ಅಂಗನವಾಡಿ ಸಿಬ್ಬಂದಿಗೆ ಗುಡ್ ನ್ಯೂಸ್ `ಗ್ರಾಚ್ಯುಟಿ' ಘೋಷಣೆ ಮಾಡಿ ರಾಜ್ಯ ಸರ್ಕಾರ ಅಧಿಕೃತ ಆದೇಶ

ಅಂಗನವಾಡಿ ಸಿಬ್ಬಂದಿಗೆ ಗುಡ್ ನ್ಯೂಸ್ `ಗ್ರಾಚ್ಯುಟಿ' ಘೋಷಣೆ ಮಾಡಿ ರಾಜ್ಯ ಸರ್ಕಾರ ಅಧಿಕೃತ ಆದೇಶ

ಬೆಂಗಳೂರು : ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರಿಗೆ ರಾಜ್ಯ ಸರ್ಕಾರ ಭರ್ಜರಿ ಸಿಹಿಸುದ್ದಿ ನೀಡಿದ್ದು, ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರಿಗೆ ಗ್ರಾಚ್ಯುಟಿ ಘೋಷಣೆ ಮಾಡಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ.

ಬೆಂಗಳೂರಿನಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಅಹೋರಾತ್ರಿ ಪ್ರತಿಭಟನೆ ನಡೆಸಿದ್ದರು. ಇದಕ್ಕೆ ಸರ್ಕಾರ ಸ್ಪಂದಿಸಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಹಾಲಪ್ಪ ಆಚಾರ್ ಸಭೆ ನಡೆಸಿ ಗ್ರಾಚ್ಯುಟಿ ಭರವಸೆ ನೀಡಿದ್ದರು.

ಇದರ ಬೆನ್ನಲ್ಲೆ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರು ಮತ್ತು ಮಿನಿ ಅಂಗನವಾಡಿ ಕಾರ್ಯಕರ್ತೆಯರಿಗೆ 2023-24 ನೇ ಸಾಲಿನ ಆರ್ಥಿಕ ವರ್ಷದಿಂದ ಜಾರಿಗೆ ಬರುವಂತೆ ನಿವೃತ್ತಿ ಉಪಧನ ನೀಡಲು ಆಡಳಿತಾತ್ಮಕ ಅನುಮತಿ ನೀಡಿ ಆದೇಶಿಸಿದೆ.

ಗ್ರಾಚ್ಯುಟಿ ನೀಡಲು ಹಣಕಾಸು ಇಲಾಖೆ ಒಪ್ಪಿಗೆ ನೀಡಿದ ಬೆನ್ನಲ್ಲೇ ಬುಧವಾರ ಪ್ರತಿಭಟನೆ ಹಿಂಪಡೆದಿದ್ದಾರೆ. ಸುಪ್ರಿಂ ಕೋರ್ಟಿನ ತೀರ್ಪಿನಂತೆ ಗ್ರಾಚ್ಯುಟಿ ಕಾಯ್ದೆ 1972ರ ಪ್ರಕಾರ ಗ್ರಾಚ್ಯುಟಿ ನೀಡುವ ಮುಖ್ಯಮಂತ್ರಿಗಳ ಅನುಮೋದನೆಯ ಮೇರೆಗೆ ಹಣಕಾಸು ಇಲಾಖೆ ಒಪ್ಪಿಗೆ ನೀಡಿದೆ.

ಈ ಹಿನ್ನೆಲೆಯಲ್ಲಿ ಸಂಘವು ಕಳೆದ 10 ದಿನಗಳಿಂದ ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಹೋರಾಟವನ್ನು ಹಿಂಪಡೆಯಲು ನಿರ್ಧರಿಸಿದ್ದೇವೆ ಎಂದು ಅಂಗನವಾಡಿ ಕಾರ್ಯಕರ್ತೆಯರು ತಿಳಿಸಿದ್ದಾರೆ.

ನಗರದ ಫ್ರೀಡಂಪಾರ್ಕ್ ನಲ್ಲಿ ರಸ್ತೆಯಲ್ಲೇ ಚಳಿಯ ನಡುವೆಯೂ ಮಲಗಿ ಅಹೋ ರಾತ್ರಿ ಧರಣಿ ನಡೆಸುತ್ತಿದ್ದರು. 10 ದಿನದೊಳಗೆ ಬೇಡಿಕೆ ಈಡೇರಿಸದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದ್ದರು.

ಗುಜರಾತ್ ಸರ್ಕಾರ ಅಂಗನವಾಡಿ ಕಾರ್ಯಕರ್ತೆಯರಿಗೆ ಗ್ರಾಚ್ಯುವಿಟಿ ಯೋಜನೆ ಜಾರಿ ಮಾಡಿದ್ದು, ಕರ್ನಾಟಕದಲ್ಲೂ ಸರ್ಕಾರ ಜಾರಿ ಮಾಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದರು. ಇದಲ್ಲದೇ ವೇತನ ಹೆಚ್ಚಳ ಸೇರಿ ಹಲವು ಬೇಡಿಕೆಗಳಿಗೆ ಆಗ್ರಹಿಸಿದ್ದರು.