'ಜನರ ಜೀವದಷ್ಟೇ ಜೀವನವೂ ಮುಖ್ಯ'
ಬೆಂಗಳೂರು: ಕೋವಿಡ್ ಮೂರನೇ ಅಲೆ(Covid 3rd wave) ತಡೆಗೆ ರಾಜ್ಯ ಸರ್ಕಾರ ತಂದಿದ್ದ ವಾರಾಂತ್ಯ ಕರ್ಫ್ಯೂ(Weekend curfew), ನೈಟ್ ಕರ್ಫ್ಯೂ ಹಾಗೂ ಇತರ ನಿರ್ಬಂಧ ಇಂದು ಗುರುವಾರಕ್ಕೆ ಮುಕ್ತಾಯವಾಗಿದೆ. ಕೊರೋನಾ ಸೋಂಕು ಕಡಿಮೆಯಾಗಿಲ್ಲ.
ಇವುಗಳ ಮಧ್ಯೆ ವೀಕೆಂಡ್ ಕರ್ಫ್ಯೂ ಸೇರಿದಂತೆ ಕೋವಿಡ್ ನಿರ್ಬಂಧಗಳನ್ನು ಹೇರಲು ಮುಂದಿನ ದಿನಗಳಲ್ಲಿ ಸರ್ಕಾರ ಎಚ್ಚರಿಕೆಯ ಹೆಜ್ಜೆಯನ್ನಿಡಬೇಕಿದೆ. ಏಕೆಂದರೆ ವಾರಾಂತ್ಯ ಕರ್ಫ್ಯೂಗೆ ಸ್ವಪಕ್ಷೀಯರಿಂದಲೇ ವಿರೋಧ ವ್ಯಕ್ತವಾಗುತ್ತದೆ. ಬಿಜೆಪಿ ನಾಯಕರಾದ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ, ಸಂಸದ ಪ್ರತಾಪ್ ಸಿಂಹ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮೊದಲಾದವರು ವಾರಾಂತ್ಯ ಕರ್ಫ್ಯೂ ಮಾಡಿದರೆ ಜನರಿಗೆ ಕಷ್ಟವಾಗುತ್ತದೆ. ವಾರಾಂತ್ಯ ಕರ್ಫ್ಯೂ ಮುಂದುವರಿಸಬಾರದು, ಉದ್ಯಮ ವಲಯಕ್ಕೆ ತೊಂದರೆಯಾಗುತ್ತದೆ ಎಂದು ಬಹಿರಂಗವಾಗಿ ಹೇಳಿದ್ದಾರೆ.
ಮೊನ್ನೆ 18ರಂದು ಸುದ್ದಿಗೋಷ್ಠಿ ವೇಳೆ ಮಾತನಾಡಿದ್ದ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಕೊರೋನಾ ಬಂದು ಎರಡು ವರ್ಷಗಳಾಗಿದ್ದು ಈಗಾಗಲೇ ಸಮಾಜದ ವಿವಿಧ ವಲಯಗಳಲ್ಲಿ ಸಾಮಾನ್ಯ ಜನರು ತೀವ್ರ ಕಷ್ಟ ಅನುಭವಿಸಿದ್ದಾರೆ, ಆರ್ಥಿಕ ಕುಸಿತ ಉಂಟಾಗಿದೆ. ಹೀಗಿರುವಾಗ ವಾರಾಂತ್ಯ ಕರ್ಫ್ಯೂ ಮುಂದುವರಿಸುವುದು ಒಳ್ಳೆಯದಲ್ಲ, ಜನರ ಜೀವನ ಕೂಡ ಮುಖ್ಯ, ಅದರ ಬದಲು ಸಾಧ್ಯವಾದಷ್ಟು ಕೊರೋನಾ ನಿಯಮ ಪಾಲಿಸುವಂತೆ ಜನರ ಮೇಲೆ ಒತ್ತಡ ಹೇರುವುದು ಒಳಿತು ಎನ್ನುತ್ತಾರೆ.
ಇನ್ನು ಸಿಟಿ ರವಿಯವರು ಕೂಡ ಮಾತನಾಡಿ ವೀಕೆಂಡ್ ಕರ್ಪ್ಯೂ ತೆಗೆದುಹಾಕುವುದು ಉತ್ತಮ ಎಂದಿದ್ದರು. ಸಂಸದ ಪ್ರತಾಪ್ ಸಿಂಹ ಸರ್ಕಾರ ಈಗಾಗಲೇ ಕೋವಿಶೀಲ್ಡ್ ಮತ್ತು ಕೊವಾಕ್ಸಿನ್ ಲಸಿಕೆಗಳನ್ನು ನೀಡುತ್ತಿದ್ದು ನಮ್ಮ ರಾಜ್ಯದಲ್ಲಿ ಶೇಕಡಾ 90ಕ್ಕೂ ಹೆಚ್ಚು ಮಂದಿ ಫಲಾನುಭವಿಗಳು ಲಸಿಕೆ ಹಾಕಿಸಿಕೊಂಡಿದ್ದಾರೆ. ಲಾಕ್ ಡೌನ್, ವೀಕೆಂಡ್ ಕರ್ಫ್ಯೂ ಹೇರಿಕೆ ಮಾಡುವುದಾದರೆ ಕೊರೋನಾ ಲಸಿಕೆ ನೀಡುತ್ತಿರುವುದೇಕೆ ಎಂದು ಸರ್ಕಾರವನ್ನು ಕೇಳಿದ್ದಾರೆ.
ಇನ್ನೊಂದೆಡೆ ಉದ್ಯಮ ವಲಯಗಳಿಂದಲೂ ಸರ್ಕಾರಕ್ಕೆ ವೀಕೆಂಡ್ ಕರ್ಫ್ಯೂ ತೆಗೆದುಹಾಕಬೇಕೆಂದು ಮುಖ್ಯಮಂತ್ರಿಗಳು, ಆರೋಗ್ಯ ಸಚಿವರ ಮೇಲೆ ಒತ್ತಡ ಹಾಕುತ್ತಿದ್ದಾರೆ. ಈಗ ಸರ್ಕಾರ ಅಡಕತ್ತರಿಯಲ್ಲಿ ಸಿಕ್ಕಿಹಾಕಿಕೊಂಡಂತಾಗಿದೆ. ಒಂದೆಡೆ ವೀಕೆಂಡ್ ಕರ್ಫ್ಯೂ ಸೇರಿದಂತೆ ಹೆಚ್ಚಿನ ನಿರ್ಬಂಧ ಹಾಕುವುದು ಬೇಡ ಎಂದು ಹೇಳುತ್ತಿದ್ದರೆ ಇನ್ನೊಂದೆಡೆ ಕೊರೋನಾ ಏರಿಕೆಯಾಗುತ್ತಲೇ ಇದೆ. ಕೊರೋನಾ ಸೋಂಕನ್ನು ತಗ್ಗಿಸುವುದು ಸರ್ಕಾರದ ಮುಂದಿರುವ ಬಹುದೊಡ್ಡ ಸವಾಲಾಗಿದೆ.
ತಜ್ಞರ ಮಧ್ಯೆ ಭಿನ್ನಮತ: ವೀಕೆಂಡ್ ಕರ್ಫ್ಯೂ ಸೇರಿದಂತೆ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ತರಬೇಕಾದ ನಿರ್ಬಂಧ ಕ್ರಮಗಳ ಬಗ್ಗೆ ನಿರ್ಧಾರ ಮಾಡಿ ಎಂದು ಸಿಎಂ ತಜ್ಞರ ಮೇಲೆ ಜವಾಬ್ದಾರಿ ಹೊರಿಸಿದ್ದರು. ಇದೀಗ ತಜ್ಞರ ಮಧ್ಯೆ ಭಿನ್ನಮತ ಇದೆ, ಕೆಲವು ತಜ್ಞರು ವೀಕೆಂಡ್ ಕರ್ಫ್ಯೂ ಮುಂದುವರಿಸಬೇಕು, ಕೊರೋನಾ ಹೆಚ್ಚಾಗುತ್ತಿದೆ. ತಿಂಗಳಾಂತ್ಯ, ಫೆಬ್ರವರಿಯಲ್ಲಿ ಹೆಚ್ಚಳವಾಗುವ ಸಾಧ್ಯತೆಯಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಇನ್ನು ಕೆಲವು ತಜ್ಞರು ಕೊರೋನಾ ಮೂರನೇ ಅಲೆಯಲ್ಲಿ ಆಸ್ಪತ್ರೆಯಲ್ಲಿ ದಾಖಲಾಗುವವರ, ಐಸಿಯುಗೆ ದಾಖಲಾಗುವವರ ಸಂಖ್ಯೆ ಕಡಿಮೆಯಿದೆ ಹೀಗಾಗಿ ವೀಕೆಂಡ್ ಕರ್ಫ್ಯೂ ಹೇರುವ ಅಗತ್ಯವಿಲ್ಲ ಎನ್ನುತ್ತಿದ್ದಾರೆ. ಒಟ್ಟಿನಲ್ಲಿ ಸರ್ಕಾರ ಇಕ್ಕಟ್ಟಿಗೆ ಸಿಲುಕಿದೆ. ನಾಳೆ ಬೆಳಗ್ಗೆ ಮುಖ್ಯಮಂತ್ರಿಗಳು ಸಭೆ ಕರೆದಿದ್ದು ಅದರಲ್ಲಿ ಏನು ನಿರ್ಧಾರ ಮಾಡಿ ಪ್ರಕಟಣೆ ಹೊರಡಿಸುತ್ತಾರೆ ಎಂಬುದು ಕುತೂಹಲವಾಗಿದೆ.
ಮುಖ್ಯಮಂತ್ರಿ ಚರ್ಚೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿನ್ನೆ ಸಂಜೆ ದಿಢೀರ್ ಎಂದು ಬಿಜೆಪಿ ಕಚೇರಿಗೆ ಆಗಮಿಸಿ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಹಾಗೂ ಪಕ್ಷದ ಪದಾಧಿಕಾರಿಗಳ ಜೊತೆ ವಾರಾಂತ್ಯ ಕರ್ಫ್ಯೂ ಮತ್ತು ನೈಟ್ ಕರ್ಫ್ಯೂ ಬಗ್ಗೆ ಸಮಾಲೋಚನೆ ನಡೆಸಿದರು.
ಸ್ವಪಕ್ಷೀಯರಿಂದ ವಿರೋಧ, ಸಂಪುಟ ಪುನಾರಚನೆ, ನಿಗಮ ಮಂಡಳಿ ಅಧ್ಯಕ್ಷರ ಬದಲಾವಣೆ ಕುರಿತಂತೆಯೂ ಮುಖ್ಯಮಂತ್ರಿ ಸಮಾಲೋಚನೆ ನಡೆಸಿದ್ದಾರೆ. ಜನವರಿ 23ರಂದು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನಾಚರಣೆ ವಿಶಿಷ್ಟ ರೀತಿಯಲ್ಲಿ ಸರ್ಕಾರ ಆಚರಣೆ ಮಾಡಲು ನಿರ್ಧರಿಸಿದ್ದು ಪಕ್ಷದ ಮಟ್ಟದಲ್ಲಿ ಆಚರಿಸುವ ಕುರಿತು ಕೂಡ ಚರ್ಚಿಸಿದ್ದಾರೆ ಎಂದು ತಿಳಿದುಬಂದಿದೆ.