ಧಾರವಾಡದಲ್ಲಿ 12ರಿಂದ ರಾಷ್ಟ್ರೀಯ ಯುವಜನೋತ್ಸವ: ಹಸಿರು ಯುವಜನೋತ್ಸವವಾಗಿ ಆಚರಣೆ

ಧಾರವಾಡದಲ್ಲಿ 12ರಿಂದ ರಾಷ್ಟ್ರೀಯ ಯುವಜನೋತ್ಸವ: ಹಸಿರು ಯುವಜನೋತ್ಸವವಾಗಿ ಆಚರಣೆ

ಧಾರವಾಡ: ಹುಬ್ಬಳ್ಳಿ-ಧಾರವಾಡದಲ್ಲಿ ಇದೇ 12ರಂದು ಆರಂಭವಾಗುವ 26ನೇ ರಾಷ್ಟ್ರೀಯ ಯುವ ಜನೋತ್ಸವವನ್ನು 'ಹಸಿರು ಯುವ ಜನೋತ್ಸವ'ವನ್ನಾಗಿ ರೂಪಿಸಲು ಸಿದ್ಧತೆ ನಡೆದಿದೆ.

ಸ್ಪಚ್ಛ ಭಾರತ ಅಭಿಯಾನದ ಸ್ಫೂರ್ತಿಯೊಂದಿಗೆ ಹವಾಮಾನ ಬದಲಾವಣೆ ಮತ್ತು ಪರಿಸರ ವಿಪತ್ತುಗಳ ಅಪಾಯ ತಗ್ಗಿಸುವ ಕೆಲಸದಲ್ಲಿ ಯುವಜನರು ತೊಡಗಿಸಿಕೊಂಡು ಸ್ಪಷ್ಟ ಸಂದೇಶ ರವಾನಿಸುವ ಧ್ಯೇಯ ಹೊಂದಲಾಗಿದೆ.

ಈ ನಿಟ್ಟಿನಲ್ಲಿ ಯುವ ಜನೋತ್ಸವದಲ್ಲಿ ಆರು ಮಂತ್ರಗಳನ್ನು ಪಾಲಿಸಲಾಗುತ್ತದೆ. ತ್ಯಾಜ್ಯ ಉಂಟು ಮಾಡುವ ವಸ್ತುಗಳ ಬಳಕೆ ನಿರಾಕರಣೆ, ಅವಶ್ಯವಿದ್ದಲ್ಲಿ ಅತ್ಯಂತ ಕಡಿಮೆ ಬಳಕೆ, ಮರುಬಳಕೆ, ಮರು ಆಲೋಚನೆಯ, ದುರಸ್ತಿಗೊಳಿಸಿ ಮರುಬಳಕೆ ಅಂಶಗಳನ್ನು ಅಳವಡಿಸಿಕೊಳ್ಳಲಾಗಿದೆ. ಮುಂದಿನ ಪೀಳಿಗೆಗೆ ಉತ್ತಮ ಪರಿಸರ ವ್ಯವಸ್ಥೆ ಕಲ್ಪಿಸುವ ಕುರಿತು ಪ್ರತಿಜ್ಞೆ ಕೈಗೊಳ್ಳಲಾಗುತ್ತದೆ.

ಪ್ರಚಾರ ಸಾಮಗ್ರಿಗಳು, ಕರವಸ್ತ್ರ ಸೇರಿದಂತೆ ಎಲ್ಲವೂ ಪುನರ್ ಬಳಕೆ ವಸ್ತುಗಳಾಗಿ ಉಪಯೋಗಿಸಲಾಗುತ್ತದೆ. ಸಮೂಹ ಸಾರಿಗೆಗೆ ಒತ್ತು ನೀಡಲಾಗಿದೆ. ತ್ಯಾಜ್ಯ ವಿಂಗಡಣೆ ಕಡ್ಡಾಯ. ತ್ಯಾಜ್ಯ ಸಂಗ್ರಹ ಮತ್ತು ನಿರ್ವಹಣೆಗೆ ಸೂಕ್ತ ವ್ಯವಸ್ಥೆ ರೂಪಿಸಲಾಗಿದೆ. ಪುನರ್ ಬಳಕೆ ವಸ್ತುಗಳಿಂದ ಸಿದ್ಧಪಡಿಸಿದ ಸ್ಮರಣಿಕೆಗಳು, ಪದಕಗಳು, ಲೇಖನ ಸಾಮಗ್ರಿಗಳನ್ನು ಉಪಯೋಗಿಸಲಾಗುತ್ತಿದೆ. ಗಣ್ಯರು ಮತ್ತು ಪಾಲ್ಗೊಳ್ಳುವವರಿಗೆ ನೀಡುವ ಜರ್ಸಿಗಳನ್ನು ಸಹ ಮರುಬಳಕೆ ವಸ್ತುಗಳಿಂದ ಸಿದ್ಧ
ಪಡಿಸಿದ್ದು, ಅವುಗಳನ್ನು ಮರು ಬಳಕೆ ಮಾಡುವಂತೆ ವ್ಯವಸ್ಥೆ ಮಾಡಲಾಗಿದೆ.

ಕುಡಿಯುವ ನೀರಿನ ಪ್ಲಾಸ್ಟಿಕ್ ಬಾಟಲಿಗಳಿಂದಾಗುವ ಮಾಲಿನ್ಯ ನಿಯಂತ್ರಣಕ್ಕೂ ಜಿಲ್ಲಾಡಳಿತ ಮಾರ್ಗ ಕಂಡುಕೊಂಡಿದೆ. ನೋಂದಾಯಿತ ಪ್ರತಿಯೊಬ್ಬರಿಗೂ ಕಿಟ್‌ನಲ್ಲಿ ಸ್ಟೀಲ್ ಬಾಟಲಿ ನೀಡಲಾಗುತ್ತಿದೆ. ಇದನ್ನೇ ಉತ್ಸವದ ಕೊನೆಯವರೆಗೂ ಬಳಸಲು ಜಾಗೃತಿ ಮೂಡಿಸಲಾಗುತ್ತಿದೆ.

ಆಹಾರ ಮೇಳಗಳಲ್ಲಿ ಚಮಚ ಸೇರಿ ಎಲ್ಲಾ ವಸ್ತುಗಳು ಮರುಬಳಕೆ ವಸ್ತುಗಳಿಂದಲೇ ತಯಾರಿಸಲಾಗಿವೆ. ಪ್ರತಿಯೊಂದು ವೇದಿಕೆಗಳಲ್ಲಿ ಹಸಿರು ಯುವಜನೋತ್ಸವ ಕುರಿತು ನಿರಂತರ ಮಾಹಿತಿ ರವಾನಿಸಿ ಸಂದೇಶಗಳನ್ನು ಬಿತ್ತರಿಸಬೇಕು ಎಂದು ನಿರ್ದೇಶನ ನೀಡಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.