ಗುಜರಾತ್ | ಚೆಕ್‌ ಡ್ಯಾಮ್‌ಗೆ ಪ್ರಧಾನಿ ತಾಯಿ ಹೆಸರು ನಾಮಕರಣ

ಗುಜರಾತ್ | ಚೆಕ್‌ ಡ್ಯಾಮ್‌ಗೆ ಪ್ರಧಾನಿ ತಾಯಿ ಹೆಸರು ನಾಮಕರಣ

ರಾಜ್‌ಕೋಟ್‌: ಗುಜರಾತಿನ ರಾಜ್‌ಕೋಟ್‌ನ ಹೊರವಲಯದಲ್ಲಿ ನಿರ್ಮಿಸಲಾಗುತ್ತಿರುವ ಚೆಕ್‌ಡ್ಯಾಮ್‌ಗೆ ಪ್ರಧಾನಿ ನರೇಂದ್ರ ಮೋದಿ ಅವರ ದಿವಂಗತ ತಾಯಿ ಹೀರಾಬೆನ್‌ ಅವರ ಹೆಸರನ್ನು ನಾಮಕರಣ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ಧಾರೆ.

ಗಿರ್‌ ಗಂಗಾ ಪರಿವಾರ್ ಟ್ರಸ್ಟ್‌ ವತಿಯಿಂದ ರಾಜ್‌ಕೋಟ್‌-ಕಲವಾಡ ರಸ್ತೆಯ ವಗುಡಾಡ್‌ ಗ್ರಾಮದ ಬಳಿ ನ್ಯಾರಿ ನದಿಗೆ ₹15 ಲಕ್ಷ ವೆಚ್ಚದಲ್ಲಿ ಚೆಕ್ ಡ್ಯಾಮ್ ನಿರ್ಮಿಸಲಾಗುತ್ತಿದೆ. ಪ್ರಧಾನಿ ತಾಯಿ ಅವರ ನೆನಪಿಗಾಗಿ ಹಾಗೂ ಗೌರವ ಸಲ್ಲಿಸುವ ಸದುದ್ದೇಶದಿಂದ ಚೆಕ್‌ ಡ್ಯಾಮ್‌ಗೆ ಹೀರಾಬಾ ಸ್ಮೃತಿ ಸರೋವರ ಎಂದು ಹೆಸರಿಸಲು ನಿರ್ಧರಿಸಿದ್ದೇವೆ. ಇದು ಇತರರಿಗೂ ಪ್ರೇರಣೆ ನೀಡಲಿದೆ ಎಂದು ಟ್ರಸ್ಟ್ ಅಧ್ಯಕ್ಷ ದಿಲೀಪ್ ಸಖಿಯಾ ತಿಳಿಸಿದ್ದಾರೆ.

ಸ್ಥಳೀಯ ಶಾಸಕಿ ದರ್ಶಿತಾ ಶಾ ಮತ್ತು ರಾಜ್‌ಕೋಟ್ ಮೇಯರ್ ಪ್ರದೀಪ್‌ ದಾವ್ ಅವರ ಸಮ್ಮುಖದಲ್ಲಿ ಬುಧವಾರ ಅಣೆಕಟ್ಟು ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಲಾಗಿದ್ದು, ಇನ್ನು ಎರಡು ವಾರಗಳಲ್ಲಿ ಚೆಕ್‌ಡ್ಯಾಮ್ ಪೂರ್ಣಗೊಳ್ಳಲಿದ್ದು, ಅಂದಾಜು 2.5ಕೋಟಿ ಲೀಟರ್ ನೀರನ್ನು ಸಂಗ್ರಹಿಸುವ ಸಾಮರ್ಥ್ಯ ಹೊಂದಿದೆ. ಅಣೆಕಟ್ಟು 400 ಅಡಿ ಉದ್ದ ಮತ್ತು 150 ಅಡಿ ಅಗಲವಿದ್ದು, ಒಮ್ಮೆ ಪೂರ್ಣ ಪ್ರಮಾಣದಲ್ಲಿ ನೀರು ಶೇಖರಿಸಿದರೆ ಸುಮಾರು 9 ತಿಂಗಳವರೆಗೂ ನೀರು ಬತ್ತುವುದಿಲ್ಲ. ಅಲ್ಲದೇ ಈ ಚೆಕ್‌ ಡ್ಯಾಮ್‌ನಿಂದ ಅಂತರ್ಜಲ ಮರು ಪೂರೈಕೆ ಆಗಲಿದ್ದು, ಸ್ಥಳೀಯ ರೈತರಿಗೆ ಹಾಗೂ ಗ್ರಾಮಸ್ಥರಿಗೆ ಸಹಾಯವಾಗಲಿದೆ ಎಂದು ಹೇಳಿದ್ದಾರೆ.