ಮಹಿಳೆಯ ಗರ್ಭಕೋಶದೊಳಗೆ 2.25 ಕೆಜಿಯ 222 ಗೆಡ್ಡೆಗಳಿದ್ದವಂತೆ, ಆಕೆಗೆ ಗೊತ್ತೇ ಇರ್ಲಿಲ್ಲ!

ಮಹಿಳೆಯ ಗರ್ಭಕೋಶದೊಳಗೆ 2.25 ಕೆಜಿಯ 222 ಗೆಡ್ಡೆಗಳಿದ್ದವಂತೆ, ಆಕೆಗೆ ಗೊತ್ತೇ ಇರ್ಲಿಲ್ಲ!
ಬೆಂಗಳೂರು(ನ.11): ಬೆಂಗಳೂರಿನಲ್ಲಿ 34 ರ ಹರೆಯದ ಮಹಿಳೆಯ ಗರ್ಭಕೋಶ(Uterus)ದಿಂದ 222 ಗೆಡ್ಡೆಗಳನ್ನು (Fibroids) ಯಶಸ್ವಿಯಾಗಿ ತೆಗೆದುಹಾಕಲಾಗಿದೆ. ಅಸಹಜ ಮುಟ್ಟಿನ (Irregular Periods) ರಕ್ತಸ್ರಾವದಿಂದ ಬಳಲುತ್ತಿದ್ದ ರಿತಿಕಾ ಆಚಾರ್ಯರ ಗರ್ಭಕೋಶ(Uterus)ದಲ್ಲಿ ವಿವಿಧ ಗಾತ್ರದ ಹೆಚ್ಚಿನ ಸಂಖ್ಯೆಯ ಗೆಡ್ಡೆ(Fibroids)ಗಳು ಇರುವುದು ಪತ್ತೆಯಾಗಿದೆ.
ಈ ಗೆಡ್ಡೆಗಳು ಗರ್ಭಾಶಯದ ಅಂಗರಚನಾಶಾಸ್ತ್ರವನ್ನು ಸಂಪೂರ್ಣವಾಗಿ ವಿರೂಪಗೊಳಿಸಿವೆ ಎಂದು ವೈದ್ಯರು ಹೇಳಿದ್ದಾರೆ. ಫೈಬ್ರಾಯ್ಡ್‌ಗಳು ಸ್ನಾಯು ಮತ್ತು ನಾರಿನ ಅಂಗಾಂಶಗಳ ಹಾನಿಕರವಲ್ಲದ ಗೆಡ್ಡೆಯಾಗಿದ್ದು, ಸಾಮಾನ್ಯವಾಗಿ ಗರ್ಭಾಶಯದ ಗೋಡೆಯಲ್ಲಿ ಬೆಳವಣಿಗೆಯಾಗುತ್ತದೆ.

ಗರ್ಭಾಶಯದ ಫೈಬ್ರಾಯ್ಡ್‌ಗಳು (ಗೆಡ್ಡೆಗಳು) ಯಾವುವು?

ಈ ಗೆಡ್ಡೆಗಳು ಕ್ಯಾನ್ಸರ್ ಅಲ್ಲದ ಬೆಳವಣಿಗೆಯನ್ನು ಹೊಂದಿರುತ್ತವೆ ಹಾಗೂ ಸ್ನಾಯು ಮತ್ತು ನೀರಿನ ಅಂಗಾಂಶಗಳಿಂದ ರಚಿಸಲ್ಪಟ್ಟಿರುತ್ತವೆ ಇವುಗಳ ಗಾತ್ರ ಹಾಗೂ ಆಕಾರ ಬದಲಾಗಬಹುದು. ಈ ಗೆಡ್ಡೆಗಳಿಂದ ಉಂಟಾಗುವ ರೋಗಲಕ್ಷಣಗಳೆಂದರೆ ಶ್ರೋಣಿಯ ನೋವು, ಅಸಹಜ ಋತು ಚಕ್ರ, ಗರ್ಭಪಾತ, ಅಕಾಲಿಕ ಹೆರಿಗೆ, ಹೊಟ್ಟೆ ಉಬ್ಬುವುದು, ಮೂತ್ರ ಹಾಗೂ ವಿಸರ್ಜನೆ ಕ್ರಿಯೆಗೆ ತೊಂದರೆಯನ್ನುಂಟು ಮಾಡುತ್ತದೆ.

ಈ ಗೆಡ್ಡೆಗಳು ಒಮ್ಮೊಮ್ಮೆ ತಾವಾಗಿಯೇ ಹೊರಟು ಹೋಗುತ್ತವೆ ಆದರೆ ಚಿಕಿತ್ಸೆ ನೀಡದೆಯೇ ಹಾಗೆಯೇ ಬಿಟ್ಟಲ್ಲಿ ಅವು ಗಾತ್ರ ಹಾಗೂ ಸಂಖ್ಯೆಯಲ್ಲಿ ಬೆಳವಣಿಗೆಯಾಗುತ್ತವೆ. ರಕ್ತಹೀನತೆ ಮತ್ತು ಬಂಜೆತನ ಒಳಗೊಂಡಂತೆ ಮತ್ತಷ್ಟು ತೊಡಕುಗಳಿಗೆ ಕಾರಣವಾಗಿರುವ ರೋಗಲಕ್ಷಣಗಳನ್ನು ಇನ್ನಷ್ಟು ಹದಗೆಡಿಸುತ್ತದೆ.


ಆಸ್ಪತ್ರೆಗೆ ಬಂದಾಗ ರೋಗಿಯ ಸ್ಥಿತಿ ಹೇಗಿತ್ತು?

ರೋಗಿ ಆಚಾರ್ಯ ಆಸ್ಪತ್ರೆಗೆ ಬಂದ ಸಮಯದಲ್ಲಿ ಆಕೆ 8 ತಿಂಗಳ ಗರ್ಭಿಣಿಯಂತೆ ಕಾಣುತ್ತಿದ್ದರು. ವೈದ್ಯಕೀಯ ರೋಗನಿರ್ಣಯವು ಫೈಬ್ರೋಸಿಸ್ನೊಂದಿಗೆ ಆಕೆಯ ಕೆಳ ಹೊಟ್ಟೆಯಲ್ಲಿ ಉಬ್ಬುವಿಕೆಯನ್ನು ಬಹಿರಂಗಪಡಿಸಿತು ಸಕ್ರಾ ವರ್ಲ್ಡ್ ಹಾಸ್ಪಿಟಲ್‌ನ ಹಿರಿಯ ಸಲಹೆಗಾರ್ತಿ ಮತ್ತು ಹಿರಿಯ ಪ್ರಸೂತಿ ಹಾಗೂ ಸ್ತ್ರೀರೋಗ ಶಾಸ್ತ್ರದ ಡಾ.ಶಾಂತಲಾ ತುಪ್ಪಣ್ಣ ನೇತೃತ್ವದಲ್ಲಿ ಅವರಿಗೆ ಮಯೋಮೆಕ್ಟಮಿ (ಶಸ್ತ್ರಚಿಕಿತ್ಸೆ) ನಡೆಸಲಾಯಿತು. ಅವರು ಒಟ್ಟು 222 ಫೈಬ್ರಾಯ್ಡ್‌ಗಳನ್ನು (ಗೆಡ್ಡೆಗಳನ್ನು) ತೆಗೆದುಹಾಕಿದರು, ಇದರಲ್ಲಿ 20X20X10 ಸೆಂ.ಮೀ ಅಳತೆಯ ದೊಡ್ಡ ಹೂಕೋಸು-ಆಕಾರದ ಫೈಬ್ರಾಯ್ಡ್ ಮತ್ತು ಒಟ್ಟು 2,250 ಗ್ರಾಂ ತೂಕದ ವಿವಿಧ ಗಾತ್ರದ ಗೆಡ್ಡೆಗಳು ಇದ್ದವು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಸಂಕೀರ್ಣ ಶಸ್ತ್ರಚಿಕಿತ್ಸೆ:

ಈ ಶಸ್ತ್ರಚಿಕಿತ್ಸೆಯು ಸಂಕೀರ್ಣವಾಗಿದ್ದು ವೈದ್ಯರಾದ ಶಾಂತಲಾ ಹೇಳುವಂತೆ 40-50% ಮಹಿಳೆಯರಲ್ಲಿ ಈ ಗೆಡ್ಡೆಗಳು ಸಾಮಾನ್ಯ ಎಂದು ಹೇಳುತ್ತಾರೆ. ಅದರೆ ಕೆಲವರು ಮಾತ್ರ ರೋಗಲಕ್ಷಣಗಳನ್ನು ಹೊಂದಿರುತ್ತಾರೆ. ರಿತಿಕಾ ಅವರ ವಿಚಾರದಲ್ಲಿ ಆಕೆ ಪ್ರತೀ ದಿನ ಯೋಗಾಭ್ಯಾಸ ಮಾಡುತ್ತಿದ್ದರು ಹಾಗೂ ಕ್ರಿಯಾತ್ಮಕ ಜೀವನ ಶೈಲಿಯನ್ನು ಅನುಸರಿಸುತ್ತಿದ್ದರು ಆದರೂ ಹೆಚ್ಚು ರಕ್ತಸ್ರಾವದೊಂದಿಗೆ ರಕ್ತಹೀನತೆ ಹೊಂದಿದ್ದರು. ಸಾಂಕ್ರಾಮಿಕ ರೋಗದಿಂದಾಗಿ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಲು ಸುಮಾರು ಒಂದು ವರ್ಷ ಕಾಯುತ್ತಿದ್ದರು ಎಂದು ತಿಳಿಸಿದ್ದಾರೆ.

ನಾಲ್ಕೂವರೆ ಗಂಟೆ ನಡೆದ ಶಸ್ತ್ರ ಚಿಕಿತ್ಸೆ

ರಿತಿಕಾರ ಮೂತ್ರನಾಳ ಹಾಗೂ ಆ ಭಾಗದ ಕೆಳಗೆ ದೊಡ್ಡ ಹೂಕೋಸಿನಾಕಾರದ ಗೆಡ್ಡೆಗಳು ವಿವಿಧ ಗಾತ್ರದಲ್ಲಿ ಹರಡಿಕೊಂಡಿದ್ದವು. ಇವುಗಳು ಹೊಟ್ಟೆಯ ಪ್ರಮುಖ ಭಾಗಗಳಿಗೆ ಸಮೀಪದಲ್ಲಿದ್ದವು. ಇದರಿಂದ ಶಸ್ತ್ರಚಿಕಿತ್ಸೆ ಕೊಂಚ ಸಂಕೀರ್ಣವಾಗಿತ್ತು ಎಂದು ಶಾಂತಲಾ ಹೇಳುತ್ತಾರೆ. ಈ ಎಲ್ಲಾ ಫೈಬ್ರಾಯ್ಡ್‌ಗಳನ್ನು ನಾವು ನಾಲ್ಕೂವರೆ ಗಂಟೆಗಳ ಶಸ್ತ್ರಚಿಕಿತ್ಸಾ ವಿಧಾನದಿಂದ ಯಾವುದೇ ತೊಂದರೆಗಳಿಲ್ಲದೆ ತೆಗೆದುಹಾಕಲು ಸಾಧ್ಯವಾಯಿತು ಎಂಬುದು ವೈದ್ಯೆ ಶಾಂತಲಾ ಮಾತಾಗಿದೆ.


ಹೊಟ್ಟೆಯು ಉಬ್ಬಿದಂತೆ ಕಾಣುತ್ತಿತ್ತು

ರಿತಿಕಾ ಶಸ್ತ್ರಚಿಕಿತ್ಸೆಯ ನಂತರ ನಿರಾಳಗೊಂಡಿದ್ದು ಸಮಾಧಾನಗೊಂಡಿದ್ದಾರೆ. ಕಳೆದ ಎರಡು ವರ್ಷಗಳಿಂದ ಈ ಗೆಡ್ಡೆಗಳು ಆಕೆಯ ದೇಹದೊಳಗೆ ಬೆಳೆಯುತ್ತಿದ್ದವು ಆದರೆ ರೋಗಲಕ್ಷಣಗಳನ್ನು ಗಮನಿಸಿರಲಿಲ್ಲ ಎಂದು ಸ್ವತಃ ರಿತಿಕಾ ಹೇಳುತ್ತಾರೆ. ಸುಮಾರು 222 ಗೆಡ್ಡೆಗಳು ಗರ್ಭಾಶಯದಲ್ಲಿ ಇದ್ದುದರಿಂದ ಹೊಟ್ಟೆಯು ಉಬ್ಬಿದಂತೆ ಕಾಣುತ್ತಿತ್ತು ಎಂಬುದು ನಂಬಲಾದ ವಿಚಾರ ಎಂದು ರಿತಿಕಾ ಹೇಳುತ್ತಾರೆ.