2022ರ ಮಾರ್ಚ್‌ನಲ್ಲಿ ಬಿಬಿಎಂಪಿ ಚುನಾವಣೆ?

2022ರ ಮಾರ್ಚ್‌ನಲ್ಲಿ ಬಿಬಿಎಂಪಿ ಚುನಾವಣೆ?

ಬೆಂಗಳೂರು, ನವೆಂಬರ್ 17; ಬೃಹತ್ಬೆಂಗಳೂರುಮಹಾನಗರ ಪಾಲಿಕೆ ಚುನಾವಣೆಗೆ ಕರ್ನಾಟಕ ಸರ್ಕಾರ ಸಿದ್ಧತೆ ಆರಂಭಿಸಿದೆ.

2022ರ ಮಾರ್ಚ್ ತಿಂಗಳಿನಲ್ಲಿ 243 ವಾರ್ಡ್‌ಗಳಿಗೆ ಚುನಾವಣೆ ನಡೆಯುವ ಸಾಧ್ಯತೆ ಇದೆ.

2020ರ ಸೆಪ್ಟೆಂಬರ್‌ನಲ್ಲಿ ಪಾಲಿಕೆ ಕೌನ್ಸಿಲ್ ಅವಧಿ ಪೂರ್ಣಗೊಂಡಿತ್ತು. ಸರ್ಕಾರ ಆಡಳಿತಾಧಿಕಾರಿ ನೇಮಕ ಮಾಡಿತು. ಬಳಿಕ 198 ವಾರ್ಡ್‌ಗಳನ್ನು ಹೊಂದಿರುವ ಬಿಬಿಎಂಪಿಯ ವಾರ್ಡ್‌ಗಳ ಸಂಖ್ಯೆಯನ್ನು ಹೆಚ್ಚಿಸಲು ಸರ್ಕಾರ ತೀರ್ಮಾನ ಕೈಗೊಂಡಿದ್ದು, ಚುನಾವಣೆ ವಿಳಂಬವಾಗಿದೆ.

ಬಿಬಿಎಂಪಿ ಖಾತೆಯಲ್ಲಿ 67 ಲಕ್ಷ ಎಗರಿಸಿದ ಕಿಲಾಡಿ ಡಾಟಾ ಆಪರೇಟರ್

ಬಿಬಿಎಂಪಿಗೆ ಹೊಸದಾಗಿ ಸೇರಬೇಕಾದ ವಾರ್ಡ್‌ಗಳ ಪುನರ್ ವಿಂಗಡನೆ ಆಗಬೇಕಿದೆ. ಇದಕ್ಕಾಗಿ ಸರ್ಕಾರ ನಾಲ್ವರು ಅಧಿಕಾರಿಗಳನ್ನು ಒಳಗೊಂಡ ವಾರ್ಡ್ ಪುನರ್ ವಿಂಗಡನಾ ಸಮಿತಿಯನ್ನು ರಚಿಸಿದೆ. ವಾರ್ಡ್‌ ಪುನರ್ ವಿಂಗಡನೆಗೆ 2022ರ ಜನವರಿ ತನಕ ಅವಕಾಶ ನೀಡಿ ಕೆಲವು ದಿನಗಳ ಹಿಂದೆ ಆದೇಶ ಹೊರಡಿಸಿದೆ.

ಬಿಬಿಎಂಪಿ 243 ವಾರ್ಡ್ ಪುನರ್ ವಿಂಗಡನೆ; ಹೊಸ ಗಡುವು ಕೊಟ್ಟ ಸರ್ಕಾರ!

ವಾರ್ಡ್ ವಿಂಗಡನೆ ಕುರಿತು ತೀರ್ಮಾನ ಕೈಗೊಳ್ಳಲು ಬಿಬಿಎಂಪಿ ಆಯುಕ್ತರು, ಬೆಂಗಳೂರು ನಗರ ಜಿಲ್ಲಾಧಿಕಾರಿ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು, ಬಿಬಿಎಂಪಿ ವಿಶೇಷ (ಕಂದಾಯ) ಇರುವ ಸಮತಿ ರಚಿಸಲಾಗಿತ್ತು. ಮೊದಲು ಸಮಿತಿಗೆ 6 ತಿಂಗಳ ಗಡುವು ನೀಡಲಾಗಿತ್ತು. ಬಳಿಕ ಅಧಿಕಾರಿಗಳು ಕೋವಿಡ್ ಕರ್ತವ್ಯದಲ್ಲಿ ತೊಡಗಿದ್ದರು ಎಂದು 2022ರ ಜನವರಿ ತನಕ ಅವಕಾಶ ನೀಡಲಾಗಿದೆ.

ಬೆಂಗಳೂರು ವಾರ್ಡ್ ಮಟ್ಟದಲ್ಲಿ ಅಕ್ರಮ ಕಟ್ಟಡಗಳ ಪತ್ತೆಗೆ ಬಿಬಿಎಂಪಿ ಸಮರ

ವಾರ್ಡ್‌ ಪುನರ್ ವಿಂಗಡನೆ ನಡೆದು, ಅದಕ್ಕೆ ಆಕ್ಷೇಪಣೆಗಳನ್ನು ಆಹ್ವಾನಿಸಿ, ಆಕ್ಷೇಪಣೆಗಳನ್ನು ವಿಲೇವಾರಿ ಮಾಡಿದ ಬಳಿಕ ನೂತನ ಮತದಾರರ ಪಟ್ಟಿ ಸಿದ್ಧವಾಗಲಿದೆ. ಬಳಿಕ ಹೊಸ ಮೀಸಲಾತಿ ಪಟ್ಟಿಯನ್ನು ಪ್ರಕಟಿಸಿ ಬಿಬಿಎಂಪಿಗೆ ಚುನಾವಣೆ ನಡೆಸಲಾಗುತ್ತದೆ.

ಮುಖ್ಯಮಂತ್ರಿಗಳ ಸಭೆ ಬೆಂಗಳೂರು ನಗರಾಭಿವೃದ್ಧಿ ಸಚಿವರು ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೋಮವಾರ ಬಿಬಿಎಂಪಿ ಚುನಾವಣೆ ನಡೆಸುವ ಕುರಿತು ಅಧಿಕಾರಿಗಳ ಜೊತೆ ಸಭೆ ನಡೆಸಿದರು. ಕಂದಾಯ ಸಚಿವ ಆರ್. ಅಶೋಕ, ನಗರಾಭಿವೃದ್ಧಿ ಇಲಾಖೆ ಮುಖ್ಯ ಹೆಚ್ಚುವರಿ ಕಾರ್ಯದರ್ಶಿ ರಾಕೇಶ್ ಸಿಂಗ್, ಬಿಬಿಎಂಪಿ ಆಯುಕ್ತ ಗೌರವ್ ಗುಪ್ತ ಸಭೆಯಲ್ಲಿ ಪಾಲ್ಗೊಂಡಿದ್ದರು.

ಸಭೆಯಲ್ಲಿ ವಾರ್ಡ್‌ಗಳ ಪುನರ್ ವಿಂಗಡನೆಯನ್ನು ಮುಂದಿನ 5 ವಾರಗಳಲ್ಲಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಮುಖ್ಯಮಂತ್ರಿಗಳು ಸೂಚಿಸಿದ್ದಾರೆ. ಇದಾದ ಬಳಿಕ ಮತದಾರರ ಪಟ್ಟಿ ಸಿದ್ಧವಾಗಬೇಕಿದ್ದು ಬಳಿಕ ಚುನಾವಣಾ ಪ್ರಕ್ರಿಯೆಗಳು ಆರಂಭವಾಗಲಿವೆ.

ಕಳೆದ ವಾರ ನಡೆದ ಬಿಜೆಪಿ ನಾಯಕರ ಸಭೆಯಲ್ಲಿ ಬಿಬಿಎಂಪಿ ಚುನಾವಣೆ ಕುರಿತು ಚರ್ಚೆ ನಡೆದಿದೆ. ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ. ಎಲ್. ಸಂತೋಷ್ ಶೀಘ್ರವೇ ಬಿಬಿಎಂಪಿಗೆ ಚುನಾವಣೆ ನಡೆಸಬೇಕು ಎಂದು ಸೂಚನೆ ನೀಡಿದ್ದಾರೆ.

ಈ ಹಿನ್ನಲೆಯಲ್ಲಿ ಬಿಬಿಎಂಪಿ ಚುನಾವಣೆಯನ್ನು ನಡೆಸಲು ಸರ್ಕಾರ ಸಿದ್ಧತೆ ನಡೆಸುತ್ತಿದೆ. ಈಗಾಗಲೇ ಚುನಾಯಿತ ಪ್ರತಿನಿಧಿಗಳು ಇಲ್ಲದೇ ಒಂದೂವರೆ ವರ್ಷ ಕಳೆಯುತ್ತಾ ಬಂದಿದೆ. 2022ರ ಜೂನ್‌ನೊಳಗೆ ಚುನಾವಣೆ ನಡೆಸಲು ಸರ್ಕಾರ ತೀರ್ಮಾನಿಸಿದೆ.

2007ರಲ್ಲಿ ಜನಪ್ರತಿನಿಧಿಗಳು ಇಲ್ಲದೇ ಮೂರು ವರ್ಷಗಳ ಕಾಲ ಅಧಿಕಾರಿಗಳೇ ಬಿಬಿಎಂಪಿ ಆಡಳಿತ ನಡೆಸಿದ್ದರು. ಪ್ರಸ್ತುತ ಒಂದೂವರೆ ವರ್ಷದಿಂದ ಜನಪ್ರತಿನಿಧಿಗಳು ಇಲ್ಲದೇ ಅಧಿಕಾರಿಗಳೇ ಪಾಲಿಕೆ ಆಡಳಿತವನ್ನು ನೋಡಿಕೊಳ್ಳುತ್ತಿದ್ದಾರೆ.

2020ರ ಸೆಪ್ಟೆಂಬರ್ 10ರಂದು ಪಾಲಿಕೆಯ ಕೌನ್ಸಿಲ್ ಅವಧಿ ಪೂರ್ಣಗೊಂಡಿದೆ. ಬಳಿಕ ಅಧಿಕಾರಿಗಳೇ ಪಾಲಿಕೆ ಆಡಳಿತ ನೋಡಿಕೊಳ್ಳುತ್ತಿದ್ದಾರೆ. ರಸ್ತೆಗಳ ನಿರ್ವಹಣೆ, ರಸ್ತೆ ಗುಂಡಿ ಮುಚ್ಚುವ ವಿಚಾರದಲ್ಲಿ ಪಾಲಿಕೆ ಆಡಳಿತ ವೈಖರಿಗೆ ಟೀಕೆಗಳು ವ್ಯಕ್ತವಾಗುತ್ತಿವೆ.

ಪ್ರತಿ ವಾರ್ಡ್‌ಗೆ ಒಬ್ಬರು ನೋಡೆಲ್ ಆಫೀಸರ್‌ಗಳನ್ನು ನೇಮಕ ಮಾಡಿಕೊಂಡು ಆಡಳಿತ ನಡೆಸಲಾಗುತ್ತಿದೆ. ಆದರೆ ಆ ನೋಡೆಲ್ ಆಫೀಸರ್‌ಗಳು ಕೈಗೆ ಸಿಗುವುದಿಲ್ಲ ಎಂಬುದು ಜನರ ಆರೋಪವಾಗಿದೆ. ಬಿಬಿಬಿಎಂಪಿಗೆ ಬೇಗ ಚುನಾವಣೆ ನಡೆಸುವಂತೆ ಮಾಜಿ ಬಿಬಿಎಂಪಿ ಸದಸ್ಯರು ಒತ್ತಾಯಿಸುತ್ತಿದ್ದಾರೆ.

ಬೆಂಗಳೂರು ನಗರದ ಶಾಸಕರು ಶೀಘ್ರವೇ ಬಿಬಿಎಂಪಿ ಚುನಾವಣೆ ನಡೆಸಬೇಕು ಎಂದು ಮುಖ್ಯಮಂತ್ರಿಗಳನ್ನು ಒತ್ತಾಯಿಸುತ್ತಿದ್ದಾರೆ. ಆದ್ದರಿಂದ ಸರ್ಕಾರ ಬಿಬಿಎಂಪಿ ಚುನಾವಣೆ ನಡೆಸಲು ತಯಾರಿ ನಡೆಸುತ್ತಿದೆ.