ಅಂಗನವಾಡಿ ಕಾರ್ಯಕರ್ತೆಯರಿಗೆ ಸರ್ಕಾರ ಭರವಸೆ : ಮುಷ್ಕರ ವಾಪಸ್
ಬೆಂಗಳೂರು : ಮೂರು ದಿನಗಳಿಂದ ಧರಣಿ ನಡೆಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸಂಘಟನೆಯ ಬೇಡಿಕೆಗಳನ್ನ ರಾಜ್ಯ ಸರ್ಕಾರ ಪರಿಶೀಲಿಸುವ ಭರವಸೆ ನೀಡಿದೆ.
ಅದ್ರಂತೆ, ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಅವರು ಸರಕಾರದ ಪರವಾಗಿ ಬೇಡಿಕೆಗಳನ್ನ ಆಲಿಸಿದರು.
ಇದಲ್ಲದೆ, ಅಂಗನವಾಡಿ ಕಾರ್ಯಕರ್ತೆಯರಿಗೆ ನೀಡುವ ವಿವಿಧ ಭತ್ಯೆಗಳನ್ನ ಕಾಲಕ್ಕೆ ತಕ್ಕಂತೆ ಪರಿಷ್ಕರಿಸುವುದನ್ನ ಗಮನಕ್ಕೆ ತೆಗೆದುಕೊಳ್ಳಲಾಗುವುದು. ಜತೆಗೆ ಅಂಗನವಾಡಿ ಕೇಂದ್ರಗಳಿಗೆ ಬೇಕಾದ ಪರಿಕರಗಳನ್ನ ಪೂರೈಸಲು ಕ್ರಮ ಕೈಗೊಳ್ಳಲಾಗುವುದು ಎಂದು ನಿಯೋಗಕ್ಕೆ ತಿಳಿಸಿದರು.
ರಾಜ್ಯದಲ್ಲಿ 1.36 ಲಕ್ಷ ಅಂಗನವಾಡಿ ಕಾರ್ಯಕರ್ತೆಯರು/ಸಹಾಯಕಿಯರು ಇದ್ದಾರೆ. ಇವರ ಉಳಿದ ಬೇಡಿಕೆಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದು ಅವರು ಹೇಳಿದರು. ಈ ಭರವಸೆ ಸಿಕ್ಕಿದ ಹಿನ್ನೆಲೆಯಲ್ಲಿ ಮುಷ್ಕರ ಕೈಬಿಡುವ ಭರವಸೆಯನ್ನು ಸಂಘಟನೆಯ ಮುಖ್ಯಸ್ಥೆ ಪ್ರೇಮಾ ಅವರು ಸಚಿವರುಗೆ ನೀಡಿದರು. ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಮಂಜುಳಾ ಉಪಸ್ಥಿತರಿದ್ದರು.