ಬಿಟ್ ಕಾಯಿನ್: ಅಬ್ಬರಿಸಿ ಬೊಬ್ಬಿರಿದ ಕಾಂಗ್ರೆಸ್ ಸುಮ್ಮನಾಗಿದ್ದು ಏಕೆ?
ಬಿಟ್ ಕಾಯಿನ್: ಅಬ್ಬರಿಸಿ ಬೊಬ್ಬಿರಿದ ಕಾಂಗ್ರೆಸ್ ಸುಮ್ಮನಾಗಿದ್ದು ಏಕೆ?
ಬಿಟ್ ಕಾಯಿನ್ ವಿಚಾರವಾಗಿ ಅಬ್ಬರಿಸಿ ಬೊಬ್ಬಿರಿದಿದ್ದ ಕಾಂಗ್ರೆಸ್ ಸದ್ಯ ಸುಮ್ಮನಿರುವುದು ಕುತೂಹಲ ಕೆರಳಿಸಿದೆ. ಬಿಟ್ ಕಾಯಿನ್ ಹಗರಣದಲ್ಲಿ ಪ್ರಭಾವಿಗಳು ಇದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಗದ್ದಲ ಉಂಟು ಮಾಡಿತ್ತು. ಆದರೀಗ ಸದನದಲ್ಲಿ ಪ್ರಸ್ತಾಪ ಮಾಡಿಲ್ಲ.
ಬೆಳಗಾವಿ: ಬಿಟ್ ಕಾಯಿನ್ ವಿಚಾರವಾಗಿ ಅಬ್ಬರಿಸಿ ಬೊಬ್ಬಿರಿದಿದ್ದ ಕಾಂಗ್ರೆಸ್ ಸದ್ಯ ಸುಮ್ಮನಿರುವುದು ಕುತೂಹಲ ಕೆರಳಿಸಿದೆ. ಬಿಟ್ ಕಾಯಿನ್ ಹಗರಣದಲ್ಲಿ ಪ್ರಭಾವಿಗಳು ಇದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಗದ್ದಲ ಉಂಟು ಮಾಡಿತ್ತು. ಬೆಳಗಾವಿ ಅಧಿವೇಶನದಲ್ಲಿ ಈ ವಿಚಾರ ಪ್ರಸ್ತಾಪ ಮಾಡಿ ಸರ್ಕಾರವನ್ನು ಮುಜುಗರಕ್ಕೆ ಈಡು ಮಾಡುವುದು ಕಾಂಗ್ರೆಸ್ ಉದ್ದೇಶಾವಾಗಿತ್ತು. ಈ ನಿಟ್ಟಿನಲ್ಲಿ ಸದನದಲ್ಲಿ ಬಿಟ್ ಕಾಯಿನ್ ಚರ್ಚೆ ಗದ್ದಲದ ಕುತೂಹಲ ಕೆರಳಿತ್ತು. ಆದರೆ ಮೊದಲ ವಾರದಲ್ಲಿ ಈ ವಿಚಾರವನ್ನು ಕಾಂಗ್ರೆಸ್ ಸದನದಲ್ಲಿ ಪ್ರಸ್ತಾಪ ಮಾಡಿಲ್ಲ.
ಬಿಟ್ ಕಾಯಿನ್ ವಿಚಾರವಾಗಿ ಬಹಿರಂಗವಾಗಿ ಆರೋಪ ಮಾಡುತ್ತಿದ್ದ ಕಾಂಗ್ರೆಸ್ ಮುಖಂಡರೂ ಕೂಡಾ ತಣ್ಣಗಾಗಿದ್ದಾರೆ. ಬೆಳಗಾವಿ ಅಧಿವೇಶನ ಆರಂಭದ ಸಂದರ್ಭದಲ್ಲಿ ಈ ವಿಚಾರ ಪ್ರಸ್ತಾಪಿಸಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ನಿರೀಕ್ಷೆ ಹುಸಿಯಾಗಿದೆ.
ಈ ನಡುವೆ ರಾಜ್ಯ ಸರ್ಕಾರದ ವಿರುದ್ಧ 40% ಆರೋಪ ವಿಚಾರವನ್ನು ಮುಂದಿಟ್ಟುಕೊಂಡು ಹೋರಾಟ ನಡೆಸಿದರೂ ಬಿಟ್ ಕಾಯಿನ್ ಎಲ್ಲೂ ಸದ್ದಾಗುತ್ತಿಲ್ಲ. ಈ ಹಗರಣದಲ್ಲಿ ಕಾಂಗ್ರೆಸ್ ಮುಖಂಡರ ಮಕ್ಕಳ ಹೆಸರೂ ಕೇಳಿಬಂದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸುಮ್ಮನಾಯಿತಾ? ಎಂಬ ಅನುಮಾನಗಳು ವ್ಯಕ್ತವಾಗುತ್ತಿವೆ.
ಬಿಟ್ ಕಾಯಿನ್ ವಿಚಾರವಾಗಿ ಅಬ್ಬರಿಸಿದ್ದ ಕಾಂಗ್ರೆಸ್ ಇವಾಗ ಏಕೆ ಸುಮ್ಮನಾಗಿದೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರಲ್ಲಿ ಪ್ರಶ್ನಿಸಿದರೆ, ಮುಂದಿನ ದಿನಗಳಲ್ಲಿ ಇದನ್ನು ಸದನದಲ್ಲಿ ಪ್ರಸ್ತಾಪ ಮಾಡುತ್ತೇವೆ ಎಂದಷ್ಟೇ ಹೇಳಿದ್ದಾರೆ.
ಇನ್ನೇನು ಅಧಿವೇಶನ ಮುಗಿಯಲು ಐದು ದಿನಗಳು ಬಾಕಿ ಉಳಿದಿವೆ.ಈ ಅವಧಿಯಲ್ಲಿ ಹಲವು ವಿಚಾರಗಳು ಚರ್ಚೆಗೆ ಬರಲಿವೆ. ಆದರೆ ಕಾಂಗ್ರೆಸ್ ತನ್ನ ಬತ್ತಳಿಕೆಯಲ್ಲಿ ಇಟ್ಟಿರುವ ಬಿಟ್ ಕಾಯಿನ್ ಅಸ್ತ್ರವನ್ನು ಪ್ರಬಲವಾಗಿ ಉಪಯೋಗಿಸುತ್ತಾ? ಅಥವಾ ಬಿಟ್ ಅಸ್ತ್ರವನ್ನು ಬಿಟ್ ಬಿಡುತ್ತಾ? ಎಂಬುದು ಸದ್ಯದ ಕುತೂಹಲ.
ಈ ನಡುವೆ ಬಿಟ್ ಕಾಯಿನ್ ಪ್ರಕರಣದ ಪ್ರಮುಖ ಆರೋಪಿ ಶ್ರೀಕಿ ಆಲಿಯಾಸ್ ಶ್ರೀಕೃಷ್ಣ ನಾಪತ್ತೆಯಾಗಿದ್ದಾನೆ. ಶ್ರೀಕಿ ನಾಪತ್ತೆಯೂ ಹಲವಾರು ಅನುಮಾನಗಳಿಗೆ ಕಾರಣವಾಗಿದೆ.