ಕೋರೆಗಾಂವ್: ಸ್ವಾಭಿಮಾನದ ಚರಿತ್ರೆ

ಶಿರಾ: ಕೋರೆಗಾಂವ್ ವಿಜಯೋತ್ಸವು ಈ ದೇಶದ ಮೂಲ ನಿವಾಸಿಗಳ ಸ್ವಾಭಿಮಾನದ ಚರಿತ್ರೆಯಾಗಿದೆ ಎಂದು ನಿವೃತ್ತ ಪ್ರಾಂಶುಪಾಲ ಡಾ.ತಿಮ್ಮನಹಳ್ಳಿ ವೇಣುಗೋಪಾಲ್ ಹೇಳಿದರು.
ನಗರದ ಅಂಬೇಡ್ಕರ್ ಉದ್ಯಾನದಲ್ಲಿರುವ ಅಂಬೇಡ್ಕರ್ ಪ್ರತಿಮೆಯ ಮುಂದೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಆಯೋಜಿಸಿದ್ದ ಭೀಮ ಕೋರೆಗಾಂವ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇಶದ ದಲಿತರು ಹಾಗೂ ಅಸ್ಪೃಶ್ಯರಿಗೆ ಶಿಕ್ಷಣ ಮತ್ತು ಸಮಾನತೆಯನ್ನು ನೀಡಲು ನಿರಾಕರಿಸಿದಾಗ ಸ್ವಾಭಾವಿಕವಾಗಿ ದಂಗೆ ಎದ್ದ 500 ಜನ ಮಹಾರ್ ಯೋಧರು ತನ್ನ ಸ್ವಾಭಿಮಾನದ ಉಳಿವಿಗಾಗಿ 28 ಸಾವಿರ ಮಂದಿಯ ಪೇಶ್ವೆಗಳ ಸೈನ್ಯವನ್ನು ಸೋಲಿಸಿದ್ದು ಇತಿಹಾಸವಾಗಿದೆ ಎಂದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿಯ ತಾಲ್ಲೂಕು ಅಧ್ಯಕ್ಷ ಟೈರ್ ರಂಗನಾಥ್ ಮಾತನಾಡಿ, ಪೇಶ್ವೆಗಳು ದಲಿತರ ಮೇಲೆ ಹೇರುತ್ತಿದ್ದ ಕಠೋರ ಕಾನೂನುಗಳನ್ನು ವಿರೋಧಿಸಿ ನಡೆದ ಕೋರೆಗಾಂವ್ ಯುದ್ದದಲ್ಲಿ ಜಯಗಳಿಸಿರುವುದು ಸಂತಸದ ವಿಷಯ ಎಂದರು.
ದಸಂಸ ಕಾರ್ಯಾಧ್ಯಕ್ಷ ಶಿವಾಜಿನಗರ ತಿಪ್ಪೇಸ್ವಾಮಿ, ತಾಲ್ಲೂಕು ಸಂಘಟನಾ ಕಾರ್ಯದರ್ಶಿ ಭೂತರಾಜು, ಕಂಟಲಗೆರೆ ಸತೀಶ್, ನೇರಳಗುಡ್ಡ ಶಿವಕುಮಾರ್, ಮಾಜರ್ ಸಾಬ್, ಆರ್.ವಿ.ಪುಟ್ಟಕಾಮಣ್ಣ, ಜಯರಾಮಕೃಷ್ಣ, ಶ್ರೀರಂಗಪ್ಪ, ಯೋಗಾನಂದ್, ಕಾರ್ತಿಕ್ ಇದ್ದರು.