ಮುರುಘಾಶ್ರೀಗಳ ಫೋಟೋ ಕಳವು ಬಸವರಾಜನ್ ಬಂಧನ

ಚಿತ್ರದುರ್ಗ,ನ.೧೦- ಮುರುಘಾ ಮಠದ ಮಾಜಿ ಆಡಳಿತಾಧಿಕಾರಿ ಎಸ್.ಕೆ ಬಸವರಾಜನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಮುರುಘಾ ಮಠದ ರಾಜಾಂಗಣದಲ್ಲಿದ್ದ ಶಿವಮೂರ್ತಿ ಮುರುಘಾ ಶರಣರ ಫೋಟೊ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಮಠದ ಮಾಜಿ ಆಡಳಿತಾಧಿಕಾರಿ ಎಸ್.ಕೆ ಬಸವರಾಜನ್ ಅವರನ್ನು ಗ್ರಾಮಾಂತರ ಠಾಣೆಯ ಪೊಲೀಸರು ಇಂದು ಬಂಧಿಸಿದ್ದಾರೆ.
ಈ ಪ್ರಕರಣದಲ್ಲಿ ಈಗಾಗಲೇ ಬಂಧಿತರಾಗಿರುವ ಹೊಸಹಳ್ಳಿ ಗ್ರಾಮಪಂಚಾಯ್ತಿ ಮಾಜಿ ಸದಸ್ಯ ಮೋಹನ್‌ಮೂರ್ತಿ ಹಾಗೂ ಕಾಲೇಜು ಉಪನ್ಯಾಸಕ ಶಿವಾನಂದಸ್ವಾಮಿ ಅವರ ಹೇಳಿಕೆಯಾಧರಿಸಿ ಪೊಲೀಸರು ಬಸವರಾಜನ್ ಅವರನ್ನು ಬಂಧಿಸಿದ್ದಾರೆ.
ರಾಜಾಂಗಣದಲ್ಲಿದ್ದ ಫೋಟೊ ತೆಗೆಯಲು ಬಸವರಾಜನ್ ಪ್ರಚೋದನೆ ಮಾಡಿದ್ದರು ಎಂಬ ಆರೋಪದ ಮೇಲೆ ಬಂಧನ ಆಗಿದೆ.
ಈ ಪ್ರಕರಣದ ಮತ್ತೊಬ್ಬ ಆರೋಪಿ ಶ್ರೀನಿವಾಸನ್ ಎಂಬುವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಸಿಸಿ ಟಿವಿಯಲ್ಲಿ ಸೆರೆಯಾದ ದೃಶ್ಯದ ಆಧಾರದ ಮೇಲೆ ನ. ೭ ರಂದು ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.
ಮಠಕ್ಕೆ ಗಣ್ಯರು ಭೇಟಿ ನೀಡಿದ್ದ ಸಂದರ್ಭದಲ್ಲಿ ಮುರುಘಾ ಶರಣರು ಗಣ್ಯರೊಂದಿಗಿದ್ದ ಫೋಟೊಗಳನ್ನು ರಾಜಾಂಗಣದಲ್ಲಿ ಹಾಕಲಾಗಿತ್ತು.