ಧಾರವಾಡ-ಬೆಳಗಾವಿ ನೇರ ರೈಲು ಯೋಜನೆಗೆ ಆಡಳಿತಾತ್ಮಕ ಒಪ್ಪಿಗೆ

ಧಾರವಾಡ-ಬೆಳಗಾವಿ ನೇರ ರೈಲು ಯೋಜನೆಗೆ ಆಡಳಿತಾತ್ಮಕ ಒಪ್ಪಿಗೆ

ಧಾರವಾಡ, ಡಿಸೆಂಬರ್ 24;

-ಧಾರವಾಡ ನಡುವಿನ ನೇರ ರೈಲು ಮಾರ್ಗ ಯೋಜನೆಗೆ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಆಡಳಿತಾತ್ಮಕ ಒಪ್ಪಿಗೆ ನೀಡಿದೆ.ಯೋಜನೆಯ ವೆಚ್ಚ 927.4 ಕೋಟಿಯಾಗಿದೆ.

ಉಭಯ ನಗರಗಳ ನಡುವಿನ ರೈಲು ಮಾರ್ಗ ಯೋಜನೆ ಪೂರ್ಣಗೊಂಡರೆ ಸಂಚಾರದ ಅವಧಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಲಿದೆ. ಈ ರೈಲು ಯೋಜನೆ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ದಿ. ಸುರೇಶ್ ಅಂಗಡಿ ಕನಸಾಗಿತ್ತು. 73 ಕಿ. ಮೀ. ರೈಲು ಯೋಜನೆಯು 11 ನಿಲ್ದಾಣಗಳನ್ನು ಒಳಗೊಂಡಿದೆ. ಇವುಗಳಲ್ಲಿ ಇತಿಹಾಸ ಪ್ರಸಿದ್ಧ ಕಿತ್ತೂರು ಸಹ ಸೇರಿದೆ. ಧಾರವಾಡ-ಬೆಳಗಾವಿ ನಡುವಿನ ಪ್ರಸ್ತುತ ಪ್ರಯಾಣದ ಅವಧಿ 3 ಗಂಟೆ. ಈ ನೇರ ಮಾರ್ಗ ಯೋಜನೆಯಿಂದ ಪ್ರಯಾಣದ ಅವಧಿ 1 ಗಂಟೆಗೆ ಇಳಿಕೆಯಾಗಲಿದೆ. ಧಾರವಾಡ-ಬೆಳಗಾವಿ ನೇರ ರೈಲು ಮಾರ್ಗ ಯೋಜನೆಗೆ ಈಗಾಗಲೇ ಸಮೀಕ್ಷೆ ಪೂರ್ಣಗೊಂಡಿದೆ. ಒಟ್ಟು 2 ಬಾರಿ ಯೋಜನೆಗೆ ಸಮೀಕ್ಷೆ ನಡೆಸಲಾಗಿದೆ. ಕೇಂದ್ರ ಸರ್ಕಾರ ಮೊದಲ ಸಮೀಕ್ಷೆಗೆ ಒಪ್ಪಿಗೆ ಕೊಟ್ಟಿತ್ತು. ಆದರೆ ಭೂ ಸ್ವಾಧೀನದ ವಿಚಾರದಲ್ಲಿ ಉಂಟಾಗಿರುವ ಗೊಂದಲದ ಕಾರಣ ಮತ್ತೊಮ್ಮೆ ಸಮೀಕ್ಷೆ ನಡೆಸಲಾಗಿದೆ.

ನೇರ ರೈಲು ಮಾರ್ಗ ಯೋಜನೆಗಾಗಿ ರೈತರ ಕೃಷಿ ಭೂಮಿ ಬಳಕೆ ಮಾಡಿಕೊಳ್ಳುವುದು ವಿವಾದಕ್ಕೆ ಕಾರಣವಾಗಿತ್ತು. ರಾಜ್ಯಸಭಾ ಸದಸ್ಯರಾದ ಈರಣ್ಣ ಕಡಾಡಿ ಸರ್ಕಾರಿ ಭೂಮಿ ರೈತರ ಜಮೀನಿನ ಪಕ್ಕದಲ್ಲಿದೆ ಅದನ್ನು ಬಳಕೆ ಮಾಡಿಕೊಳ್ಳಬಹುದು ಎಂದು ಹೇಳಿದ್ದರು.

ಧಾರವಾಡ ಕಡೆಯಿಂದ ಭೂ ಸ್ವಾಧೀನ ಕಾರ್ಯ ಪೂರ್ಣಗೊಂಡಿತ್ತು. ಆದರೆ ಬೆಳಗಾವಿ ಬಳಿಯ ಕೆಕೆ ಕೊಪ್ಪ ಬಳಿ ಯೋಜನೆಗಾಗಿ ರೈತರು ಭೂಮಿ ಕಳೆದುಕೊಳ್ಳಬೇಕಾಗುತ್ತದೆ ಇದರ ಬದಲು ಪಕ್ಕದ ಸರ್ಕಾರಿ ಭೂಮಿ ಬಳಕೆ ಮಾಡಿಕೊಂಡರೆ ಯೋಜನೆಯ ಆರ್ಥಿಕ ಹೊರೆಯು ಕಡಿಮೆಯಾಗುತ್ತದೆ ಎಂಬ ಅಭಿಪ್ರಾಯವ್ಯಕ್ತವಾದ ಹಿನ್ನಲೆ ಮರು ಸಮೀಕ್ಷೆ ನಡೆಸಲಾಗಿತ್ತು.

ಒಟ್ಟು 11 ನಿಲ್ದಾಣಗಳು ಬೆಳಗಾವಿ-ಧಾರವಾಡ ನೇರ ರೈಲು ಮಾರ್ಗ 11 ನಿಲ್ದಾಣಗಳನ್ನು ಒಳಗೊಂಡಿದೆ. ಬೆಳಗಾವಿ ನಗರ ರೈಲು ನಿಲ್ದಾಣದಿಂದ ಹೊರಡುವ ರೈಲು ದೇಸೋರ, ಕೆ. ಕೆ. ಕೊಪ್ಪ, ಹಿರೇಬಾಗೇವಾಡಿ, ಎಂ. ಕೆ. ಹುಬ್ಬಳ್ಳಿ, ಹುಲಿಕಟ್ಟಿ, ಚನ್ನಮ್ಮನ ಕಿತ್ತೂರು, ತೇಗೂರ, ಮಮ್ಮಿಗಟ್ಟಿ,ಕ್ಯಾರಕೊಪ್ಪ ಮೂಲಕ ಧಾರವಾಡಕ್ಕೆ ತಲುಪಲಿದೆ.

ರಾಷ್ಟ್ರೀಯ ಹೆದ್ದಾರಿ ಮೂಲಕ ಬೆಳಗಾವಿ-ಧಾರವಾಡ ನಡುವಿನ ಅಂತರ 75 ಕಿ. ಮೀ. ಯಾಗಿದೆ. ಬೆಳಗಾವಿ-ಲೋಂಡಾ ಮೂಲಕ ರೈಲು ಸಂಚಾರ ನಡೆಸಲು 130 ಕಿ. ಮೀ. ಆಗುತ್ತದೆ. ಈ ಪ್ರಸ್ತಾವಿತ ನೇರ ರೈಲು ಮಾರ್ಗ ಯೋಜನೆಯಿಂದಾಗಿ ಉಭಯ ನಗರಗಳ ನಡುವಿನ ಸಂಚಾರದ ಅವಧಿ 73 ಕಿ. ಮೀ.ಗೆ ಇಳಿಕೆಯಾಗಲಿದೆ.

927.40 ಕಿ. ಮೀ. ವೆಚ್ಚ ಬೆಳಗಾವಿ-ಧಾರವಾಡ ನಡುವಿನ ನೇರ ರೈಲು ಮಾರ್ಗ ಯೋಜನೆಯ ವೆಚ್ಚ 927.40 ಕೋಟಿ ರೂ. ಆಗಿದೆ. ಸಿವಿಲ್ ಇಂಜಿನಿಯರಿಂಗ್ ಕಾಮಗಾರಿಗೆ 755.69 ಕೋಟಿ, ಎಲೆಕ್ಟ್ರಿಕ್‌ ಕಾಮಗಾರಿಗಾಗಿ 67.79 ಕೋಟಿ ರೂ. ಮತ್ತು ಸಿಗ್ನಲ್ ಕಾಮಗಾರಿಗಳಿಗೆ 77.99 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ.

ಉಭಯ ನಗರಗಳ ನಡುವಿನ ನೇರ ರೈಲು ಮಾರ್ಗದ ಯೋಜನೆಗೆ 827.78 ಎಕರೆ ಭೂಮಿ ಬೇಕಾಗಬಹುದು ಎಂದು ಮೊದಲು ಅಂದಾಜಿಸಲಾಗಿತ್ತು. ಧಾರವಾಡದ ವ್ಯಾಪ್ತಿಯಲ್ಲಿ 255.93 ಎಕರೆ ಮತ್ತು ಬೆಳಗಾವಿ ಜಿಲ್ಲೆಯ ವ್ಯಾಪ್ತಿಯಲ್ಲಿ 601 ಎಕರೆ ಭೂಮಿ ಅಗತ್ಯವಿದೆ ಎಂದು ಮೊದಲ ಸಮೀಕ್ಷೆ ಹೇಳಿತ್ತು. ನೈಋತ್ಯ ರೈಲ್ವೆ ಕೆಕೆ ಕೊಪ್ಪ ಬಳಿ ಮರು ಸಮೀಕ್ಷೆ ನಡೆಸಿದ್ದು, ಎಷ್ಟು ಭೂಮಿ ಅಗತ್ಯವಿದೆ? ಎಂಬ ಬಗ್ಗೆ ಮಾಹಿತಿ ಸಿಕ್ಕಿಲ್ಲ.

ಯೋಜನೆಗೆ ಅಗತ್ಯವಿರುವ ಭೂಮಿಯ ಸ್ವಾಧೀನ ಕಾರ್ಯ ಧಾರವಾಡ ಜಿಲ್ಲಾ ವ್ಯಾಪ್ತಿಯಲ್ಲಿ ಪೂರ್ಣಗೊಂಡಿದೆ. ಬೆಳಗಾವಿ ಭಾಗದಲ್ಲಿ ಸ್ವಾಧೀನ ಕಾರ್ಯ ನಡೆಯಬೇಕಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು 50:50 ಅನುಪಾತದಲ್ಲಿ ಅನುದಾನ ಹಂಚಿಕೆ ಮಾಡಿಕೊಂಡು ಯೋಜನೆ ಕೈಗೆತ್ತಿಕೊಳ್ಳಲಿವೆ.