ಚಾಮರಾಜನಗರ ಜಿಲ್ಲೆಯಲ್ಲಿ ಮಂಜಿನಮಳೆ!

ಚಾಮರಾಜನಗರ ಜಿಲ್ಲೆಯಲ್ಲಿ ಮಂಜಿನಮಳೆ!

ಚಾಮರಾಜನಗರ: ಜಿಲ್ಲೆಯಾದ್ಯಂತ ಬುಧವಾರ ದಟ್ಟ ಮಂಜಿನ ಮಳೆಯ ಸುರಿದಿದ್ದು ಬೆಳಿಗ್ಗೆ ೮.೩೦ರವರೆಗೂ ಮಂಜು ಕವಿದಿತ್ತು. ಇದರೊಂದಿಗೆ ಚಳಿಯೂ ಶುರುವಾಗಿದೆ.

ಕೆಲದಿನಗಳಿಂದಲೇ ಇಬ್ಬನಿ ಬೀಳುತ್ತಿದೆಯಾದರೂ ಬುಧವಾರದ ಮಟ್ಟಿಗೆ ಮಂಜು ಸುರಿದಿರಲಿಲ್ಲ.

ಪ್ರಖರ ಬಿಸಿಲು ಠಳಾಯಿಸುವವರೆಗೂ ಮಂಜಿನ ಕಾರಣದಿಂದಾಗಿ ವಾಹನಗಳು ಲೈಟ್ ಹಾಕಿಕೊಂಡೇ ಸಂಚರಿಸಬೇಕಾಯಿತು.

ವಾಯುವಿಹಾರ ಮಾಡುವವರು ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಹೆಜ್ಜೆ ಹಾಕಬೇಕಾಯಿತು. ಇಬ್ಬನಿ ಹಿನ್ನೆಲೆಯಲ್ಲಿ ರಸ್ತೆಬದಿಯಲ್ಲಿ ವಾಕಿಂಗ್ ಮಾಡುವವರು ಎಚ್ಚರಿಕೆ ವಹಿಸಬೇಕಿದೆ. ಮಂಜು ಕವಿದಾಗ ತೀರಾ ಸನಿಹಕ್ಕೆ ಬರುವವರೆಗೂ ಮುಂದೆ ಏನಿದೆ ಎಂಬುದೇ ಗೊತ್ತಾಗುವುದಿಲ್ಲ. ಹೀಗಾಗಿ ಹಿಮದ ಈ ಸಂದರ್ಭ ರಸ್ತೆಬದಿಯಲ್ಲಿ ವಾಯುವಿಹಾರ ಮಾಡದಿರುವುದೇ ಸೂಕ್ತ.

ಜಿಲ್ಲೆಯಲ್ಲಿ ಸತತವಾಗಿ ಮಳೆಯಾಗಿ ಕೆರೆಕಟ್ಟೆ ಹಾಗೂ ಜಲಾಶಯಗಳು ಭರ್ತಿ ಕಂಡಿರುವುದರಿಂದ ಇತರೆಡೆಗಿಂತ ಈ ನೀರಿನ ಪ್ರದೇಶಗಳಲ್ಲಿ ಇಬ್ಬನಿ ತುಸು ಹೆಚ್ಚಾಗಿಯೇ ಬೀಳತೊಡಗಿದೆ. ಆದ ಕಾರಣ ನೀರು ಹರಿದಾಡುವ ಭಾಗಗಳಲ್ಲಿನ ಜನರು ಅದಾಗಲೇ ಬೆಚ್ಚನೆಯ ಉಡುಪುಗಳ ಮೊರೆ ಹೋಗುವಂತಾಗಿದೆ.
ಆರೋಗ್ಯದ ಮೇಲೂ ಇಬ್ಬನಿ ಗಂಭೀರ ಪರಿಣಾಮ ಬೀರುತ್ತದೆ. ತಲೆನೋವು, ನೆಗಡಿ ಹಾಗೂ ಜ್ವರಕ್ಕೂ ಕಾರಣವಾಗಲಿದೆ. ಈ ಹಿನ್ನೆಲೆಯಲ್ಲಿ ಇಬ್ಬನಿ ತಲೆಮೇಲೆ ಬೀಳದಂತೆ ಜನತೆ ಟೊಪ್ಪಿ ಅಥವಾ ಟವೆಲ್ ಸುತ್ತಿಕೊಂಡು ದೈನಂದಿನ ಚಟುವಟಿಕೆಯಲ್ಲಿ ತೊಡಗಿದ್ದಾರೆ.

ಮಂಜು ಕೆಲ ಬೆಳೆಗಳಿಗೆ ವರದಾನವಾದರೆ ಅನೇಕ ಬೆಳೆಗಳ ರೋಗರುಜಿನಕ್ಕೂ ಕಾರಣವಾಗಲಿದೆ ಎನ್ನುತ್ತಾರೆ ಕೃಷಿ ತಜ್ಞರು. ಹಸಿಕಡಲೆ, ಕೊತ್ತಂಬರಿ ಬೆಳೆಗಳು ಇಬ್ಬನಿ-ಚಳಿ ವಾತಾವರಣದಲ್ಲೇ ಬೆಳೆಯುತ್ತವೆ. ತರಕಾರಿ ಇನ್ನಿತರ ಬೆಳೆಗಳು ವಿಶೇಷವಾಗಿ ಕುಂಬಳ ಜಾತಿಯ ಬಳ್ಳಿ ಸಸ್ಯಗಳಲ್ಲಿ ಇಬ್ಬನಿಯಿಂದ ಬೂದು ರೋಗ ತಲೆ ಎತ್ತುವ ಅಪಾಯವಿದೆ ಎಂಬುದು ತಜ್ಞರ ಅನಿಸಿಕೆ.

ಇಬ್ಬನಿ ಪ್ರಾರಂಭವಾಯಿತೆಂದರೆ ಮಳೆಗೆ ಬ್ರೇಕ್ ಬಿದ್ದಂತೆ ಎಂಬುದು ರೈತರ ಕೃಷಿ ಲೆಕ್ಕಾಚಾರ. ಕ್ಯಾಲೆಂಡರ್ ಪ್ರಕಾರ, ಇನ್ನೂ ಚಳಿಗಾಲ ಶುರುವಾಗಿಲ್ಲ. ಆದರೂ ಥಂಡಿ ವಾತಾವರಣ ಈಗಲೇ ಚಿಗುರೊಡೆದಿದೆ.

ಚಾಮರಾಜನಗರ ಜಿಲ್ಲೆಯಲ್ಲಿ ಬುಧವಾರ ಬೆಳಿಗ್ಗೆ ೮.೩೦ಕ್ಕೆ ಕೊನೆಗೊಂಡಂತೆ ಕನಿಷ್ಠ ೧೭.೦೨ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಇದರ ಹಿಂದಿನ ೨೪ಗಂಟೆ ಅವಧಿಯಲ್ಲಿ ಕನಿಷ್ಠ ೧೬.೦೭ಡಿಗ್ರಿ ಸೆಲ್ಸಿಯಸ್ ತಾಪಮಾನ ವರದಿಯಾಗಿದೆ. -ಹೆಚ್.ಕೆ.ರಜತ್, ಕೃಷಿ ಹವಾಮಾನ ತಜ್ಞ.