ಸಂಚಾರಿ ವಿಜಯ್ ಅಪಘಾತ ಪ್ರಕರಣ: ಬೈಕ್ ಓಡಿಸುತ್ತಿದ್ದ ನವೀನ್ ವಿರುದ್ಧವೂ ದೂರು ದಾಖಲು

ಬೆಂಗಳೂರು: ಸಂಚಾರಿ ವಿಜಯ್ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಬೈಕ್ ಓಡಿಸುತ್ತಿದ್ದ ನವೀನ್ ಎಂಬುವರ ಮೇಲೆ ಸಂಚಾರಿ ವಿಜಯ್ ಸಹೋದರ ಸಿದ್ದೇಶ್ ಕುಮಾರ್ ಅವರು ದೂರು ನೀಡಿದ್ದಾರೆ.
ಸ್ನೇಹಿತ ನವೀನ್ ಜತೆ ಬರುವಾಗ ಬೈಕ್ ಸ್ಕಿಡ್ ಆಗಿ ಸಂಭವಿಸಿದ ಅಪಘಾತದಲ್ಲಿ ವಿಜಯ್ ಹಾಗೂ ನವೀನ್ಗೆ ಗಂಭೀರ ಗಾಯಗಳಾಗಿವೆ. ಬನ್ನೇರುಘಟ್ಟ ರಸ್ತೆ ಬಳಿ ಜೆ.ಪಿ ನಗರದ 7th ಬ್ಲಾಕ್ ನಲ್ಲಿ ನಿನ್ನೆ ರಾತ್ರಿ (ಜೂನ್ 12) ಅವಘಡ ಸಂಭವಿಸಿದೆ.
ಬೈಕ್ ಸ್ಕಿಡ್ ಆಗಿ ಬಿದ್ದಿರುವುದಾಗಿ ನವೀನ್ ಹೇಳಿಕೆ ನೀಡಿದ್ದಾರೆ. ಬೈಕ್ ಓಡಿಸುತ್ತಿದ್ದ ನವೀನ್ಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಹಿಂಬದಿ ಕುಳಿತಿದ್ದ ಸಂಚಾರಿ ವಿಜಯ್ಗೆ ತೀವ್ರ ಗಾಯಗಳಾಗಿವೆ. ತೊಡೆ ಹಾಗೂ ತಲೆಯ ಭಾಗಕ್ಕೆ ಗಾಯಗಳಾಗಿದ್ದು, ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮುಂಜಾನೆ ಆಸ್ಪತ್ರೆಯಿಂದ ಮೆಮೋ ಬಂದಾಗ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಕೂಡಲೇ ಆಸ್ಪತ್ರೆಗೆ ತೆರಳಿದ ಜಯನಗರ ಸಂಚಾರಿ ಪೊಲೀಸರು ಮಾಹಿತಿ ಕಲೆಹಾಕಿದ್ದಾರೆ. ಸದ್ಯ ಅಪಘಾತವಾದ ಬೈಕ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸಂಚಾರಿ ವಿಜಯ್ ವಿರುದ್ಧ ಪ್ರಕರಣ ದಾಖಲು
ಬೆಂಗಳೂರಿನಲ್ಲಿ ಸವಾರ ಮತ್ತು ಹಿಂಬದಿ ಸವಾರ ಇಬ್ಬರಿಗೂ ಹೆಲ್ಮೆಟ್ ಧರಿಸುವುದು ಕಡ್ಡಾಯ ನಿಯಮವಿದೆ. ಅದರ ನಡುವೆಯೂ ಲಾಕ್ಡೌನ್ ಸಹ ಘೋಷಣೆ ಆಗಿದ್ದರಿಂದ ರಾತ್ರಿ ಹೊತ್ತು ಮನೆಯಿಂದ ಹೊರಬರದಂತೆ ಸರ್ಕಾರದ ಘೋಷಣೆ ಸಹ ಮಾಡಿತ್ತು. ಆದರೆ, ಇದ್ಯಾವುದನ್ನು ಗಮನಿಸಿದೆ, ಜೆಪಿ ನಗರದ 7ನೇ ಫೇಸ್ ಬಳಿ ಸ್ನೇಹಿತನ ಜತೆಗೆ ಹಿಂಬದಿಯಲ್ಲಿ ಹೆಲ್ಮೆಟ್ ಧರಿಸದೇ ಕುಳಿತು ಪ್ರಯಾಣಿಸಿರುವುದರಿಂದ ಪ್ರಕರಣ ದಾಖಲಿಸಲಾಗಿದೆ.