ನಾಡು ಶಾಂತಿ, ಸಮೃದ್ಧಿ ಕಾಣಲಿ ಸಿ.ಎಂ ಹಾರೈಕೆ

ನಾಡು ಶಾಂತಿ, ಸಮೃದ್ಧಿ ಕಾಣಲಿ ಸಿ.ಎಂ ಹಾರೈಕೆ

ಮೈಸೂರು,ಅ.೫- ಎರಡು ವರ್ಷಗಳ ನಂತರ ನಾಡಹಬ್ಬ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವವನ್ನು ಅತ್ಯಂತ ಅರ್ಥಪೂರ್ಣ ಮತ್ತು ಉತ್ಸಾಹದಿಂದ ಆಚರಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ವಿಜಯದಶಮಿ ದಿನವಾದ ಇಂದು ಮೈಸೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿ ಅದ್ಧೂರಿ ಮೆರವಣಿಗೆಗೆ ಚಾಲನೆ ನೀಡಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಯಿ ಚಾಮುಂಡೇಶ್ವರಿ ಮಹಿಷಾಸುರನ ವಧೆ ಮಾಡಿ ವಿಜಯ ಸಾಧಿಸಿದ ದಿನ. ಇದರ ಅರ್ಥ ದುಷ್ಟಶಕ್ತಿಗಳ ವಿರುದ್ಧ ದೇವತೆಗಳು ವಿಜಯಸಾಧಿಸಿದ ದಿನ ಎಂದರು.ನಾವು ಈ ವಿಜಯ ದಿನದಂದು ಅರ್ಥ ಮಾಡಿಕೊಂಡು ಶ್ರೇಷ್ಠ ಮತ್ತು ಪರೋಪಕಾರಿ ಗುಣಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದರು.ಕನ್ನಡ ನಾಡಿನ ಜನತೆಗೆ ಎಲ್ಲ ರೀತಿ ಸುಭಿಕ್ಷೆ ಬರಲಿ, ಸುಖ, ಶಾಂತಿ, ನೆಮ್ಮದಿಯಿಂದ ಬಾಳಲಿ ಎಂದು ಚಾಮುಂಡೇಶ್ವರಿ ದೇವಿಗೆ ಪ್ರಾರ್ಥನೆ ಸಲ್ಲಿಸಿದ್ದೇನೆ. ಇಂದು ನಂದಿಧ್ವಜಕ್ಕೆ ಪೂಜೆ, ಜಂಬೂಸವಾರಿ ನಡೆಯಲಿದೆ. ಈ ಮೆರವಣಿಗೆಯಲ್ಲಿ ಲಕ್ಷಾಂತರ ಜನ ಭಾಗವಹಿಸಲಿದ್ದಾರೆ.ಅಚ್ಚುಕಟ್ಟಾಗಿ ದಸರಾ ಉತ್ಸವವನ್ನು ಆಯೋಜಿಸಿದ್ದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಅವರಿಗೆ ಮುಖ್ಯಮಂತ್ರಿಗಳು ಅಭಿನಂದನೆ ಸಲ್ಲಿಸಿದರು.ಇದಕ್ಕೂ ಮುನ್ನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದಂಪತಿ ಮೈಸೂರಿನ ಸುತ್ತೂರು ಮಠಕ್ಕೆ ಭೇಟಿ ನೀಡಿ ದೇಶೀಕೇಂದ್ರ ಸ್ವಾಮೀಜಿಗಳಿಂದ ಆರ್ಶೀವಾದ ಪಡೆದರು.ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟು ಸೋಮಶೇಖರ್ ಉಪಸ್ಥಿತರಿದ್ದರು.