Good News: ಮಕ್ಕಳಿಗೂ ಬಂತು ಕರೊನಾ ಲಸಿಕೆ! ಸೂಜಿರಹಿತ 'ಜೈಕೋವಿ-ಡಿ' ತುರ್ತುಬಳಕೆಗೆ ಅನುಮೋದನೆ

Good News: ಮಕ್ಕಳಿಗೂ ಬಂತು ಕರೊನಾ ಲಸಿಕೆ! ಸೂಜಿರಹಿತ 'ಜೈಕೋವಿ-ಡಿ' ತುರ್ತುಬಳಕೆಗೆ ಅನುಮೋದನೆ

ಬೆಂಗಳೂರು: ಕರೊನಾ ಮೂರನೇ ಅಲೆಯ ಭೀತಿ ಹೆಚ್ಚುತ್ತಿರುವಾಗ, ಮಕ್ಕಳಿಗೆ ಕರೊನಾ ಲಸಿಕೆ ಬಂದಿರುವ ಶುಭ ಸುದ್ದಿ ಬಂದಿದೆ. ಜೈಡಸ್​ ಕ್ಯಾಡಿಲಾದ ಮೂರು-ಡೋಸ್​​ ಕರೊನಾ ಲಸಿಕೆಗೆ, 12 ವರ್ಷ ಮೇಲ್ಪಟ್ಟವರಿಗೆ ಬಳಸಲು, ಭಾರತದ ಡ್ರಗ್​ ನಿಯಂತ್ರಕರು ಶುಕ್ರವಾರ ಅನುಮೋದನೆ ನೀಡಿದ್ದಾರೆ. ಜೈಕೋವಿ-ಡಿ ಹೆಸರಿನ ಈ ಡಿಎನ್​ಎ ಲಸಿಕೆಯು ಭಾರತದಲ್ಲಿ ಮಕ್ಕಳಿಗಾಗಿ ಲಭ್ಯವಾಗುತ್ತಿರುವ ಮೊದಲ ಕರೊನಾ ಲಸಿಕೆಯಾಗಿದೆ.

ಕ್ಯಾಡಿಲಾ ಹೆಲ್ತ್​ಕೇರ್ ಲಿಮಿಟೆಡ್​ ಕಂಪೆನಿ ಉತ್ಪಾದಿಸುತ್ತಿರುವ ಜೈಕೋವಿ-ಡಿ ಲಸಿಕೆಯನ್ನು ಎಲ್ಲಾ ವಯಸ್ಕರಿಗೆ ಮತ್ತು 12 ವರ್ಷ ಮೇಲ್ಪಟ್ಟ ಮಕ್ಕಳಿಗೆ ತುರ್ತು ಬಳಕೆಗೆ ಅನುಮೋದನೆ ನೀಡಲಾಗಿದೆ. ರಾಷ್ಟ್ರಾದ್ಯಂತ 28,000 ವಾಲೆಂಟಿಯರ್​ಗಳ ಮೇಲೆ ನಡೆಸಿದ ಟ್ರಯಲ್​ಗಳಲ್ಲಿ ಈ ಲಸಿಕೆಗೆ ಶೇ. 66.6 ಪರಿಣಾಮಕಾರಿತ್ವ ಇರುವುದು ಕಂಡುಬಂದಿದೆ ಎಂದು ಕಂಪೆನಿ ತಿಳಿಸಿದೆ.

ಕ್ಯಾಡಿಲಾ ಕಂಪೆನಿಯು ವರ್ಷಕ್ಕೆ 100 ರಿಂದ 120 ಮಿಲಿಯನ್​ ಡೋಸ್​ಗಳನ್ನು ಉತ್ಪಾದಿಸುವ ಗುರಿ ಹೊಂದಿದ್ದು, ಲಸಿಕೆಯ ಶೇಖರಣೆಯನ್ನು ಆರಂಭಿಸಿದೆ. ಇದು ಜಗತ್ತಿನ ಮೊದಲ ಪ್ಲಾಸ್ಮಿಡ್​ ಡಿಎನ್​ಎ ಲಸಿಕೆಯಾಗಿದ್ದು, ಭಾರತದಲ್ಲಿ ಬಳಕೆಗೆ ಅನುಮೋದನೆ ಪಡೆದಿರುವ 6ನೇ ಕರೊನಾ ಲಸಿಕೆಯಾಗಿದೆ.

ಜೈಕೋವಿ-ಡಿ ಲಸಿಕೆಯು ಡೆಲ್ಟಾ ರೂಪಾಂತರಿ ಸೇರಿದಂತೆ ಕರೊನಾ ವೈರಸ್​​ನ ಹೊಸ ರೂಪಾಂತರಿಗಳ ವಿರುದ್ಧವೂ ಪರಿಣಾಮಕಾರಿಯಾಗಿದೆ. ಈ ಲಸಿಕೆಯನ್ನು ಸಾಂಪ್ರದಾಯಿಕವಾಗಿ ಬಳಸುವ ಸಿರಿಂಜ್​ಗಳ ಬದಲಿಗೆ ಸೂಜಿರಹಿತ ಅಪ್ಲಿಕೇಟರ್​ನ ಮೂಲಕ ನೀಡಲಾಗುತ್ತದೆ ಎಂದು ಕ್ಯಾಡಿಲಾ ಕಂಪೆನಿ ತಿಳಿಸಿರುವುದಾಗಿ ವರದಿಯಾಗಿದೆ. (ಏಜೆನ್ಸೀಸ್)