ನಳಿನ್‌ಕುಮಾರ್ ಒಬ್ಬ ಭಯೋತ್ಪಾದಕ, ಆತನ ಮಾತಿಗೆ ಮೂರು ಕಾಸಿನ ಕಿಮ್ಮತ್ತಿಲ್ಲ: ಸಿದ್ದರಾಮಯ್ಯ ಕಿಡಿ
ಚಿತ್ರದುರ್ಗ, ನವೆಂಬರ್ 29: ಭಯೋತ್ಪಾದನೆಗೆ ಬಡ್ತಿ ನೀಡುವ ಪಕ್ಷ ಕಾಂಗ್ರೆಸ್ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಾಂಗ್ರೆಸ್ ಪಕ್ಷವನ್ನು ಟೀಕಿಸಿದ್ದರು. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, "ನಳಿನ್ ಕುಮಾರ್ ಕಟೀಲ್ ಒಬ್ಬ ಭಯೋತ್ಪಾದಕ, ಆತನ ಮಾತಿಗೆ ಮೂರು ಕಾಸಿನ ಕಿಮ್ಮತ್ತಿಲ್ಲ," ಎಂದು ತಿರುಗೇಟು ನೀಡಿದ್ದಾರೆ.
ಚಿತ್ರದುರ್ಗ ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, "ಬಿಜೆಪಿ ಪಕ್ಷವನ್ನು ಕಿತ್ತೊಗೆಯಲು ರಾಜ್ಯದ ಜನ ತೀರ್ಮಾನ ಮಾಡಿದ್ದಾರೆ. ಇನ್ನು ಮಾಜಿ ಸಿಎಂ ಯಡಿಯೂರಪ್ಪ ವಿಧಾನಸಭೆ ಚುನಾವಣೆಯಲ್ಲಿ 140 ಸೀಟು ಗೆಲ್ಲುತ್ತೇವೆ ಎಂದಿದ್ದಾರೆ, 140 ಸ್ಥಾನ ಗೆಲ್ಲಲು ಮತಗಳೇನು ಅವರ ಜೇಬಿನಲ್ಲಿದ್ದಾವಾ?," ಎಂದು ಪ್ರಶ್ನಿಸಿದರು.
"ಮತ್ತೊಂದು ಕಡೆ ನಾವು A- ಟೀಂ, B-ಟೀಂ ಅಲ್ಲ ಎಂಬ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಎಲ್ಲಾ ಕ್ಷೇತ್ರಗಳಲ್ಲಿ ಏಕೆ ಕಣಕ್ಕೆ ಇಳಿಸಿಲ್ಲ, ಉಳಿದ ಕಡೆ ಈಗ ಅವರು ಏನು ಮಾಡುತ್ತಾರೆ," ಎಂದು ಎಚ್‌ಡಿಕೆ ಹೇಳಿಕೆ ಟಾಂಗ್ ನೀಡಿದರು.
ಇದಕ್ಕೂ ಮೊದಲು ಚಿತ್ರದುರ್ಗ ನಗರದ ಖಾಸಗಿ ಹೋಟೆಲ್‌ನಲ್ಲಿ ಏರ್ಪಡಿಸಿದ್ದ ವಿಧಾನ ಪರಿಷತ್ ಅಭ್ಯರ್ಥಿ ಬಿ. ಸೋಮಶೇಖರ್ ಪರವಾಗಿ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, "ಕಾಂಗ್ರೆಸ್ ಹೈಕಮಾಂಡ್ ಆದೇಶದಂತೆ ಬಿ. ಸೋಮಶೇಖರ್‌ರನ್ನು ಚಿತ್ರದುರ್ಗ- ದಾವಣಗೆರೆ ವಿಧಾನ ಪರಿಷತ್ ಕ್ಷೇತ್ರದ ಅಭ್ಯರ್ಥಿಯಾಗಿ ಘೋಷಣೆ ಮಾಡಿದೆ. ಅವರು ಗ್ರಾಮ ಪಂಚಾಯಿತಿ ಮಟ್ಟದಿಂದ ಬೆಳೆದು ಬಂದಿದ್ದಾರೆ. ಬಿ. ಸೋಮಶೇಖರ್‌ಗೆ ರಾಜಕೀಯದಲ್ಲಿ ಸಾಕಷ್ಟು ಅನುಭವ ಇದೆ. ಹಾಗಾಗಿ ಸೋಮಶೇಖರ್ ಗೆಲುವಿಗೆ ಪ್ರತಿಯೊಬ್ಬರೂ ಶ್ರಮಿಸಬೇಕು," ಎಂದರು.
"ಇಪ್ಪತ್ತು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಬಿಜೆಪಿ ಹಾಗೂ ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡಿದ್ದಾರೆ. ಒಳ ಒಪ್ಪಂದದಿಂದ ಚಿತ್ರದುರ್ಗದಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ. ಇಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ನೆರ ಹಣಾಹಣಿ ಇದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಕಾಂಗ್ರೆಸ್ ಸದಸ್ಯರ ಸಂಖ್ಯೆ ಜಾಸ್ತಿ ಇದೆ. ಜೆಡಿಎಸ್ ಬೆರಳೆಣಿಕೆಯಷ್ಟು ಇದ್ದಾರೆ. ಇಲ್ಲಿ ಕಾಂಗ್ರೆಸ್ ಸದಸ್ಯರು ಹೆಚ್ಚು. ಅಂದಮೇಲೆ ನೂರಕ್ಕೆ ನೂರು ಗೆಲ್ಲುವರು ಯಾರು? ಕಾಂಗ್ರೆಸ್ ಅಲ್ಲವೇ," ಎಂದು ಹೇಳಿದರು.
ಇನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿಕೆಗೆ ಕಾಂಗ್ರೆಸ್ ಭಾರೀ ಆಕ್ರೋಶ ವ್ಯಕ್ತಪಡಿಸಿದ್ದು, ಅವನು ಅಸಂಬದ್ಧ ವಿಚಾರ ಹೇಳುತ್ತಾನೆ. ಬಿಜೆಪಿಯಲ್ಲಿ ಕೆಲವರು ಅನಗತ್ಯ ಗೊಂದಲ ಸೃಷ್ಟಿಸುವವರಿದ್ದಾರೆ. ಬಿಜೆಪಿಯಲ್ಲಿ ಗೊಂದಲವಿದೆ, ನಮ್ಮ ಪಕ್ಷದಲ್ಲಿ ಗೊಂದಲವಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಗರಂ ಆದರು.
ಈ ಕಾರ್ಯಕ್ರಮದಲ್ಲಿ ಚುನಾವಣಾ ವೀಕ್ಷಕರಾದ ಎಚ್.ಎಂ. ರೇವಣ್ಣ, ಮಾಜಿ ಸಚಿವರಾದ ರಮಾನಾಥ ರೈ, ಎಚ್. ಆಂಜನೇಯ, ಡಿ. ಸುಧಾಕರ್, ಮಾಜಿ ಸಂಸದ ಬಿ.ಎನ್. ಚಂದ್ರಪ್ಪ, ಮಾಜಿ ಶಾಸಕರಾದ ಬಿ.ಜಿ. ಗೋವಿಂದಪ್ಪ, ಎ.ವಿ. ಉಮಾಪತಿ, ತಿಪ್ಪೇಸ್ವಾಮಿ ಹಾಗೂ ಕಾಂಗ್ರೆಸ್ ಮುಖಂಡರು ಭಾಗವಹಿಸಿದ್ದರು.
ಸಿದ್ದರಾಮಯ್ಯ ಪ್ರಯಾಣಿಸುತ್ತಿದ್ದ ಹೆಲಿಕಾಫ್ಟರ್ ತುರ್ತು ಭೂಸ್ಪರ್ಶ
ಹವಾಮಾನ ವೈಪರೀತ್ಯ ಹಿನ್ನೆಲೆಯಲ್ಲಿ ಭಾನುವಾರ ಸಂಜೆ ಮಾಜಿ ಸಿಎಂ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಅನ್ನು ಚಿತ್ರದುರ್ಗದಲ್ಲಿ ತುರ್ತು ಭೂಸ್ಪರ್ಶ ಮಾಡಲಾಯಿತು.
ಚಿತ್ರದುರ್ಗದಲ್ಲಿ ಕಾರ್ಯಕ್ರಮ ಮುಗಿಸಿ ಮುಂದಿನ ಕಾರ್ಯಕ್ರಮಕ್ಕೆ ತುಮಕೂರಿಗೆ ಹೆಲಿಕಾಪ್ಟರ್ನಲ್ಲಿ ಸಿದ್ದರಾಮಯ್ಯ ಪ್ರಯಾಣ ಬೆಳೆಸಿದ್ದರು. ಆದರೆ ಹವಾಮಾನ ವೈಪರೀತ್ಯದ ಕಾರಣದಿಂದಾಗಿ ಹಾರಿದ ಕೆಲವೇ ಸಮಯದಲ್ಲೇ ಮತ್ತೆ ಹೆಲಿಕಾಪ್ಟರ್ ಚಿತ್ರದುರ್ಗದ ಹೆಲಿಪ್ಯಾಡ್ಗೆ ಮರಳಿ ಬಂದು ಇಳಿಯಿತು.