ಕಿರುತರೆ ನಟ ನಿರ್ದೇಶಕ ರವಿಕಿರಣ್ ಸಹೋದರ ನಿಧನ
ಬೆಂಗಳೂರು : ಕನ್ನಡ ಕಿರುತೆರೆಯ ಖ್ಯಾತ ನಟ, ನಿರ್ದೇಶಕ ರವಿಕಿರಣ್ ಅವರ ಸಹೋದರ ಭಾಸ್ಕರ್ ರವಿವಾರ ತಡರಾತ್ರಿ ನಿಧನ ಹೊಂದಿದ್ದಾರೆ. ಬದುಕು, ಸುಕನ್ಯಾ ಸೇರಿದಂತೆ ಹಲವು ಧಾರಾವಾಹಿಗಳನ್ನು ಭಾಸ್ಕರ್ ನಿರ್ಮಿಸಿದ್ದರು. ರವಿಕಿರಣ್ ಬ್ಯಾನರ್ ನಲ್ಲಿ ಬರುತ್ತಿದ್ದ ಬಹುತೇಕ ಧಾರಾವಾಹಿಗಳಿಗೆ ಭಾಸ್ಕರ್ ನಿರ್ಮಾಪಕರಾಗಿರುತ್ತಿದ್ದರು.
ಭಾಸ್ಕರ್ ಕೇವಲ ನಿರ್ಮಾಪಕರು ಮಾತ್ರವಲ್ಲ, ಉದ್ಯಮಿಯೂ ಕೂಡ. ಹಲವಾರು ಉದ್ಯಮದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಜೊತೆಗೆ ಕರ್ನಾಟಕ ಟೆಲಿವಿಷನ್ ಕ್ಲಬ್ ನ ನಿರ್ದೇಶಕರಾಗಿಯೂ ಅವರು ಟಿವಿ ಉದ್ಯಮದಲ್ಲಿ ಕೆಲಸ ಮಾಡಿದ್ದಾರೆ. ಇವರ ನಿರ್ಮಾಣದಲ್ಲಿ ಮೂಡಿ ಬಂದ ಬದುಕು ಸಾವಿರಕ್ಕೂ ಹೆಚ್ಚು ಕಂತುಗಳಲ್ಲಿ ಪ್ರಸಾರವಾಗಿದೆ. ಸುಕನ್ಯಾ ಕೂಡ ಜನಪ್ರಿಯ ಧಾರಾವಾಹಿಗಳಲ್ಲಿ ಒಂದು.
ಭಾಸ್ಕರ್ ಪುತ್ರ ಸಿನಿಮಾ ರಂಗದಲ್ಲಿ ಸಕ್ರೀಯರಾಗಿದ್ದಾರೆ. ತೆಲುಗು ಮತ್ತು ಕನ್ನಡದ ಹಲವು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಭಾಸ್ಕರ್ ನಿಧನಕ್ಕೆ ಕಿರುತೆರೆಯ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ. ಟೆಲಿವಿಷನ್ ಉದ್ಯಮದ ನಾನಾ ಸಂಘಟನೆಗಳು ಸಂತಾಪ ವ್ಯಕ್ತಪಡಿಸಿವೆ.