ರಾಜ್ಯದಲ್ಲಿ ಪಠ್ಯಪುಸ್ತಕ ಪರಿಷ್ಕರಣೆ ವಿವಾದಕ್ಕೆ ಸಂಬಂಧಿಸಿದಂತೆ ತಮ್ಮ ಅಭಿಪ್ರಾಯ ಹೊರಹಾಕಿರುವ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯ, ಭಾರತಾಂಬೆಗೆ ನಮಿಸುವವರು, ಭಾರತ್ ಮಾತಾ ಕೀ ಜೈ ಎನ್ನುವವರು ಮಾತ್ರ ಪಠ್ಯಗಳಲ್ಲಿ ಇರುತ್ತಾರೆ. ಸೋನಿಯಾ ಮಾತಾ(ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ) ಕೀ ಜೈ ಎನ್ನುವವರನ್ನು ಪಠ್ಯದಲ್ಲಿ ಸೇರಿಸುವುದು ಸಾಧ್ಯವಿಲ್ಲ ಎಂದು ಮಾರ್ಮಿಕವಾಗಿ ಹೇಳಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ರೇಣುಕಾಚಾರ್ಯ, ಭವಿಷ್ಯದ ಪೀಳಿಗೆಗೆ ನೈಜ ಇತಿಹಾಸ ತಿಳಿಸುವ ಉದ್ದೇಶದಿಂದ ಪಠ್ಯಪುಸ್ತಕ ಪರಿಷ್ಕರಣೆ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಬೆಂಗಳೂರು: ರಾಜ್ಯದಲ್ಲಿ ಪಠ್ಯಪುಸ್ತಕ ಪರಿಷ್ಕರಣೆ ವಿವಾದ ಹೊಗೆಯಾಡುತ್ತಿದೆ. ಪರಿಷ್ಕರಣೆ ಪರ ಹಾಗೂ ವಿರೋಧದ ಧ್ವನಿಗಳ ಕೂಗು ನಿತ್ಯವೂ ಕೇಳಿಬರುತ್ತಿದೆ. ಈ ಮಧ್ಯೆ ಪಠ್ಯ ಪರಿಷ್ಕರಣೆ ವಿವಾದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ತಮ್ಮದೇ ಆದ ಅಭಿಪ್ರಾಯ ಹೊರಹಾಕಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ರೇಣುಕಾಚಾರ್ಯ, ಭಾರತಾಂಬೆಗೆ ನಮಿಸುವವರು, ಭಾರತ್ ಮಾತಾ ಕೀ ಜೈ ಎನ್ನುವವರು ಮಾತ್ರ ಪಠ್ಯಗಳಲ್ಲಿ ಇರುತ್ತಾರೆ. ಸೋನಿಯಾ ಮಾತಾ(ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ) ಕೀ ಜೈ ಎನ್ನುವವರನ್ನು ಪಠ್ಯದಲ್ಲಿ ಸೇರಿಸುವುದು ಸಾಧ್ಯವಿಲ್ಲ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.
ಭವಿಷ್ಯದ ಪೀಳಿಗೆಗೆ ನೈಜ ಇತಿಹಾಸ ತಿಳಿಸುವ ಉದ್ದೇಶದಿಂದ ಪಠ್ಯಪುಸ್ತಕ ಪರಿಷ್ಕರಣೆ ನಿರ್ಧಾರ ಕೈಗೊಳ್ಳಲಾಗಿದೆ. ಇಷ್ಟು ದಿನಗಳ ಕಾಲ ಯಾರನ್ನೋ ಮೆಚ್ಚಿಸಲು ರಚಿಸುತ್ತಿದ್ದ ಪಠ್ಯಪುಸ್ತಕ ತಿರಸ್ಕರಿಸಿದ್ದಕ್ಕೆ ಕೆಲವರಿಗೆ ನೋವಾಗಿದೆ ಎಂದು ರೇಣುಕಾಚಾರ್ಯ ವ್ಯಂಗ್ಯವಾಡಿದ್ದಾರೆ.
ಮಾನದಂಡಗಳ ಆಧಾರದ ಮೇಲೆಯೇ ಪರಿಷ್ಕರಣೆಗೆ ಸರ್ಕಾರ ಮುಂದಾಗಿದೆ. ಈ ಕುರಿತು ಅಪಸ್ವರ ಇದ್ದವರು ಚರ್ಚೆ ಮೂಲಕ ತಮ್ಮ ಅನುಮಾನ ಬಗೆಹರಿಸಿಕೊಳ್ಳಬೇಕು. ಅದನ್ನು ಬಿಟ್ಟು ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯನ್ನೇ ವಿಸರ್ಜಿಸುವಂತೆ ಕೋರುವುದು ಸರಿಯಲ್ಲ ಎಂದು ರೇಣುಕಾಚಾರ್ಯ ಅಭಿಪ್ರಾಯಪಟ್ಟಿದ್ದಾರೆ.
ಈ ನೆಲದ ನೈಜ ಇತಿಹಾಸ ತಿಳಿಯುವುದು ಮಕ್ಕಳ ಹಕ್ಕು. ಭಾರತಕ್ಕಾಗಿ ದುಡಿದ, ಭಾರತಕ್ಕಾಗಿ ಮಡಿದ ವೀರರ ಇತಿಹಾಸವನ್ನು ನಮ್ಮ ಮಕ್ಕಳು ಓದಬೇಕೇ ಹೊರತು, ಸೋನಿಯಾ ಗಾಂಧಿ ಅವರನ್ನು ಮೆಚ್ಚಿಸಲು ರಚಿಸಿರುವ ಇತಿಹಾಸವನ್ನಲ್ಲ ಎಂದು ರೇಣುಕಾಚಾರ್ಯ ಮಾರ್ಮಿಕವಾಗಿ ಹೇಳಿದ್ದಾರೆ.
ಒಟ್ಟಿನಲ್ಲಿ ರಾಜ್ಯದಲ್ಲಿ ಪಠ್ಯಪುಸ್ತಕ ಪರಿಷ್ಕರಣೆ ವಿವಾದದ ಕಾವು ಜೋರಾಗಿದ್ದು, ಪರ-ವಿರೋಧದ ಧ್ವನಿಗಳೂ ಅಷ್ಟೇ ಪರಿಣಾಮಕಾರಿಯಾಗಿ ತಮ್ಮ ವಾದವನ್ನು ಮಂಡಿಸುತ್ತಿವೆ ಎಂದು ಹೇಳಬಹುದು.