ಪ್ರೇಮಿಗಳ ದಿನ ಪಾರ್ಕ್‌ನಲ್ಲಿ ಕುಳಿತಿದ್ದ ಜೋಡಿಯನ್ನು ಹಿಡಿದು ರಾಖಿ ಕಟ್ಟಿಸಿದ ಭಜರಂಗದಳ!

ಪ್ರೇಮಿಗಳ ದಿನ ಪಾರ್ಕ್‌ನಲ್ಲಿ ಕುಳಿತಿದ್ದ ಜೋಡಿಯನ್ನು ಹಿಡಿದು ರಾಖಿ ಕಟ್ಟಿಸಿದ ಭಜರಂಗದಳ!
ಮೊರಾದಾಬಾದ್: ಸಾರ್ವಜನಿಕ ಸ್ಥಳಗಳಲ್ಲಿ ಪ್ರೇಮಿಗಳನ್ನು ಕಂಡರೆ ಸಂಘ ಪರಿವಾರದ ಕಾರ್ಯಕರ್ತರು   ಉಳಿದು ಬೀಳೋದನ್ನು ಕೇಳಿದ್ದೀವಿ. ವಿಶೇಷವಾಗಿ ಫೆಬ್ರವರಿ 14ರ ವ್ಯಾಲೆಂಟೈನ್ಸ್ ಡೇ    ದಿನ ಪ್ರೇಮ ಪಕ್ಷಿಗಳಿಗೆ  ಕಿರಿಕ್ ಮಾಡೋದನ್ನೂ ಕೇಳಿದ್ದೀವಿ. ಪಾರ್ಕ್, ಸಿನಿಮಾ ಥಿಯೇಟರ್ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಪರಸ್ಪರ ಸಮಯ ಕಳೆಯುವ ಲವರ್ಸ್‌ಗಳನ್ನು ಹಿಡಿದು ಅವರಿಗೆ ಮದುವೆ ಮಾಡಿದ್ದನ್ನೂ ಕೇಳಿದ್ದೀವಿ.
ಆದರೆ ಇಲ್ಲೊಂದು ಕಡೆ ನಿನ್ನೆ ಅಂದರೆ ವ್ಯಾಲೆಂಟೈನ್ಸ್ ಡೇ ದಿನದಂದು ಪಾರ್ಕ್‌ನಲ್ಲಿ ಸಮಯ ಕಳೆಯುತ್ತಿದ್ದ ಪ್ರೇಮಿಗಳನ್ನು ಹಿಡಿದು ಅವರಿಗೆ ಪರಸ್ಪರ ರಾಖಿ ಕಟ್ಟಿಸಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಹೌದು.. ಉತ್ತರ ಪ್ರದೇಶದ ಮೊರಾದಾಬಾದ್‌ ಸಮೀಪ ಇರುವ ಉದ್ಯಾನವನವೊಂದರಲ್ಲಿ ಪ್ರೇಮಿಗಳ ದಿನದಂದು ಅನೇಕ ಜೋಡಿಗಳು ತಿರುಗಾಡುತ್ತಿದ್ದವು.
ಈ ವೇಳೆ ಸ್ಥಳಕ್ಕೆ ಆಗಮಿಸಿದ ಭಜರಂಗ ದಳ ಸಂಘಟನೆಯ ಸದಸ್ಯರ ಗುಂಪು ಪ್ರೇಮಿಗಳತ್ತ ಓಡೋಡಿ ಬಂದು ಅವರನ್ನು ಹಿಡಿಯಲು ಪ್ರಯತ್ನಿಸಿದೆ. ಆಗ ಅಲ್ಲಿದ್ದ ಪ್ರೇಮಿಗಳು ಚೆಲ್ಲಾಪಿಲ್ಲಿಯಾಗಿದ್ದು, ಭಜರಂಗ ದಳದ ಸದಸ್ಯರನ್ನು ಕಂಡು ಜೋಡಿಗಳು ಪರಸ್ಪರ ಬೇರ್ಪಟ್ಟು ಅಲ್ಲಿಂದ ಕಣ್ತಪ್ಪಿಸಲು ಯತ್ನಿಸಿದ್ದಾರೆ. ಈ ವೇಳೆ ಒಂದು ಜೋಡಿಯನ್ನು ಹಿಡಿದ ಭಜರಂಗ ದಳದ ಸದಸ್ಯರು ಅವರನ್ನು ವಿಚಾರಿಸಲು ಆರಂಭಿಸಿದ್ದಾರೆ.

ಆಗ ಅವರು ಆ ಜೋಡಿಯನ್ನು ವಿಚಾರಿಸಿದಾಗ ಸಂಬಂಧಿಕರು ಅಲ್ಲ, ಪ್ರೇಮಿಗಳು ಎಂದು ತಿಳಿದು ಬಂದಿದ್ದು, ಅದಾಗಲೇ ರಾಖಿ ಹಿಡಿದುಕೊಂಡೇ ಬಂದಿದ್ದ ಭಜರಂಗ ದಳ ಸದಸ್ಯರು ಆ ಪ್ರೇಮಿಗಳಿಗೆ ಬಲವಂತವಾಗಿ ರಾಖಿ ಕಟ್ಟಿದ್ದಾರೆ. ಅಲ್ಲದೇ ನಮ್ಮ ಹಿಂದೂ ಸಂಸ್ಕೃತಿಯಲ್ಲಿ ಗಂಡ ಹೆಂಡತಿ ಬಿಟ್ಟರೆ ಉಳಿದ ಎಲ್ಲರೂ ಸಹೋದರ ಸಹೋದರಿಗೆ ಸಮಾನ.
ನೀವು ಮದುವೆಗೂ ಮುನ್ನ ಪ್ರೇಮಿಗಳಾಗಿ ಪ್ರೀತಿಸುವ ಹಾಗಿಲ್ಲ. ನಿಮಗೆ ಮನೆಯಲ್ಲಿ ಹೇಳೋರು ಕೇಳೋರು ಯಾರೂ ಇಲ್ವಾ ಎಂದು ಗದರಿಸಿದ್ದಲ್ಲದೇ, ಬಲವಂತದಿಂದ ಪರಸ್ಪರ ರಾಖಿ ಕಟ್ಟಿಸಿ ಇನ್ಮುಂದೆ ನೀವು ಅಣ್ಣ ತಂಗಿ ಇದ್ದಂತೆ ಎಂದು ಹೇಳಿ ಎಚ್ಚರಿಕೆ ಕೊಟ್ಟು ಕಳುಹಿಸಿದ್ದಾರೆ.

ಈ ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾಷ್ಟ್ರೀಯ ಭಜರಂಗ ದಳದ ಉತ್ತರ ಪ್ರದೇಶ ವಿಭಾಗದ ರಾಜ್ಯ ಘಟಕದ ಅಧ್ಯಕ್ಷ ರೋಹನ್ ಸಕ್ಸೇನಾ, ಭಾರತೀಯ ಸಂಸ್ಕೃತಿಯಲ್ಲಿ ಪತಿ- ಪತ್ನಿಯರನ್ನು ಹೊರತುಪಡಿಸಿದರೆ ಎಲ್ಲಾ ಸಹೋದರಿಯರು ನಮಗೆ ತಾಯಿ ಮತ್ತು ಸಹೋದರಿಯರಂತೆ,
ಭಾರತದಲ್ಲಿ ನಿಮ್ಮ ಹೆಂಡತಿಯನ್ನು ಹೊರತುಪಡಿಸಿ ಪ್ರತಿಯೊಬ್ಬ ಮಹಿಳೆಯನ್ನು ನಿಮ್ಮ ಸಹೋದರಿಯಂತೆ ಕಾಣಬೇಕು. ಹಾಗಾಗಿ ನಾವು ಪಾರ್ಕ್‌ಗೆ ಹೋಗಿ ಲವರ್ಸ್‌ಗಳನ್ನು ಹಿಡಿದು ಅವರಿಗೆ ರಾಖಿ ಕಟ್ಟಿದ್ದೇವೆ' ಎಂದು ಹೇಳಿದ್ದಾರೆ.

ಅಲ್ಲದೇ, 'ಆ ಪಾರ್ಕ್‌ನಲ್ಲಿ ಹುಡುಗರು ಮತ್ತು ಹುಡುಗಿಯರು ಅನುಮಾನ ಬರುವಂತೆ ತಿರುಗಾಡುತ್ತಿದ್ದರು. ನಾವು ಅವರನ್ನು ಹಿಡಿದು ಕೇಳಿದಾಗ ನಮ್ಮ ಮಧ್ಯೆ ಯಾವುದೇ ಸಂಬಂಧವಿಲ್ಲ ಎಂದು ಹೇಳಿದರು. ಆಗ ನಾವು ಅವರಿಗೆ ಪರಸ್ಪರ ರಾಖಿ ಕಟ್ಟುವಂತೆ ಮಾಡಿದೆವು ಎಂದು ಭಜರಂಗ ದಳದ ರೋಹನ್ ಸಕ್ಸೇನಾ ಹೇಳಿದರು.

ಇದೆಲ್ಲದರ ಮಧ್ಯೆ ಪಾರ್ಕ್‌ನಲ್ಲಿ ಕುಳಿತು ಸಮಯ ಕಳೆಯುತ್ತಿದ್ದ ಪ್ರೇಮಿಗಳನ್ನು ಭಜರಂಗ ದಳದ ಸದಸ್ಯರು ಓಡಿಸಿದ ಘಟನೆ ಗುಜರಾತ್‌ನಲ್ಲಿ ನಡೆದಿದೆ. ಗುಜರಾತ್ ರಾಜಧಾನಿ ಗಾಂಧಿ ನಗರದ ಪ್ರಖ್ಯಾತ ಉದ್ಯಾನವನದಲ್ಲಿ ಪ್ರೇಮಿಗಳ ದಿನ ಹಿನ್ನೆಲೆ ನೂರಾರು ಜನ ಆಗಮಿಸಿದ್ದರು. ಪ್ರೇಮ ಜೋಡಿಗಳು ಕೂಡ ಆ ಪಾರ್ಕ್‌ಗೆ ಆಗಮಿಸಿದ್ದವು.

ಈ ವೇಳೆ ಏಕಾಏಕಿ ಪಾರ್ಕ್‌ಗೆ ಆಗಮಿಸಿದ ಭಜರಂಗ ದಳದ ಕಾರ್ಯಕರ್ತರು ಉದ್ಯಾನವನದಲ್ಲಿ ಕುಳಿತು ಸಮಯ ಕಳೆಯುತ್ತಿದ್ದ ಲವರ್ಸ್‌ಗಳನ್ನು ಅಲ್ಲಿಂದ ಓಡಿಸಿದ ಘಟನೆ ನಡೆಯಿತು.