ಬಾಂಗ್ಲಾದೇಶದ ಜೈಲಿನಲ್ಲಿದ್ದ 135 ಭಾರತೀಯ ಮೀನುಗಾರರು ವಾಪಸ್
ಕಾಕದ್ವೀಪ್, ಅ. 10- ಕಡಲ ನಿಯಮ ಉಲ್ಲಂಘಿಸಿ ಬಾಂಗ್ಲಾದೇಶದ ಜೈಲಿನಲ್ಲಿ ಒಂದು ವರ್ಷಕ್ಕೂ ಹೆಚ್ಚು ಕಾಲ ಶಿಕ್ಷೆ ಅನುಭವಿಸಿದ ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಒಟ್ಟು 135 ಮೀನುಗಾರರು ಭಾರತಕ್ಕೆ ವಾಪಸ್ಸಾಗಿದ್ದಾರೆ.
ಕಳೆದ ವರ್ಷ 2021 ಜೂನ್‍ನಲ್ಲಿ ಬಂಗಾಳಕೊಲ್ಲಿ ಸಮುದ್ರದಲ್ಲಿ ಉಂಟಾದ ಹವಾಮಾನ ವ್ಯಪರಿತ್ಯದಿಂದ ಭಾರತೀಯ ಮೀನುಗಾರರ 8 ಬೋಟ್‍ಗಳು ಬಾಂಗ್ಲಾದೇಶದ ಜಲವನ್ನು ಪ್ರವೇಶಿಸಿದ್ದವು.
ಬಾರ್ಡರ್ ಗಾರ್ಡ್ ಬಾಂಗ್ಲಾದೇಶ ಪಡೆ ಅವರನ್ನು ತಡೆದು ಖುಲ್ನಾದ ಮೊಂಗ್ಲಾ ಬಂದರಿನಲ್ಲಿ ಸ್ಥಳೀಯ ಪೊಲೀಸರಿಗೆ ಹಸ್ತಾಂತರಿಸಿ ಜೈಲಿಗೆ ಕಳುಹಿಸಲಾಗಿತ್ತು.
ಕೇಂದ್ರ ಗೃಹ ಸಚಿವಾಲಯ ಬಾಂಗ್ಲಾದೇಶದೊಂದಿಗೆ ವಿವಿಧ ಹಂತಗಳಲ್ಲಿ ಸಂಘಟಿತ ಪ್ರಯತ್ನ ಅವರನ್ನು ಅಕ್ಟೋಬರ್ 3 ರಂದು ಬಿಡುಗಡೆ ಮಾಡಲಾಗಿತ್ತು ಎಂದು ಸುಂದರಬನ್ ಸಾಮುದ್ರಿಕ್ ಮತ್ಸ್ಯಾ ಜಿಬಿ ಶ್ರಮಿಕ ಒಕ್ಕೂಟದ ಕಾರ್ಯದರ್ಶಿ ಸತಿನಾಥ್ ಪಾತ್ರ ತಿಳಿಸಿದ್ದಾರೆ.
ಅಂತಿಮವಾಗಿ ನಿನ್ನೆ ಕಾಕದ್ವೀಪ್ ಮತ್ತು ನಮ್ಖಾನಾದ ವಿವಿಧ ಗ್ರಾಮಗಳ ಮೀನುಗಾರರು ತಮ್ಮ ಮನೆಗೆ ಮರಳಿದ್ದಾರೆ. ಇನ್ನು 30 ಮೀನುಗಾರರಿದ್ದ ಇನ್ನೂ ಎರಡು ಬೋಟ್‍ಗಳು ಬಾಂಗ್ಲಾದೇಶದಲ್ಲಿವೆ. ಅವರ ವಾಪಸ್ ಕರೆಸಿಕೊಳ್ಳಲು ಪ್ರಯತ್ನ ನಡೆಯುತ್ತಿವೆ ಎಂದು ಅವರು ಹೇಳಿದ್ದಾರೆ.