ಸಂವಿಧಾನ ಬದಲಾಯಿಸಲು ಬಂದರೆ ಶೂದ್ರರೇ ಎದ್ದು ನಿಲ್ಲಿ: ಸಿದ್ದರಾಮಯ್ಯ

ಸಂವಿಧಾನ ಬದಲಾಯಿಸಲು ಬಂದರೆ ಶೂದ್ರರೇ ಎದ್ದು ನಿಲ್ಲಿ: ಸಿದ್ದರಾಮಯ್ಯ

ರಿಹರ (ದಾವಣಗೆರೆ ಜಿಲ್ಲೆ): ಯಾರೇ ಸಂವಿಧಾನವನ್ನು ಬದಲಾಯಿಸಲು, ಹಾಳು ಮಾಡಲು ಬಂದರೂ ಎಲ್ಲ ಶೂದ್ರರು ಎದ್ದು ನಿಲ್ಲಬೇಕು. ಅದನ್ನು ವಿರೋಧಿಸಬೇಕು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕರೆ ನೀಡಿದರು.

ಹರಿಹರ ತಾಲ್ಲೂಕಿನ ರಾಜನಹಳ್ಳಿಯಲ್ಲಿರುವ ಮಹರ್ಷಿ ವಾಲ್ಮೀಕಿ ಪೀಠದಲ್ಲಿ ನಡೆಯುತ್ತಿರುವ ವಾಲ್ಮೀಕಿ ಜಾತ್ರೆಯಲ್ಲಿ ಜನಜಾಗೃತಿ ಜಾತ್ರಾ ಮಹೋತ್ಸವದಲ್ಲಿ ಅವರು 'ವಾಲ್ಮೀಕಿ ವಿಜಯ' ಸ್ಮರಣ ಸಂಪುಟ ಉದ್ಘಾಟಿಸಿ ಮಾತನಾಡಿದರು.

ಸಂವಿಧಾನ ಇರುವುದರಿಂದಲೇ ನಾನು ವಿದ್ಯೆ ಕಲಿಯಲು ಸಾಧ್ಯವಾಯಿತು. ಮುಖ್ಯಮಂತ್ರಿಯಾಗಲು ಸಾಧ್ಯವಾಯಿತು. ನೀವೂ ವಿದ್ಯೆ ಕಲಿಯಲು ಸಾಧ್ಯವಾಯಿತು. ಅಂಥ ಸಂವಿಧಾನವನ್ನು ನಾವೆಲ್ಲರೂ ರಕ್ಷಣೆ ಮಾಡಬೇಕು ಎಂದು ಹೇಳಿದರು.

ಡಾ.ಬಿ.ಆರ್. ಅಂಬೇಡ್ಕರ್‌ ಅವರು ತಿಳಿಸಿರುವ ಶಿಕ್ಷಣ, ಸಂಘಟನೆ ಮತ್ತು ಹೋರಾಟಗಳೇ ಎಲ್ಲರೂ ಧ್ಯೇಯವಾಗಿಸಿಕೊಂಡು ಮುಂದೆ ಸಾಗಬೇಕು ಎಂದರು.

ಪ್ರಸನ್ನಾನಂದ ಸ್ವಾಮೀಜಿ ಮತ್ತು ನಮ್ಮ ಹೋರಾಟದಿಂದ ಮೀಸಲಾತಿ ಹೆಚ್ಚಳವಾಗಿದೆ. ಅದು ಹಣೆಗೆ ಹಚ್ಚಿದ ತುಪ್ಪವಾಗಬಾರದು ಎಂದಾಗಬೇಕಿದ್ದರೆ ಷೆಡ್ಯೂಲ್‌ 9ಕ್ಕೆ ಸೇರಿಸಬೇಕು. ಈಗ ಸಂಸತ್ತು ಅಧಿವೇಶನ ನಡೆಯುತ್ತಿದೆ. ಈಗಲೇ ಅಲ್ಲಿ ಚರ್ಚೆಯಾಗಬೇಕು ಎಂದು ಒತ್ತಾಯಿಸಿದರು.