ತ್ಯಾಜ್ಯ ವಿಲೇವಾರಿ ಘಟಕ: ಬೆನಕನಹಳ್ಳಿ ಗ್ರಾಮಸ್ಥರ ವಿರೋಧ
ಬೆಳಗಾವಿ: ತಮ್ಮೂರಿನ ಸಮೀಪದಲ್ಲಿ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿ ತಾಲ್ಲೂಕಿನ ಬೆನಕನಹಳ್ಳಿ ಗ್ರಾಮಸ್ಥರು ಸಿಐಟಿಯು ಸಂಘಟನೆಯ ನೇತೃತ್ವದಲ್ಲಿ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
'ಗ್ರಾಮದ ಕೆಎಫ್‍ಸಿಐ ಗೋದಾಮು ಸಮೀಪದಲ್ಲಿ ಘಟಕ ಸ್ಥಾಪಿಸಲು ಸರ್ಕಾರ ಮುಂದಾಗಿದೆ. ಇದರಿಂದ ಸುತ್ತಮುತ್ತಲಿನ ನಿವಾಸಿಗಳಿಗೆ ತೊಂದರೆ ಆಗುತ್ತದೆ. ಹೀಗಾಗಿ, ಅಲ್ಲಿ ಸ್ಥಾಪಿಸಬಾರದು. ಆದೇಶ ರದ್ದುಪಡಿಸಬೇಕು' ಎಂದು ಒತ್ತಾಯಿಸಿದರು.
ಸಿಐಟಿಯು ಸಂಘಟನೆಯ ಮುಖಂಡ ಮಹೇಶ ಕೋಲ್ಕಾರ, 'ಬೆನಕನಹಳ್ಳಿ, ಸುಳಗಾ ಹಾಗೂ ಆಶ್ರಯ ವಸತಿಯ 200 ಕುಟುಂಬಗಳು ಅಲ್ಲಿ ವಾಸಿಸುತ್ತಿವೆ. ಅಲ್ಲಿ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಿದರೆ ಜನರ ನೆಮ್ಮದಿ ಹಾಳಾಗಲಿದೆ. ಆದ್ದರಿಂದ ಊರಿಂದ ದೂರದ ಪ್ರದೇಶ ಆಯ್ಕೆ ಮಾಡಿಕೊಳ್ಳಬೇಕು' ಎಂದು ಕೋರಿದರು.
ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದರು.