'ಸಾರಿಗೆ ಸಿಬ್ಬಂದಿ ಕಾರ್ಯ ಶ್ಲಾಘನೀಯ'

'ಸಾರಿಗೆ ಸಿಬ್ಬಂದಿ ಕಾರ್ಯ ಶ್ಲಾಘನೀಯ'

ವಿಜಯಪುರ: ಪ್ರತಿ ದಿನ ಜನರ ನಡುವೆ ಕೆಲಸ ಮಾಡುವುದರಿಂದ ಸಾರಿಗೆ ನಿಗಮದ ಚಾಲಕ, ನಿರ್ವಾಹಕ, ಸಿಬ್ಬಂದಿ ಕೋವಿಡ್ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು ಎಂದು ಜಯಪುರ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಿರಿಯ ಸಿವಿಲ್ ನ್ಯಾಯಾಧೀಶ ವೆಂಕಣ್ಣ ಬಿ.ಹೊಸಮನಿ ಸೂಚಿಸಿದರು.

ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ವಿಜಯಪುರ ವಿಭಾಗದ ಒಂದನೇ ಘಟಕದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಅವರು ಸಿಬ್ಬಂದಿಗೆ ಮಾಸ್ಕ್, ಸ್ಯಾನಿಟೈಜರ್ ಮತ್ತು ಸಾಬೂನು ವಿತರಿಸಿ ಮಾತನಾಡಿದರು.

ಉಚಿತ ಕಾನೂನು ಸಹಾಯ ಪಡೆಯಲು ವಾರ್ಷಿಕ ಆದಾಯ ಮಿತಿ ಕಡಿಮೆ ಇರುವ ಸಿಬ್ಬಂದಿ, ಮಹಿಳೆಯರು ಮತ್ತು ಮಕ್ಕಳು ಅರ್ಜಿ ಸಲ್ಲಿಸುವ ವಿಧಾನಗಳ ಕುರಿತು ವಿವರಿಸಿ ಈ ಸವಲತ್ತಿನ ಸದುಪಯೋಗ ಪಡೆದುಕೊಳ್ಳಲು ತಿಳಿಸಿದರು.

ಕೋವಿಡ್‌ ಸಂದರ್ಭದಲ್ಲಿ ಅಪಾಯವನ್ನು ಲೆಕ್ಕಿಸದೇ ಕಾರ್ಯನಿರ್ವಹಿಸುವ ಸಾರಿಗೆ ನೌಕರರ ಕಾರ್ಯ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಹಿರಿಯ ಸಿವಿಲ್ ನ್ಯಾಯಾಧೀಶ ವೆಂಕಣ್ಣ ಬಿ.ಹೊಸಮನಿ ಅವರು ತಮ್ಮ ಸ್ವಂತ ಖರ್ಚಿನಿಂದ 200 ಸಿಬ್ಬಂದಿಗೆ ಮಾಸ್ಕ್‌, ಸ್ಯಾನಿಟೈಜರ್‌ ಮತ್ತು ಸಾಬೂನು ವಿತರಿಸಿದರು.

ನಿಗಮದ ವಿಜಯಪುರ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರುಬರ ಮಾತನಾಡಿ,ಈಗಾಗಲೇ ಸಾರಿಗೆ ಸಿಬ್ಬಂದಿಗೆ ಮೊದಲ ಸುತ್ತಿನ ಕೋವಿಡ್‌ ಲಸಿಕೆ ನೀಡುವ ಮೂಲಕ ಸುರಕ್ಷತೆಗೆ ಆದ್ಯತೆ ನೀಡಲಾಗಿದೆ. ಸಾರಿಗೆ ಸಿಬ್ಬಂದಿ ಕುಟುಂಬದವರಿಗೂ ಕೋವಿಡ್‌ ಲಸಿಕೆ ನೀಡಲು ಆದ್ಯತೆ ನೀಡಲಾಗಿದೆ ಎಂದು ಹೇಳಿದರು.

ಬಸ್‌ಗಳನ್ನು ಪ್ರತಿ ದಿನ ಸ್ಯಾನಿಟೈಸ್‌ ಮಾಡಲಾಗುತ್ತಿದೆ. ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ. ಕೋವಿಡ್‌ ಸಂಕಷ್ಟದಲ್ಲೂ ಸಾರ್ವಜನಿಕರಿಗೆ ತೊಂದರೆಯಾಗದಂತೆ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.

ನ್ಯಾಯಾಧೀಶರು ತಮ್ಮ ಸ್ವಂತ ಖರ್ಚಿನಲ್ಲಿ ಮಾಸ್ಕ್‌, ಸ್ಯಾನಿಟೈಸರ್‌, ಸಾಬೂನು ನೀಡುವ ಮೂಲಕ ಸಾರಿಗೆ ಸಂಬಂಧಿ ಬಗ್ಗೆ ಕಾಳಜಿ ತೋರಿಸಿರುವುದು ಶ್ಲಾಘನೀಯ ಎಂದರು.

ವಿಜಯಪುರ ವಿಭಾಗದ ಜಿಲ್ಲಾ ಸಾರಿಗೆ ಅಧಿಕಾರಿ(ಡಿಟಿಒ) ಡಿ.ಎ.ಬಿರಾದಾರ, ಘಟಕ 1ರ ಹಿರಿಯ ಘಟಕ ವ್ಯವಸ್ಥಾಪಕ ಎಂ.ಎಸ್.ಹಿರೇಮಠ, ಘಟಕ 2ರ ವ್ಯವಸ್ಥಾಪಕ ಎ.ಬಿ.ಹೂಗಾರ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.