ಸಿಟ್ಟು ಸಿಕ್ಕಾಪಟ್ಟೆ ಹೆಚ್ಚಾಗಲೆಂದು 2 ತಿಂಗಳು ಔಷಧ ಬಿಟ್ಟಿದ್ದ; ಸಚಿವರನ್ನು ಕೊಂದ ಎಎಸ್​ಐ ಬಾಯ್ಬಿಟ್ಟ ರಹಸ್ಯ

ಸಿಟ್ಟು ಸಿಕ್ಕಾಪಟ್ಟೆ ಹೆಚ್ಚಾಗಲೆಂದು 2 ತಿಂಗಳು ಔಷಧ ಬಿಟ್ಟಿದ್ದ; ಸಚಿವರನ್ನು ಕೊಂದ ಎಎಸ್​ಐ ಬಾಯ್ಬಿಟ್ಟ ರಹಸ್ಯ

ಹಮದಾಬಾದ್​: ಒಡಿಶಾದ ಆರೋಗ್ಯ ಸಚಿವ ನಬಾ ಕಿಶೋರ್ ದಾಸ್ ಅವರನ್ನು ಸಹಾಯಕ ಸಬ್​ ಇನ್​ಸ್ಪೆಕ್ಟರ್ ಗೋಪಾಲ್ ದಾಸ್​ ಶೂಟ್ ಮಾಡಿ ಕೊಂದಿದ್ದು ಬಹುತೇಕ ಎಲ್ಲರಿಗೂ ಗೊತ್ತಿರುವಂಥ ವಿಷಯವೇ. ಆದರೆ ಅದಕ್ಕಾಗಿ ಆತ ಏನು ಸಿದ್ಧತೆ ಮಾಡಿಕೊಂಡಿದ್ದ ಎಂಬ ಸಂಗತಿ ಹೊರಬಿದ್ದಿದೆ.

54 ವರ್ಷದ ಎಎಸ್​ಐ ಗೋಪಾಲ್ ದಾಸ್​ ಜ. 29ರಂದು ಕಾರ್ಯಕ್ರಮವೊಂದಕ್ಕೆ ಹಾಜರಾಗಿದ್ದ ಆರೋಗ್ಯ ಸಚಿವ ನಬಾ ಕಿಶೋರ್ ದಾಸ್ ಅವರಿಗೆ ಶೂಟ್ ಮಾಡಿದ್ದ. ಗಂಭೀರವಾಗಿ ಗಾಯಗೊಂಡಿದ್ದ ಸಚಿವರು ಸಾವಿಗೀಡಾಗಿದ್ದರು. ಈ ಹಿನ್ನೆಲೆಯಲ್ಲಿ ಅಂದೇ ಈತನನ್ನು ವಶಕ್ಕೆ ಪಡೆಯಲಾಗಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಆರಂಭಿಸಿದ್ದರೂ, ಸರಿಯಾದ ಮಾಹಿತಿ ಈತ ಬಾಯಿಬಿಟ್ಟಿರಲಿಲ್ಲ. ಹೀಗಾಗಿ ಪೊಲೀಸರು ನಾರ್ಕೊಅನಾಲಿಸಿಸ್​ಗೆ ಒಳಪಡಿಸಿದ್ದರು.

ಅನಾಲಿಸಿಸ್​ಗೆ ಸಂಬಂಧಿಸಿದಂತೆ ಖಚಿತ ಮಾಹಿತಿ ಗುಟ್ಟಾಗಿದ್ದರೂ ಒಂದಷ್ಟು ಸ್ವಾರಸ್ಯಕರ ಸಂಗತಿ ಮೂಲಗಳಿಂದ ಬಹಿರಂಗಗೊಂಡಿದೆ. ಬೈಪೋಲಾರ್ ಡಿಸಾರ್ಡರ್​ನಿಂದ ಬಳಲುತ್ತಿದ್ದ ಈತ ಅದಕ್ಕಾಗಿ ಔಷಧ ತೆಗೆದುಕೊಳ್ಳುವುದನ್ನು ಎರಡು ತಿಂಗಳಿನಿಂದ ನಿಲ್ಲಿಸಿದ್ದ ಎಂಬುದು ಗೊತ್ತಾಗಿದೆ. ಅದರಲ್ಲೂ ಸಚಿವರ ವಿರುದ್ಧದ ಸಿಟ್ಟು ಸಿಕ್ಕಾಪಟ್ಟೆ ಹೆಚ್ಚಾಗಲಿ ಎಂಬ ಕಾರಣಕ್ಕೇ ಈತ 2 ತಿಂಗಳು ಮದ್ದು ತೆಗೆದುಕೊಂಡಿಲ್ಲ ಎಂಬುದು ಅನಾಲಿಸಿಸ್​ ವೇಳೆ ತಿಳಿದುಬಂದಿದೆ. ಹತ್ಯೆಗೆ ವೈಯಕ್ತಿಕ ದ್ವೇಷ, ಸಿದ್ಧಾಂತಭೇದವೂ ಕಾರಣ ಎನ್ನಲಾಗಿದೆ. ಅದಾಗ್ಯೂ ಖಚಿತ ಕಾರಣ ಏನು ಎಂಬುದು ಇನ್ನೂ ನಿಖರವಾಗಿ ಬಹಿರಂಗಗೊಂಡಿಲ್ಲ.