾಲ್ತೆಗೆತ ಪ್ರಕ್ರಿಯೆಗೂ ಮುನ್ನ ಹಲ ಬಾರಿ ತಾಲಿಬಾನಿ ದಾಳಿಗಳಿಂದ ಕೂದಲೆಳೆಯ ಅಂತರದಲ್ಲಿ ಅಮ್ರುಲ್ಲಾ ಸಲೇಹ್ ಪಾರಾಗಿದ್ದಾರೆ. ಕಳೆದ ಸೆಪ್ಟೆಂಬರ್​​ನಲ್ಲಿ ಅಮ್ರುಲ್ಲಾ ಬೆಂಗಾವಲು ಪಡೆ ಮೇಲೆ ತಾಲಿಬಾನಿ ಉಗ್ರರು ನಡೆಸಿದ ಭೀಕರ ದಾಳಿಯಲ್ಲಿ 10 ಮಂದಿ ಮೃತಪಟ್ಟರು. ಆಗಲೂ ಅಲೇಹ್ ಸ್ವಲ್ಪವೂ ಎದೆಗುಂದಿಲ್ಲ. ದಾಳಿಯಾದ ಕೆಲವೇ ಗಂಟೆಗಳಲ್ಲಿ ಬ್ಯಾಂಡೇಜ್ ಸಮೇತ ವಿಡಿಯೋದಲ್ಲಿ ಪ್ರತ್ಯಕ್ಷವಾದ ಸಲೇಹ್, ತಾನು ಪ್ರತಿಹೋರಾಟ ಕೈಗೊಳ್ಳೋದಾಗಿ ಅಬ್ಬರಿಸಿದ್ದೂ ಇದೆ.

ಒಟ್ಟಾರೆ, ಅಫ್ಘಾನಿಸ್ತಾನ ನೆಲದಲ್ಲಿ ಮತ್ತೆ ಪಾರುಪತ್ಯ ಸಾಧಿಸಿದ ತಾಲಿಬಾನಿಗಳಿಗೆ, ನಿಧಾನವಾಗಿ ಬಿಸಿ ತಗುಲುತ್ತಿದೆ. ಒಂದೆಡೆ ಪಾರಂಪರಾಗತ ಶತ್ರು ಪಂಜ್​ಶಿರ್ ಪಂಚ್ ಕೊಟ್ರೆ, ಜಲಾಲಾಬಾದ್​ ಮುಂತಾದೆಡೆ ಆರಂಭವಾಗಿರೋ ತಾಲಿಬಾನ್ ವಿರೋಧಿ ಹೋರಾಟ ಸದ್ಯದ ತಾಲಿ ಬಾನ್ ಆಡಳಿತಕ್ಕೆ ಹಿನ್ನಡೆ ಅಂತಾನೇ ವ್ಯಾಖ್ಯಾನಿಸಲಾಗ್ತಿದೆ. ಜಗತ್ತಿನೆದುರು ಶಾಂತಿಮಂತ್ರ ಪಠಿಸ್ತಿರೋ ತಾಲಿಬಾನ್​, ಇದೀಗ ವಿರೋಧಿಗಳ ಸದೆಬಡಿಯೋಕೆ ಗನ್ ಕೈಗೆತ್ತಿಕೊಂಡ್ರೆ ಕಷ್ಟ ಕಷ್ಟ.

ಎಲ್ಲವೂ ಸುಸೂತ್ರವಾಗಿ ಅಧಿಕಾರ ಸಿಕ್ಕಿತು ಅಂತಾ ಸಂಭ್ರಮದಲ್ಲಿದ್ದ ತಾಲಿಬಾನಿಗಳಿಗೆ ಕಾಬೂಲ್ ವಶವಾದ ಎರಡೇ ದಿನದಲ್ಲಿ ಡಬಲ್ ಶಾಕ್ ಹೊಡೆದಿದೆ. ಮೊದಲನೇಯದ್ದು ಹಾಲಿ ಉಪಾಧ್ಯಕ್ಷ, ತಾನೇ ಹಂಗಾಮಿ ಅಧ್ಯಕ್ಷ ಅಂತಾ ಹೇಳೋ ಮೂಲಕ ತಾಲಿಬಾನಿ ವಿರೋಧಿ ಪಡೆಗಳನ್ನ ಸಂಘಟಿಸ್ತಿದ್ರೆ, ಜಲಾಲಾಬಾದ್, ಪಂಜ್​ಶಿರ್ ಮುಂತಾದೆಡೆ ಜನರೇ ರೋಡಿಗಿಳಿದು ಪ್ರತಿಭಟನೆ ನಡೆಸಿರೋದು ತಾಲಿಬಾನಿಗಳಿಗೆ ನುಂಗಲಾರದ ತುತ್ತಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ತಾನು ಶಾಂತಿಪ್ರಿಯ ಅಂತಾ ಪೋಸ್ ಕೊಡ್ತಿರೋ ತಾಳಿಬಾನಿಗಳು ಇದೀಗ ದಂಗೆ ಹತ್ತಿಕ್ಕೋಕೆ ಎಲ್ಲಿ ಹಳೆ ವರಸೆ ತೋರುತ್ತಾರೋ ಎಂಬ ಭೀತಿ ಎದುರಾಗಿದೆ.