ಮಂಡ್ಯದಲ್ಲಿ ರೈತರ ಪೆಂಡಾಲ್ ಕಿತ್ತು ಹಾಕಿದ್ದ ಪೊಲೀಸರಿಂದಲೇ ಟೆಂಟ್ ಮರು ನಿರ್ಮಾಣ

ಮಂಡ್ಯ : ಗೃಹ ಸಚಿವ ಅಮಿತ್ ಶಾ ಭೇಟಿ ಹಿನ್ನೆಲೆ ಮಂಡ್ಯದಲ್ಲಿ ಪ್ರತಿಭಟನೆ ನಡೆಸ್ತಿದ್ದ ರೈತರನ್ನು ಪೊಲೀಸರು ಖಾಲಿ ಮಾಡಿಸಿದ್ದರು. ಅಮಿತ್ ಶಾ ಕಾರ್ಯಕ್ರಮಕ್ಕೆ ಅಡ್ಡಿಪಡಿಸಬಹುದೆಂಬ ಕಾರಣಕ್ಕೆ ಮುಂಜಾಗೃತ ಕ್ರಮವಾಗಿ ನಗರದ ವಿಶ್ವೇಶ್ವರಯ್ಯ ಪ್ರತಿಮೆ ಮುಂದೆ ಟೆಂಟ್ ಹಾಕಿ ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ವಶಕ್ಕೆ ಪಡೆದು ಅಲ್ಲಿದ್ದ ಟೆಂಟ್ ತೆರವುಗೊಳಿಸಿದ್ದರು.
ಪೊಲೀಸರ ವರ್ತನೆಗೆ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಘೋಷಣೆ ಕೂಗಿದ್ದರು. ,ನಾಳೆ ಅಮಿತ್ ಶಾಗೆ ಕಪ್ಪು ಬಾವುಟ ಪ್ರದರ್ಶಿಸುವ ಎಚ್ಚರಿಕೆ ನೀಡಿದ್ದರು.
ಇದೀಗ ಪ್ರತಿಭಟನೆ ಹತ್ತಿಕ್ಕಲು ಹೋದ ಪೊಲೀಸರಿಗೆ ಮುಖಭಂಗವಾಗಿದ್ದು, ಪೆಂಡಾಲ್ ಕಿತ್ತು ಹಾಕಿದ ಪೊಲೀಸರಿಂದೇ ಪೆಂಡಾಲ್ ಮರು ನಿರ್ಮಾಣವಾಗಿದೆ. ಈ ಹಿನ್ನೆಲೆ ರೈತರು ಮತ್ತೆ ಪ್ರತಿಭಟನಾ ಸ್ಥಳಕ್ಕೆ ವಾಪಸ್ ಆಗಿದ್ದಾರೆ.
ನಾಳೆ ಮಂಡ್ಯ ಜಿಲ್ಲೆಗೆ ಬರ್ತಿರೋ ಕೇಂದ್ರ ಸಚಿವ ಅಮಿತ್ ಶಾ ಜಿಲ್ಲೆಯಲ್ಲಿ ಮತ್ತು ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಪಕ್ಷಕ್ಕೆ ಶಕ್ತಿ ತುಂಬಲು ಹಲವು ಯೋಜನೆಯೊಂದಿಗೆ ಬರುತ್ತಿದ್ದಾರೆ.