ದುರುದ್ದೇಶದಿಂದ ದರ್ಗಾ ತೆರವು: ಸಿದ್ದರಾಮಯ್ಯ ಆರೋಪ

ದುರುದ್ದೇಶದಿಂದ ದರ್ಗಾ ತೆರವು: ಸಿದ್ದರಾಮಯ್ಯ ಆರೋಪ

ಹುಬ್ಬಳ್ಳಿ: 'ಮುಸ್ಲಿಮ್ ಸಮುದಾಯಕ್ಕೆ ದೌರ್ಜನ್ಯ ಎಸಗಬೇಕು ಎನ್ನುವ ದುರುದ್ದೇಶದಿಂದ ಬೈರಿದೇವರಕೊಪ್ಪದ ದರ್ಗಾ ಮತ್ತು ಮಸೀದಿಯನ್ನು ತೆರವು ಮಾಡಲಾಗಿದೆ' ಎಂದು‌ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದರು.

ನಗರದಲ್ಲಿ ಏರ್ಪಡಿಸಿರುವ ಮಹದಾಯಿ ಜನಾಂದೋಲನ‌ ಸಮಾವೇಶದಲ್ಲಿ ಪಾಲ್ಗೊಳ್ಳುವ ಪೂರ್ವ, ನಗರದ ಬೈರಿದೇವರಕೊಪ್ಪದಲ್ಲಿ ಇತ್ತೀಚೆಗೆ ದರ್ಗಾ ತೆರವು ಮಾಡಿರುವ ಸ್ಥಳಕ್ಕೆ ಭೇಟಿ ನೀಡಿ, ಮಾಧ್ಯಮದವರೊಂದಿಗೆ ಮಾತನಾಡಿದರು.

'ಗುಣಮಟ್ಟದ ಸಾಮಗ್ರಿಗಳನ್ನು ಬಳಸಿ ಮಸೀದಿ, ದರ್ಗಾ ನಿರ್ಮಿಸಲಾಗಿತ್ತು. ಅವುಗಳ ತೆರವು ಮಾಡಲು ಅದರ ಆಡಳಿತ ಮಂಡಳಿಗೆ ಸರ್ಕಾರ ಕಾಲಾವಕಾಶ ನೀಡಿದ್ದರೆ, ಕೆಲವು ಸಾಮಗ್ರಿಗಳನ್ನಾದರೂ ರಕ್ಷಿಸಿಕೊಳ್ಳುತ್ತಿದ್ದರು. ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಏಕಾಏಕಿ ತೆರವು ಮಾಡಲಾಗಿದೆ. ಕಾಲಾವಕಾಶ ನೀಡಿದ್ದರೆ ನ್ಯಾಯಾಂಗ ನಿಂದನೆ ಆಗುತ್ತಿತ್ತೆ' ಎಂದು ಪ್ರಶ್ನಿಸಿದರು.

'ಇದು ಅತ್ಯಂತ ಹಳೆಯ ಪವಿತ್ರವಾದ ದರ್ಗವಾಗಿತ್ತು. ಹಿಂದೂ, ಮುಸ್ಲಿಂ ಸಮುದಾಯದವರು ಅಲ್ಲಿಗೆ ಬಂದು ಪ್ರಾರ್ಥನೆ ಸಲ್ಲಿಸುತ್ತಿದ್ದರು. ಯಾವುದೇ ಕಾರಣಕ್ಕೂ ತೆರವು ಮಾಡಬೇಡಿ ಎಂದು ಮುಖ್ಯಮಂತ್ರಿಯವರಲ್ಲಿ ವಿನಂತಿಸಿದ್ದೆ. ಅವರು ಅದಕ್ಕೆ ಒಪ್ಪಿಗೆಯೂ ಸೂಚಿಸಿದ್ದರು. ಆದರೆ, ರಾತ್ರೋರಾತ್ರಿ ಪೊಲೀಸ್ ಭದ್ರತೆ ಮಾಡಿಕೊಂಡು ತೆರವು ಮಾಡಿದ್ದಾರೆ. ಇದು ಮುಸ್ಲಿಮ್ ಸಮುದಾಯಕ್ಕೆ ಮಾಡಿರುವ ದೊಡ್ಡ ಅನ್ಯಾಯ. ಅವರ ಭಾವನೆ ಕೆರಳಿಸಲು ಹೀಗೆ ಮಾಡಿದ್ದಾರೆ. ಇದು ಖಂಡನೀಯ' ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.