ಭಾರತ-ಚೀನಾ ಗಡಿ ಘರ್ಷಣೆ : ಸೇನೆಯ ಮೂರು ಪಡೆಗಳ ಮುಖ್ಯಸ್ಥರೊಂದಿಗೆ ಇಂದು ರಾಜನಾಥ್ ಸಿಂಗ್ ಮಾತುಕತೆ

ನವದೆಹಲಿ: ಕಳೆದ ವಾರ ಅರುಣಾಚಲ ಪ್ರದೇಶದ ನೈಜ ನಿಯಂತ್ರಣ ರೇಖೆಯಲ್ಲಿ ನಡೆದ ಭಾರತ-ಚೀನಾ ಗಡಿ ಘರ್ಷಣೆಗೆ ಸಂಬಂಧಿಸಿದಂತೆ, ಮುಂದಿನ ಹಂತದ ಕ್ರಮದ ಬಗ್ಗೆ ಚರ್ಚಿಸಲು ಇಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್(Rajnath Singh) ಸೇನೆಯ ಮೂರು ಪಡೆಗಳ ಮುಖ್ಯಸ್ಥರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ, ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಆರ್ ಹರಿ ಕುಮಾರ್ ಮತ್ತು ಏರ್ ಚೀಫ್ ಮಾರ್ಷಲ್ ವಿಆರ್ ಚೌಧರಿ ಅವರನ್ನು ಇಂದು ಭೇಟಿಯಾಗಲಿದ್ದಾರೆ.
ವಿದೇಶಾಂಗ ಸಚಿವ ಡಾ ಎಸ್ ಜೈಶಂಕರ್ ಮತ್ತು ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಅನಿಲ್ ಚೌಹಾಣ್ (ನಿವೃತ್ತ) ಕೂಡ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ವಿದೇಶಾಂಗ ಕಾರ್ಯದರ್ಶಿ ವಿನಯ್ ಕ್ವಾತ್ರಾ, ಗಿರಿಧರ್ ಅರಮನೆ ಕೂಡ ಉಪಸ್ಥಿತರಿರುವರು.
ಶೀಘ್ರದಲ್ಲೇ, ರಕ್ಷಣಾ ಸಚಿವರು ಪ್ರಧಾನಿ ಮತ್ತು ಇತರ ಹಿರಿಯ ಕ್ಯಾಬಿನೆಟ್ ಸಹೋದ್ಯೋಗಿಗಳನ್ನು ಭೇಟಿಯಾಗಲಿದ್ದು, ಈ ವಿಷಯದ ಬಗ್ಗೆ ಪ್ರತಿಪಕ್ಷಗಳ ಆಕ್ರಮಣಕ್ಕೆ ರಾಜಕೀಯ ಪ್ರತಿಕ್ರಿಯೆಯನ್ನು ಉತ್ತಮಗೊಳಿಸಲಿದ್ದಾರೆ. ರಾಜನಾಥ್ ಸಿಂಗ್ ಅವರು ಇಂದು ಮಧ್ಯಾಹ್ನ ಸಂಸತ್ತಿನ ಉಭಯ ಸದನಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ವಿರೋಧ ಪಕ್ಷಗಳ ಹಲವಾರು ಸಂಸದರು ಗಡಿ ಘರ್ಷಣೆಯ ಬಗ್ಗೆ ಚರ್ಚೆಗೆ ಕೋರಿದ ಬೆನ್ನಲ್ಲೇ ಈ ಸಭೆ ನಡೆಸಲಾಗುತ್ತಿದೆ.