ಧ್ವಜಾರೋಹಣ ಮಾಡಲು ಸಚಿವೆ ಶಶಿಕಲಾ ಜೊಲ್ಲೆಗೆ ಮಹಿಳೆಯರ ಅಡ್ಡಿ; ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು
ವಿಜಯಪುರ: ಭ್ರಷ್ಟಾಚಾರದ ಆರೋಪ ಹೊತ್ತಿರುವ ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆಗೆ ಧ್ವಜಾರೋಹಣ ಮಾಡಲು ಅವಕಾಶ ನೀಡುವುದಿಲ್ಲ ಎಂದು ಮಹಿಳೆಯರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ ಘಟನೆ ವಿಜಯಪುರದಲ್ಲಿ ನಡೆದಿದೆ.
ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ 75ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಮಹಿಳಾ ವಿಶ್ವವಿದ್ಯಾಲಯದ ಆವರಣದಲ್ಲಿ ಧ್ವಜಾರೋಹಣಕ್ಕೆ ಆಗಮಿಸುತ್ತಿದ್ದಂತೆ ನೂರಾರು ಮಹಿಳೆಯರು ಸಚಿವೆ ಜೊಲ್ಲೆಗೆ ಮುತ್ತಿಗೆ ಹಾಕಿ ಧ್ವಜಾರೋಹಣಕ್ಕೆ ಅಡ್ಡಿಪಡಿಸಿದರು. ಸ್ಥಳದಲ್ಲೇ ಧರಣಿ ಕುಳಿತು ಭ್ರಷ್ಟರಿಗೆ ಬಸವನಾಡಿನಲ್ಲಿ ಧ್ವಜಾರೋಹಣಕ್ಕೆ ಬಿಡುವುದಿಲ್ಲ. ಸಚಿವೆ ಶಶಿಕಲಾ ಜೊಲ್ಲೆ ಧ್ವಜಾರೋಹಣ ಮಾಡುವಂತಿಲ್ಲ ಎಂದು ಧಿಕ್ಕಾರ ಕೂಗಿದರು.
ಪರಿಸ್ಥಿತಿ ಕೈಮೀರುತ್ತಿದ್ದಂತೆ ಪೊಲೀಸರು ಪ್ರತಿಭಟನಾ ನಿರತ ಮಹಿಳೆಯರನ್ನು ವಶಕ್ಕೆ ಪಡೆದರು. ವಿರೋಧದ ನಡುವೆಯೂ ಸಚಿವೆ ಶಶಿಕಲಾ ಜೊಲ್ಲೆ ಧ್ವಜಾರೋಹಣ ನೆರವೇರಿಸಿದರು.