ಸಾಲ ಮರುಪಾವತಿಗೆ ಪೇಮೆಂಟ್‌ ಅಗ್ರಿಗೇಟರ್‌ಗಳನ್ನು ಬಳಸಬಹುದು: ಆರ್‌ಬಿಐ

ಸಾಲ ಮರುಪಾವತಿಗೆ ಪೇಮೆಂಟ್‌ ಅಗ್ರಿಗೇಟರ್‌ಗಳನ್ನು ಬಳಸಬಹುದು: ಆರ್‌ಬಿಐ

ವದೆಹಲಿ: ಸಾಲ ನೀಡುವ ಸೇವಾ ಪೂರೈಕದಾರರಂತೆ(ಎಲ್‌ಎಸ್‌ಪಿ) ಕಾರ್ಯ ನಿರ್ವಹಿಸುವ ಪೇಮೆಂಟ್‌ ಅಗ್ರಿಗೇಟರ್‌ಗಳನ್ನು(ಪಿಎ) ಸಾಲ ಮರುಪಾವತಿಗೆ ಬಳಸಲು ಭಾರತೀಯ ರಿಸರ್ವ್‌ ಬ್ಯಾಂಕ್‌(ಆರ್‌ಬಿಐ) ಮಂಗಳವಾರ ಅನುಮತಿಸಿದೆ.

ಎಲ್‌ಎಸ್‌ಪಿ ಪಾತ್ರ ನಿರ್ವಹಿಸುವ ಪೇಮೆಂಟ್‌ ಅಗ್ರಿಗೇಟರ್‌ಗಳು ಡಿಜಿಟಲ್‌ ಸಾಲ ಮಾರ್ಗಸೂಚಿಗಳನ್ನು ಅನುಸರಿಸಬೇಕು ಎಂದು ಆರ್‌ಬಿಐ ತನ್ನ ಮಾರ್ಗಸೂಚಿಗಳಲ್ಲಿ ಹೇಳಿದೆ.

“ಪಿಎ ಸೇವೆಗಳನ್ನು ಮಾತ್ರ ನೀಡುವ ಕಂಪನಿಗಳು ಡಿಜಿಟಲ್‌ ಸಾಲ ಮಾರ್ಗಸೂಚಿಗಳಿಂದ ಹೊರಗುಳಿಯುತ್ತವೆ. ಆದರೆ ಎಲ್‌ಎಸ್‌ಪಿ ಪಾತ್ರ ನಿರ್ವಹಿಸುವ ಯಾವುದೇ ಪಿಎಗಳು ಡಿಜಿಟಲ್‌ ಸಾಲ ಮಾರ್ಗಸೂಚಿಗಳನ್ನು ಅನುಸರಿಸಬೇಕು,’ ಎಂದು ಸೂಚಿಸಿದೆ.

ಈ ಹಿಂದೆ, ಸಾಲಗಳ ಮರುಪಾವತಿಯು ಬ್ಯಾಂಕ್‌ಗಳಿಂದ ಗ್ರಾಹಕರ ಖಾತೆಗಳಿಗೆ ನೇರವಾಗಿ ಹೋಗುತ್ತಿತ್ತು. ಇದು ಈ ವಹಿವಾಟುಗಳಲ್ಲಿ ಪಿಎಗಳ ಅಗತ್ಯತೆಯನ್ನೇ ತೆಗೆದುಹಾಕಿತ್ತು. ಇದನ್ನು ಪ್ರಶ್ನಿಸಿ ಪೇಮೆಂಟ್‌ ಅಗ್ರಿಗೇಟರ್‌ಗಳು ಆರ್‌ಬಿಐಗೆ ಮೇಲ್ಮನವಿ ಸಲ್ಲಿಸಿದ್ದವು.