ವಿಕ್ಕಿ - ಕತ್ರಿನಾ ಕೈಫ್ ಮದುವೆ ಒಟಿಟಿಯಲ್ಲಿ ಪ್ರಸಾರ ಮಾಡಲು ಭಾರೀ ಡಿಮ್ಯಾಂಡ್ ; 100 ಕೋಟಿ ನೀಡುವ ಆಫರ್
ಮುಂಬಯಿ : ಸೆಲೆಬ್ರಿಟಿಗಳ ಮದುವೆ ಅಥವಾ ಸಮಾರಂಭ ಎಂದರೆ ಹೇಳುವುದೇ ಬೇಡ. ಅಲ್ಲಿ ಸ್ವರ್ಗವೇ ಇಳಿದ ಭಾವ ಪ್ರತಿಯೊಬ್ಬರಲ್ಲಿಯೂ ಮೂಡದೆ ಇರದು. ಆದರೆ, ಇಂತಹ ಸಮಾರಂಭಗಳಿಗೆ ಭಾಗವಹಿಸುವ ಅದೃಷ್ಟ ಮಾತ್ರ ಅಭಿಮಾನಿಗಳಿಗೆ ಇರುವುದಿಲ್ಲ. ಇಂತಹ ಘಟನೆಗಳು ಅವರ ಕನಸಾಗಿಯೇ ಉಳಿದಿರುತ್ತವೆ.
ಸದ್ಯ ಸಾಮಾಜಿಕ ಜಾಲತಾಣದಲ್ಲಿ ಒಟಿಟಿ ಟ್ರೆಂಡ್ ಆಗಿ ಬಿಟ್ಟಿದೆ. ಈ ಫ್ಲಾಟ್ ಫಾರ್ಮ್ ಅಭಿಮಾನಿಗಳ ಕನಸನ್ನು ಈಡೇರಿಸಲು ಈಗ ಮುಂದಾಗಿದೆ. ಇದಕ್ಕಾಗಿ ತಾರಾ ಜೋಡಿಗೆ ಬರೋಬ್ಬರಿ ರೂ. 100 ಕೋಟಿಯ ಆಫರ್ ನೀಡಿದೆ. ಒಂದು ವೇಳೆ ಇದಕ್ಕೆ ತಾರಾ ಜೋಡಿ ಗ್ರೀನ್ ಸಿಗ್ನಲ್ ನೀಡಿದರೆ, ಅಭಿಮಾನಿಗಳು ದೂರದಿಂದಲೇ ತಮ್ಮ ಸೆಲೆಬ್ರಿಟಿಯ ಕಾರ್ಯಕ್ರಮದಲ್ಲಿ ಭಾಗಿಯಾಗಿ, ತಾವಿದ್ದ ಜಾಗದಿಂದಲೇ ಹರಸಿ, ಹಾರೈಸಬಹುದು.
ಇದೇನಪ್ಪ ವಿಷಯ ಅಂತೀರಾ!? ಡಿ. 9ರಂದು ಬಾಲಿವುಡ್ ತಾರಾ ಜೋಡಿ ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ಮದುವೆ ಇದೆ. ಇದು ಸದ್ಯ ಸಾಮಾಜಿಕ ಜಾಲತಾಣದಲ್ಲಿಯೂ ಸುದ್ದಿಯಾಗಿದೆ. ಜನ ಕುತೂಹಲದಿಂದ ತಮ್ಮ ನೆಚ್ಚಿನ ತಾರೆಯರ ಮದುವೆಯ ಅಪ್ಡೇಟ್ ಸುದ್ದಿಗಳನ್ನು ಓದುತ್ತಿರುತ್ತಾರೆ ಹಾಗೂ ನೋಡುತ್ತಿರುತ್ತಾರೆ. ಆಗ ಬಹುತೇಕರು, ನಮಗೆ ಅಲ್ಲಿ ಬರುವ ಅದೃಷ್ಟ ಇಲ್ಲ ಬಿಡಿ ಎಂದು ಹೇಳಿಯೇ ಹೇಳಿರುತ್ತಾರೆ. ಅದರಂತೆ ಈ ಮದುವೆಗೆ ಕೇವಲ ಸೆಲೆಬ್ರಿಟಿ ಹಾಗೂ ದೊಡ್ಡ ಉದ್ಯಮಿಗಳಿಗೆ ಮಾತ್ರ ಅವಕಾಶ ಇರುವುದು ಎಲ್ಲರಿಗೂ ತಿಳಿದ ಸಂಗತಿ.
ಹೀಗಾಗಿ ಒಟಿಟಿ, ಕತ್ರಿನಾ ಅವರ ಮದುವೆಗೆ ಸಂಬಂಧಿಸಿದ ವಿಡಿಯೋ ಪುಟೇಜ್ ಸೆರೆ ಹಿಡಿಯುವ ಅವಕಾಶ ನೀಡಿದರೆ ಬರೋಬ್ಬರಿ ರೂ. 100 ಕೋಟಿ ನೀಡಲಾಗುವುದು ಎಂಬ ಆಫರ್ ನೀಡಿದೆ ಎಂಬ ಮಾತುಗಳು ಸದ್ಯ ಬಾಲಿವುಡ್ ಅಂಗಳದಲ್ಲಿ ಕೇಳಿ ಬರುತ್ತಿವೆ. ಆದರೆ, ತಾರಾಜೋಡಿ ಮಾತ್ರ ಇದಕ್ಕೆ ಇದುವರೆಗೂ ಒಪ್ಪಿಗೆ ಸೂಚಿಸಿಲ್ಲ ಎಂದು ಕೂಡ ಹೇಳಲಾಗುತ್ತಿದೆ.
ಅಭಿಮಾನಿಗಳ ಬಯಕೆಗಾದರೂ ಸರಿ, ಆಫರ್ ಗಾದರೂ ಸರಿ ತಾರಾ ಜೋಡಿ ಗ್ರೀನ್ ಸಿಗ್ನಲ್ ನೀಡಿದರೆ, ಇಡೀ ವಿವಾಹ ಸಂಭ್ರಮವನ್ನು ಓಟಿಟಿಯಲ್ಲಿ ವೀಕ್ಷಿಸಬಹುದು. ಅಲ್ಲದೇ, ತಾರೆಯರ ಸ್ನೇಹಿತರು ಹಾಗೂ ಸೆಲೆಬ್ರಿಟಿಗಳ ಎಕ್ಸ್ ಕ್ಲೂಸಿವ್ ಸಂದರ್ಶನಗಳು ಕೂಡ ಕಣ್ಣ ಮುಂದೆ ಬರಲಿವೆ.
ಡಿ. 9ರಂದು ರಾಜಸ್ಥಾನದ ಸವಾಯಿ ಮಾಧೋಪುರದಲ್ಲಿರುವ ಸಿಕ್ಸ್ ಸೆನ್ಸ್ ಪೋರ್ಟ್ ಬರ್ವಾರಾದಲ್ಲಿ ಕತ್ರಿನಾ ಹಾಗೂ ವಿಕ್ಕಿ ಕೌಶಲ್ ಮದುವೆ ಸಮಾರಂಭ ನಡೆಯಲಿದೆ. ಇಂದಿನಿಂದಲೇ ಮದುವೆ ಕಾರ್ಯಕ್ರಮಗಳು ಆರಂಭವಾಗಿವೆ. ಇದಕ್ಕಾಗಿ ಬಿಗಿ ಭದ್ರತೆಯನ್ನು ಕೂಡ ಕೈಗೊಳ್ಳಲಾಗಿದೆ.