60ಕ್ಕೂ ಹೆಚ್ಚು ಅನಧಿಕೃತ ರೆಸಾರ್ಟ್ಗಳನ್ನು ಬಂದ್ ಮಾಡಿಸಿದ ಅಧಿಕಾರಿಗಳು!
ಕೊಪ್ಪಳ: ಚುನಾವಣೆ ಬಂದಾಗ ರೆಸಾರ್ಟ್ ಶಬ್ದ ಕೇಳಿಸಿದರೆ ಸಾಕು, ಕಿವಿಗಳು ನೆಟ್ಟಗಾಗುತ್ತವೆ. ರಾಜಕೀಯದಿಂದ ಹಿಡಿದು ಅನೈತಿಕ ಚಟುವಟಿಕೆಗಳಿಗೆ ರೆಸಾರ್ಟ್ಗಳ ಬಳಕೆಯ ಬಗ್ಗೆ ಜನರು ಹೆಚ್ಚಾಗಿ ಕೇಳಿರುವುದು ಇದಕ್ಕೆ ಕಾರಣ ಎಂದು ಹೇಳಬಹುದೋ ಏನೋ.
ಇದೀಗ ಅಧಿಕಾರಿಗಳು 60ಕ್ಕೂ ಹೆಚ್ಚು ಅನಧಿಕೃತ ರೆಸಾರ್ಟ್ಗಳ ಮೇಲೆ ದಾಳಿ ಮಾಡಿದ್ದು ಕಟ್ಟಡಗಳನ್ನು ತೆರವುಗೊಳಿಸುವಂತೆ ಆದೇಶಿಸಿ ಮಾಲೀಕರಿಗೆ ಚುರುಕು ಮುಟ್ಟಿಸಿದ್ದಾರೆ.
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಸಣಾಪೂರ, ಜಂಗ್ಲಿ, ರಾಂಪೂರ, ಹನುಮನಹಳ್ಳಿ, ಮಲ್ಲಾಪೂರ, ಗಡ್ಡಿ, ಮುಂತಾದ ಗ್ರಾಮಗಳಲ್ಲಿ ಜನರು ಅಕ್ರಮವಾಗಿ ರೆಸಾರ್ಟ್ಗಳನ್ನು ಕಟ್ಟಿಕೊಂಡಿದ್ದರು.
ಈ ಬಗ್ಗೆ ಮಾಹಿತಿ ಪಡೆದ ಅಧಿಕಾರಿಗಳು ದಾಳಿ ಮಾಡಿದ್ದು ರೆಸಾರ್ಟ್ಗಳಿಗೆ ಅಕ್ರಮವಾಗಿ ಕಲ್ಪಿಸಲಾಗಿದ್ದ ವಿದ್ಯುತ್ ಸಂಪರ್ಕ, ನೀರಿನ ಸಂಪರ್ಕಗಳನ್ನು ಕಡಿತಗೊಳಿಸಿ ರೆಸಾರ್ಟ್ಗಳನ್ನು ಬಂದ್ ಮಾಡಿಸಿದ್ದಾರೆ.
ಇದೀಗ ಒಂದು ವಾರದಲ್ಲಿ ಕಟ್ಟಡದ ತೆರವಿಗೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಹಂಪಿ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಸಿದ್ದರಾಮೇಶ್ವರ, ಕೊಪ್ಪಳ ಎಸಿ ಬಸವಣ್ಣೆಪ್ಪ ನೇತೃತ್ವದಲ್ಲಿ ದಾಳಿ ನಡೆದಿದ್ದು ದಾಳಿಯಲ್ಲಿ ಕಂದಾಯ, ಅರಣ್ಯ, ಜೆಸ್ಕಾಂ, ಪೊಲೀಸ್ ಇಲಾಖೆ ಅಧಿಕಾರಿಗಳು ಭಾಗಿಯಾಗಿದ್ದಾರೆ.