ಒಂದೊಂದು ಜಿಲ್ಲೆಯ ಐಟಿಐಗಳ ಅಭಿವೃದ್ಧಿಗೆ ಸಹಯೋಗ ನೀಡಿ
ಬೆಂಗಳೂರು
ಟಾಟಾ ಟೆಕ್ನಾಲಜಿಸ್ ಅಧ್ಯಕ್ಷ ಆನಂದ್ ಬಢೆ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ವಿವಿಧ ವಿಷಯಗಳ ಕುರಿತು ಚರ್ಚಿಸಿದರು.
ರಾಜ್ಯ ಸರ್ಕಾರದೊಂದಿಗೆ ಮಾಡಿಕೊಂಡ ಒಪ್ಪಂದದಂತೆ ರಾಜ್ಯದಲ್ಲಿ 150 ಸರ್ಕಾರಿ ಐಟಿಐಗಳ ಉನ್ನತೀಕರಣವನ್ನು ಟಾಟಾ ಟೆಕ್ನಾಲಜೀಸ್ ಸಂಸ್ಥೆ ಇತರ ಕಾಪೆರ್Çರೇಟ್ ಸಂಸ್ಥೆಗಳ ಸಹಯೋಗದೊಂದಿಗೆ ಕೈಗೆತ್ತಿಕೊಂಡಿದ್ದು, ಮೂಲಸೌಕರ್ಯ ಉನ್ನತೀಕರಣ ಬಹುತೇಕ ಪೂರ್ಣಗೊಂಡಿದೆ. ಮುಖ್ಯಮಂತ್ರಿಯವರು ಐಟಿಐಗಳ ಒಟ್ಟಾರೆ ಅಭಿವೃದ್ಧಿಗೆ, ವಿದ್ಯಾರ್ಥಿಗಳಿಗೆ ಕಾಲಕ್ಕೆ ತಕ್ಕ ತರಬೇತಿ, ಶಿಕ್ಷಣ, ಮಾರ್ಗದರ್ಶನ ಹಾಗೂ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಒಂದೊಂದು ಬೃಹತ್ ಕೈಗಾರಿಕಾ ಸಂಸ್ಥೆಯವರು ಒಂದೊಂದು ಜಿಲ್ಲೆಯ ಐಟಿಐಗಳ ಅಭಿವೃದ್ಧಿಗೆ ಸಹಯೋಗ ನೀಡಬೇಕೆಂದು ಅಭಿಪ್ರಾಯಪಟ್ಟರು. ಸಭೆಯಲ್ಲಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರಾದ ವಂದಿತಾ ಶರ್ಮ, ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆಯ ಕಾರ್ಯದರ್ಶಿ ಎಸ್. ಸೆಲ್ವಕುಮಾರ್, ಮುಖ್ಯಮಂತ್ರಿಯವರ ಜಂಟಿ ಕಾರ್ಯದರ್ಶಿ ಜಿ.ಜಗದೀಶ್ ಹಾಗೂ ಟಾಟಾ ಟೆಕ್ನಾಲಜೀಸ್ ನ ಅಧಿಕಾರಿಗಳು ಉಪಸ್ಥಿತರಿದ್ದರು.