ಭಾರತದ ಪರಂಪರೆ ದುರ್ಬಲಗೊಳಿಸುವ ಯತ್ನ: ಬಿಜೆಪಿ ವಿರುದ್ಧ ಸೋನಿಯಾ ಗಾಂಧಿ ವಾಗ್ದಾಳಿ

ನವದೆಹಲಿ: 'ದ್ವೇಷ ಮತ್ತು ಪೂರ್ವಗ್ರಹಪೀಡಿತವಾಗಿ ನೆಲೆಯೂರಿರುವ ವಿಭಜಕ ಸಿದ್ದಾಂತಗಳು ಭಾರತದ ಭದ್ರ ಬುನಾದಿಯ ಪರಂಪರೆಯನ್ನು ದುರ್ಬಲಗೊಳಿಸಲು ಎಲ್ಲ ಪ್ರಯತ್ನಗಳನ್ನು ಮಾಡುತ್ತಿವೆ'ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಮಂಗಳವಾರ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಪಕ್ಷದ 137ನೇ ಸಂಸ್ಥಾಪನಾ ದಿನಾಚರಣೆ ವೇಳೆ ಪಕ್ಷದ ಕಾರ್ಯಕರ್ತರಿಗೆ ಹಿಂದಿಯಲ್ಲಿ ವಿಡಿಯೊ ಸಂದೇಶ ನೀಡಿದ ಅವರು, 'ಇತಿಹಾಸವನ್ನು ತಿರುಚಿ ಸುಳ್ಳು ಹೇಳಲಾಗುತ್ತಿದೆ. ದೇಶದ 'ಗಂಗಾ-ಜಮುನಾ' ಪರಂಪರೆಯನ್ನು ಅಳಿಸುವಂಥ ನೀಚ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ದೇಶದ ಸಾಮಾನ್ಯ ನಾಗರಿಕರು ಅಸುರಕ್ಷತೆ ಮತ್ತು ಭಯ ಅನುಭವಿಸುತ್ತಿದ್ದು, ದೇಶದಲ್ಲಿ ಸರ್ವಾಧಿಕಾರದ ಆಳ್ವಿಕೆ ಇದೆ. ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಆಶಯಗಳಿಗೆ ಧಕ್ಕೆ ತರಲಾಗುತ್ತಿದೆ' ಎಂದು ದೂರಿದ್ದಾರೆ.
'ದ್ವೇಷ ಮತ್ತು ಪೂರ್ವಗ್ರಹದಲ್ಲಿ ನೆಲೆಗೊಂಡಿರುವ ವಿಭಜಕ ಸಿದ್ಧಾಂತಗಳು ಮತ್ತು ನಮ್ಮ ಸ್ವಾತಂತ್ರ್ಯ ಚಳವಳಿಯಲ್ಲಿ ಯಾವುದೇ ಪಾತ್ರವನ್ನು ವಹಿಸದಿರುವುದು ಈಗ ನಮ್ಮ ಸಮಾಜದ ಜಾತ್ಯತೀತ ರಚನೆಯ ಮೇಲೆ ವಿನಾಶದ ಪರಿಣಾಮವನ್ನುಂಟು ಮಾಡುತ್ತಿವೆ' ಎಂದು ಸೋನಿಯಾ ಹೇಳಿದ್ದಾರೆ.
'ಇವುಗಳನ್ನು ಕಾಂಗ್ರೆಸ್ ಮೂಕಪ್ರೇಕ್ಷಕನಂತೆ ನೋಡುತ್ತಾ ಕುಳಿತುಕೊಳ್ಳುವುದಿಲ್ಲ. ನಮ್ಮ ದೇಶದ ಶ್ರೀಮಂತರ ಪರಂಪರೆಯನ್ನು ನಾಶ ಮಾಡಲು ಯಾರಿಗೂ ಅವಕಾಶ ನೀಡುವುದಿಲ್ಲ. ಸಮಾಜವಿರೋಧಿ ಪಿತೂರಿಗಳ ವಿರುದ್ಧ ಹೋರಾಡಲು ಸಾಧ್ಯವಿರುವ ಎಲ್ಲ ಕಾರ್ಯವನ್ನು ಪಕ್ಷ ಮಾಡಲಿದೆ' ಎಂದು ಸೋನಿಯಾ ಪ್ರತಿಜ್ಞೆ ಮಾಡಿದರು.