ಪುನೀತ್ ರಾಜಕುಮಾರ್ ಅಕಾಲಿಕ ಸಾವು: ಹೊರಬರುತ್ತಿರುವ ಒಂದೊಂದೇ ಸತ್ಯಗಳು

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಕಾಲಿಕ ಸಾವಿಗೆ ಮರುಕ ಪಡುತ್ತಿರುವವರ ಸಂಖ್ಯೆ, ಅವರು ಮಾಡುತ್ತಿರುವ ಸಾಮಾಜಿಕ ಕೆಲಸಗಳು ಒಂದೊಂದೇ ಹೊರಗೆ ಬರುತ್ತಿರುವುದರಿಂದ, ಇನ್ನಷ್ಟು ಹೆಚ್ಚಾಗುತ್ತಿದೆ.
ಬಲಗೈ ಕೊಟ್ಟಿದ್ದು ಎಡಗೈಗೆ ಗೊತ್ತಾಗಬಾರದು ಎನ್ನುವಂತೆ ಪುನೀತ್ ರಾಜಕುಮಾರ್ ಅವರು ಮಾಡಿದ್ದ ಬಹಳಷ್ಟು ಸಾಮಾಜಿಕ ಕೆಲಸಗಳು ಅವರ ಕುಟುಂಬದವರಿಗೇ ಗೊತ್ತಿಲ್ಲ.
"84 ವರ್ಷದ ನಾನಿದ್ದೆ, ಪುನೀತ್ ನನ್ನು ಯಾಕೆ ಕಸಿದುಕೊಂಡೆ ವಿಧಿಯೇ"
ಅದೆಷ್ಟೋ ಮಕ್ಕಳಿಗೆ ವಿದ್ಯಾಭ್ಯಾಸ, ಗೋಶಾಲೆ, ಅನಾಥಾಶ್ರಮ, ವೃದ್ದಾಶ್ರಮವನ್ನು ಪುನೀತ್ ರಾಜಕುಮಾರ್ ಕಟ್ಟಿಸಿರುವ ವಿಚಾರ, ರಾಷ್ಟ್ರ ಮಟ್ಟದಲ್ಲಿ ಬಹಳ ಸುದ್ದಿಯಾಗುತ್ತಿದೆ. ಪುನೀತ್ ಅವರ ಸಮಾಧಿ ವೀಕ್ಷಣೆಗೆ ಜಡಿಮಳೆಯ ನಡುವೆಯೂ ಸಾವಿರಾರು ಅಭಿಮಾನಿಗಳು ಆಗಮಿಸುತ್ತಿದ್ದಾರೆ.
ಪುನೀತ್ ರಾಜಕುಮಾರ್ ಅವರು ತಾವು ನಡೆಸುತ್ತಿರುವ ಸಾಮಾಜಿಕ ಕೆಲಸ ನಿಲ್ಲಬಾರದೆಂದು ಎಂಟು ಕೋಟಿ ರೂಪಾಯಿ ಭದ್ರತಾ ಠೇವಣಿಯನ್ನು ಇಟ್ಟಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಈ ಬಗ್ಗೆ ನನಗೆ ಮಾಹಿತಿಯಿಲ್ಲ ಎಂದು ಶಿವರಾಜ್ ಕುಮಾರ್ ಹೇಳಿದ್ದಾರೆ. ಸಾರ್ವಜನಿಕ ವಲಯದಲ್ಲಿ ಇರುವ ಪುನೀತ್ ಸಾಮಾಜಿಕ ಕೆಲಸದ ಹೊರತಾಗಿ, ಕೆಲವೊಂದು ಸುದ್ದಿಯಾಗದ ಅಪ್ಪು ಸಹಾಯದ ಬಗ್ಗೆ ಸ್ಲೈಡಿನಲ್ಲಿ ಮುಂದುವರಿಸಲಾಗಿದೆ.
ಮಲ್ಪೆ ಕಡಲಕಿನಾರೆಯಲ್ಲಿ ರೂಬಿಕ್ಸ್ ಕ್ಯೂಬ್‌ನಲ್ಲಿ ಅರಳಿದ ಅಪ್ಪು ಚಿತ್ರ
ರಣ ವಿಕ್ರಮ ಚಿತ್ರದ ಶೂಟಿಂಗ್ ನ ಬಿಡುವಿನ ವೇಳೆ

ರಣ ವಿಕ್ರಮ ಚಿತ್ರದ ಶೂಟಿಂಗ್ ನ ಬಿಡುವಿನ ವೇಳೆ, ಪಕ್ಕದಲ್ಲೇ ಒಂದು ಸರಕಾರೀ ಶಾಲೆಯೊಂದು ಇತ್ತು. ಅಲ್ಲಿಗೆ, ಭೇಟಿ ನೀಡಿದ ಪುನೀತ್ ರಾಜಕುಮಾರ್, ಹೆಣ್ಣು ಮಕ್ಕಳಿಗೆ ಶೌಚಾಲಯ ಇಲ್ಲದಿರುವುದನ್ನು ಗಮನಿಸುತ್ತಾರೆ. ಇದಕ್ಕೆ ಸ್ಪಂದಿಸುವ ಪುನೀತ್, ಶಾಲೆಗೆ ಸಂಬಂಧ ಪಟ್ಟ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ, ಹದಿನೈದು ದಿನ ನಾನು ಇಲ್ಲೇ ಶೂಟಿಂಗ್ ನಲ್ಲಿರುತ್ತೇನೆ. ಬೆಂಗಳೂರಿಗೆ ಪ್ಯಾಕ್ ಅಪ್ ಆಗುವ ಮುನ್ನ ಶೌಚಾಲಯದ ಉದ್ಘಾಟನೆಯನ್ನು ನಾನೇ ಮಾಡುತ್ತೇನೆ ಎಂದು ಶೌಚಾಲಯ ಕಟ್ಟಿಸಿದ್ದರು ಎಂದು ಚಿತ್ರತಂಡದ ಸದಸ್ಯರೊಬ್ಬರು ಹೇಳಿದ್ದಾರೆ.
ರಾಜಕುಮಾರ ಚಿತ್ರದ ವೇಳೆಯ ಬಿಡುವಿನಲ್ಲಿ ಅನಾಥಾಶ್ರಮದ ಸಿಬ್ಬಂದಿ
ರಾಜಕುಮಾರ ಚಿತ್ರದ ವೇಳೆಯ ಬಿಡುವಿನಲ್ಲಿ, ಮೈಸೂರಿನ ಅನಾಥಾಶ್ರಮವೊಂದರ ಸಿಬ್ಬಂದಿ ಬಂದು ಅಲ್ಲಿಗೆ ಬರುವಂತೆ ಪುನೀತ್ ಅವರಿಗೆ ಮನವಿಯನ್ನು ಮಾಡುತ್ತಾರೆ. ಸಾಯಂಕಾಲ ಬರುತ್ತೇನೆ ಎಂದು ಹೇಳಿ ಅಪ್ಪು ಅವರನ್ನು ಕಳುಹಿಸುತ್ತಾರೆ. ಸಾಯಂಕಾಲ ಶೂಟಿಂಗ್ ಮುಗಿದ ನಂತರ ಅಪ್ಪು ಅನಾಥಾಶ್ರಮಕ್ಕೆ ಹೋಗುತ್ತಾರೆ. ಅವರ ಕಾರಿನ ಹಿಂದೆ ಒಂದು ಟೆಂಪೋ ಬರುತ್ತಿರುತ್ತದೆ. ಟೆಂಪೋದಲ್ಲಿ ನೋಡಿದಾಗ ಮಕ್ಕಳಿಗೆ ಬೇಕಾಗುವ ಆಟದ ಸಾಮಾನು ಅದರಲ್ಲಿ ತುಂಬಿರುತ್ತದೆ. ಎಲ್ಲಾ ಆಟದ ಸಾಮಗ್ರಿಯನ್ನು ಪುನೀತ್ ಮಕ್ಕಳಿಗೆ ಕೊಟ್ಟು, ಅವರ ಜೊತೆ ಸ್ವಲ್ಪಹೊತ್ತು ಆಟವಾಡುತ್ತಾ ಕಾಲ ಕಳೆಯುತ್ತಾರೆ ಎನ್ನುವುದನ್ನು ಚಿತ್ರತಂಡದ ಸದಸ್ಯರೊಬ್ಬರು ಹೇಳಿದ್ದಾರೆ.
ಮಳೆಯಿಂದ ಮನೆ ಕುಸಿದು ಹೋಗಿದೆ ಎಂದ ಅಭಿಮಾನಿಗೆ ಸಹಾಯ
ಪುನೀತ್ ಅವರು ಒಂದು ಶೂಟಿಂಗ್ ನಲ್ಲಿ ಭಾಗವಹಿಸುತ್ತಿರುತ್ತಾರೆ. ಅವರಿಗಾಗಿ ಅಭಿಮಾನಿಯೊಬ್ಬರು ಕಾಯುತ್ತಿರುತ್ತಾರೆ, ಇದನ್ನು ಗಮನಿಸಿದ ಅಪ್ಪು, ಅವರ ಬಳಿಗೆ ಹೋದಾಗ, ಮಳೆಯಿಂದ ಮನೆ ಕುಸಿದು ಹೋಗಿದೆ, ನಿಮ್ಮಿಂದ ಸಹಾಯ ಪಡೆಯಲು ಬಂದೆ ಎಂದು ಹೇಳುತ್ತಾರೆ. ಆಗ, ಕ್ಯಾಮರಾ ಆಫ್ ಮಾಡಿ ಪುನೀತ್ ತನ್ನ ಅಭಿಮಾನಿಗೆ ಸಹಾಯವನ್ನು ಮಾಡುತ್ತಾರೆ. ಈ ವಿಡಿಯೋ ಸಾಮಾಜಿಕ ತಾಣದಲ್ಲಿ ಭಾರೀ ವೈರಲ್ ಆಗಿತ್ತು.
ಪುನೀತ್ ರಾಜಕುಮಾರ್ ಹದಿನೈದು ಲಕ್ಷ ರೂಪಾಯಿ ಸಹಾಯಹಸ್ತ
ಸಣ್ಣ ಹುಡುಗಿಗೆ ಕಿಡ್ನಿ ಸಮಸ್ಯೆ ಇರುವುದನ್ನು ಅರಿತ ಪುನೀತ್ ರಾಜಕುಮಾರ್ ಹದಿನೈದು ಲಕ್ಷ ರೂಪಾಯಿ ಸಹಾಯಹಸ್ತವನ್ನು ಚಾಚಿದ್ದರು. ನನಗೆ ಸಹಾಯ ಮಾಡಿದ್ದ ಅಪ್ಪು ಸರ್ ಇನ್ನಿಲ್ಲ, ನನ್ನಂತಹ ನೂರಾರು ಜನರಿಗೆ ಸಹಾಯ ಮಾಡಲು ಇನ್ನು ಯಾರಿದ್ದಾರೆ ಎಂದು ಆ ಹುಡುಗಿ ಕಣ್ಣೀರು ಹಾಕಿತ್ತು. ಇನ್ನು, ಸಣ್ಣ ಮಗುವಿಗೆ ವಾಕ್ ಸಮಸ್ಯೆಯಿತ್ತು, ಟಿವಿ ಕಾರ್ಯಕ್ರಮವೊಂದರಲ್ಲಿ ಈ ಬಗ್ಗೆ ಅರಿತುಕೊಂಡ ಪುನೀತ್ ಆ ಹುಡುಗನ ಶಸ್ತ್ರಚಿಕಿತ್ಸೆಗೂ ಸಹಾಯ ಮಾಡಿದ್ದನ್ನು, ಹುಡುಗನ ತಾಯಿ ಹೇಳಿದ್ದರು.
ಮೈಸೂರಿನ ಜೈಲಿನಲ್ಲಿ ದೊಡ್ಮನೆ ಹುಡಗ ಚಿತ್ರೀಕರಣ
"ಮೈಸೂರಿನ ಜೈಲಿನಲ್ಲಿ ದೊಡ್ಮನೆ ಹುಡಗ ಚಿತ್ರೀಕರಣ ನಡೆಯುತ್ತಿತ್ತು. ಅಲ್ಲಿನ ಜೈಲಿನಲ್ಲಿರುವ ಕೈದಿಗಳು ತಮ್ಮ ಶಿಕ್ಷೆಯನ್ನು ಮುಗಿಸಿದ್ದರು, ಜೈಲಿನಿಂದ ಬಿಡುಗಡೆ ಹೊಂದಲು ಫೀಸ್ ಕಟ್ಟಬೇಕಿತ್ತು. ಅದು ಕಟ್ಟಲು ಕೈದಿಗಳ ಬಳಿ ದುಡ್ಡು ಇರಲಿಲ್ಲ. ಈ ವಿಷಯವನ್ನು ಅಪ್ಪು ಅವರಿಗೆ ಹೇಳಿದಾಗ, ಎಷ್ಟು ದುಡ್ಡು ಬೇಕೂಂತ ಕೇಳಿ, ಆನ್ ದಿ ಸ್ಪಾಟ್ ಚೆಕ್ ಕೊಟ್ಟಿದ್ದಾರೆ. ಅಷ್ಟೇ ಅಲ್ಲದೇ, ಈ ಸಹಾಯವನ್ನು ಯಾರಿಗೂ ಹೇಳುವುದಕ್ಕೆ ಹೋಗಬೇಡಿ" ಎಂದು ಚಿತ್ರತಂಡದ ಸದಸ್ಯರಾಗಿದ್ದ ಪ್ರಭಾಕರ್ ಎನ್ನುವವರು ಹೇಳಿದ್ದಾರೆ.