ಮತದಾರರ ಪಟ್ಟಿ ಗೋಲ್‍ಮಾಲ್ : ಬಿಜೆಪಿ ಹೈ ಕಮಾಂಡ್ ಆಕ್ರೋಶ

ಬೆಂಗಳೂರು,ನ.19 ; ರಾಜ್ಯ ರಾಜಕಾರಣದಲ್ಲಿ ಭಾರೀ ವಿವಾದ ಸೃಷ್ಟಿಸಿರುವ ಮತದಾರರ ಗುರುತಿನ ಚೀಟಿ ಪರಿಷ್ಕರಣೆ ಅಕ್ರಮ ಕುರಿತು ವರದಿ ನೀಡಬೇಕೆಂದು ಕೇಂದ್ರ ಬಿಜೆಪಿ ವರಿಷ್ಠರು ರಾಜ್ಯ ಘಟಕಕ್ಕೆ ಸೂಚನೆ ನೀಡಿದೆ.
ಗುಜರಾತ್ ವಿಧಾನಸಭೆ ಚುನಾವಣೆಗೆ ಮತದಾನ ನಡೆಯಲು ಕೆಲವೇ ದಿನಗಳು ಬಾಕಿ ಇರುವಾಗ ಪ್ರತಿಪಕ್ಷ ಕಾಂಗ್ರೆಸ್ ಮತ್ತು ಅಮ್ ಆದ್ಮಿ ಇದೇ ವಿಷಯವನ್ನು ಮುಂದಿಟ್ಟುಕೊಂಡು ಬಿಜೆಪಿ ಮೇಲೆ ವಾಗ್ದಾಳಿ ನಡೆಸುವ ಸಾಧ್ಯತೆ ಇರುವುದರಿಂದ ದೆಹಲಿ ನಾಯಕರು ವರದಿ ನೀಡಲು ಸೂಚಿಸಿದ್ದಾರೆ.
ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್ ಅವರಿಗೆ ಪ್ರಕರಣದ ಕುರಿತು ಪ್ರತ್ಯೇಕವಾಗಿ ವರದಿ ನೀಡಬೇಕೆಂದು ಖುದ್ದು ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರೇ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಈ ಪ್ರಕರಣವು ರಾಷ್ಟ್ರ ಮಟ್ಟದಲ್ಲೂ ಪ್ರತಿಧ್ವನಿಸಿರುವುದರಿಂದ ಕಾಂಗ್ರೆಸ್ ಕೇಂದ್ರ ಚುನಾವಣಾ ಆಯೋಗಕ್ಕೂ ದೂರು ನೀಡುವುದಾಗಿ ಹೇಳಿದೆ. ಹೀಗಾಗಿ ಸತ್ಯಸತ್ಯತೆ ಬಗ್ಗೆ ಎರಡು ದಿನದೊಳಗೆ ವರದಿ ನೀಡಬೇಕೆಂದು ಹೈಕಮಾಂಡ್ ಸೂಚಿಸಿರುವುದಾಗಿ ಮೂಲಗಳು ತಿಳಿಸಿವೆ.
ಮತದಾರರ ಗುರುತಿನಚೀಟಿ ಪರಿಷ್ಕರಣೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಅಶ್ವಥ್ ನಾರಾಯಣ ಹಾಗೂ ಬಿಬಿಎಂಪಿ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಪ್ರತಿಪಕ್ಷ ಕಾಂಗ್ರೆಸ್ ಆರೋಪಿಸಿದೆ.
ಸಿಎಂ ಹಾಗೂ ಸಚಿವರ ಮೇಲೆ ಎಫ್‍ಐಆರ್ ದಾಖಲಿಸಬೇಕೆಂದು ಕಾಂಗ್ರೆಸ್ ಒತ್ತಡದ ತಂತ್ರ ಅನುಸರಿಸುತ್ತಿದ್ದು, ರಾಜ್ಯ ಚುನಾವಣಾ ಆಯೋಗಕ್ಕೂ ದೂರು ಕೊಟ್ಟಿದೆ. ಇದರಿಂದ ಸಹಜವಾಗಿ ಬಿಜೆಪಿಗೆ ಮುಜುಗರವಾಗಿದ್ದು, ವರದಿ ನೀಡುವಂತೆ ನಿರ್ದೇಶನ ಕೊಟ್ಟಿದೆ.
ಚಿಲುಮೆ ಸಂಸ್ಥೆಗೆ ಮತದಾರರ ಗುರುತಿನ ಚೀಟಿ ಪರಿಷ್ಕರಣೆ ಮಾಡಲು ಸರ್ಕಾರ ಅನುಮತಿಯನ್ನು ನೀಡಿತ್ತೆ? ಇಲ್ಲವೇ ಬಿಬಿಎಂಪಿ ನಿರ್ದೇಶನ ನೀಡಿತ್ತೇ? ಈ ಸಂಸ್ಥೆಯು ಕೇವಲ ಗುರುತಿನ ಚೀಟಿ ಪರಿಷ್ಕರಣೆ ಮಾಡಿದೆಯೋ ಇಲ್ಲವೇ ಮತದಾರರ ಖಾಸಗಿ ವಿವರಗಳನ್ನು ಕಲೆ ಹಾಕಿದೆಯೇ? ಹಾಗಿದ್ದರೆ ಸರ್ಕಾರ ಮತ್ತು ಬಿಬಿಎಂಪಿ ಅನುಮತಿ ಇಲ್ಲದೆ ಹೇಗೆ ಮಾಹಿತಿ ಪಡೆದಿದೆ ಎಂಬುದರ ಬಗ್ಗೆ ವರದಿ ನೀಡಲು ನಡ್ಡಾ ಅವರು ಸೂಚನೆ ಕೊಟ್ಟಿದ್ದಾರೆ.
ರಾಜ್ಯದ ಅನೇಕ ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರ ಪಟ್ಟಿಯಿಂದ ಕೆಲವು ಹೆಸರುಗಳನ್ನು ಹೇಗೆ ತೆಗೆದು ಹಾಕಲಾಯಿತು? ಎರಡೆರಡು ಕಡೆ ಹೆಸರುಗಳಿದ್ದರೆ ಮತದಾರರು ಮಾತ್ರ ಪಟ್ಟಿಯಿಂದ ತೆಗೆದು ಹಾಕಬೇಕು. ಅವರ ಅನುಮತಿ ಇಲ್ಲದೆ ಚಿಲುಮೆ ಸಂಸ್ಥೆಗೆ ಅನುಮತಿ ಕೊಟ್ಟಿದ್ದು ಯಾರು? ಚುನಾವಣಾ ಆಯೋಗದ ಅನುಮತಿ ಇಲ್ಲದೆ ಈ ಪ್ರಕ್ರಿಯೆಗಳು ನಡೆಯಲು ಸಾಧ್ಯವೇ ಎಂಬುದರ ಬಗ್ಗೆ ನಡ್ಡಾ ರಾಜ್ಯ ನಾಯಕರನ್ನು ಪ್ರಶ್ನಿಸಿದ್ದಾರೆ.ಸೋಮವಾರದೊಳಗೆ ಈ ಪ್ರಕರಣ ಕುರಿತು ವರದಿ ನೀಡಬೇಕು. ಸರ್ಕಾರ ಮತ್ತು ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗಿದೆ ಎಂದು ಅವರು ಅಸಮಾಧಾನ ಹೊರಹಾಕಿದ್ದಾರೆ ಎಂದು ಗೊತ್ತಾಗಿದೆ.