'ನಮ್ಮ ಭಾನುವಾರ ಖುಷಿಯಾಗಿಸಿದಿರಿ'

'ನಮ್ಮ ಭಾನುವಾರ ಖುಷಿಯಾಗಿಸಿದಿರಿ'

ಕೋಲಾರ: ಕಾನೂನು ಸೇವೆಗಳ ಮಹಾಶಿಬಿರ ಅಂಗವಾಗಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಿರ್ಮಿಸಿದ್ದ ಸರ್ಕಾರಿ ಸೌಲಭ್ಯಗಳ ಮಳಿಗೆಗಳನ್ನು ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ.ವರಾಳೆ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮಳಿಗೆಗೆ ತೆರಳಿದ ಅವರು ಮಕ್ಕಳೊಂದಿಗೆ ಸಂವಾದ ನಡೆಸಿದರು.

'ಮುಂದೆ ಏನಾಗಬೇಕು ಅಂದುಕೊಂಡಿದ್ದೀರಿ' ಎಂದು ಕೇಳಿದಾಗ ವೈದ್ಯೆ, ಶಿಕ್ಷಕಿ, ಬ್ಯಾಂಕ್ ಮ್ಯಾನೇಜರ್ ಎಂದೆಲ್ಲಾ ವಿದ್ಯಾರ್ಥಿಗಳು ಉತ್ತರಿಸಿದರು. 'ಯಾರೂ ವಕೀಲರು ಆಗಲ್ಲವೇ' ಎಂದು ಮುಖ್ಯ ನ್ಯಾಯಮೂರ್ತಿ ಕೇಳಿದರು.

'ಮಧ್ಯಾಹ್ನ ಬಿಸಿಯೂಟಕ್ಕೆ ಏನು ಕೊಡುತ್ತಾರೆ? ಚೆನ್ನಾಗಿರುತ್ತದೆಯೇ? ನೈರ್ಮಲ್ಯವಾಗಿಟ್ಟಿದ್ದಾರೆಯೇ? ಸೌಲಭ್ಯಗಳು ಇವೆಯೇ? ಶಿಕ್ಷಕರು ಇದ್ದಾರೆಯೇ' ಎಂದು ವಿಚಾರಿಸಿದರು.

ಹೊರಡಲು ಅನುವಾಗುತ್ತಿದ್ದಂತೆ ಮಕ್ಕಳು, 'ಹ್ಯಾಪಿ ಸಂಡೇ ಸರ್‌' ಎಂದರು. ಆಗ ಮುಖ್ಯ ನ್ಯಾಯಮೂರ್ತಿ, 'ನಮ್ಮ ಭಾನುವಾರವನ್ನು ನೀವು ಖುಷಿಯಾಗಿಸಿದ್ದೀರಿ' ಎಂದರು.

ಆರೋಗ್ಯ, ಆಹಾರ, ಶಿಕ್ಷಣ, ಕೃಷಿ, ತೋಟಗಾರಿಕೆ ಸೇರಿದಂತೆ 20 ಮಳಿಗೆಗಳಲ್ಲಿ ಪ್ರತಿ ಮಳಿಗೆಗೆ ತೆರಳಿ ಮಾಹಿತಿ ಪಡೆದರು. ಏನೆಲ್ಲಾ ಸೌಲಭ್ಯ ಕೊಡುತ್ತೀರಿ ಎಂದು ವಿಚಾರಿಸಿದರು. ಆಯಾಯ ಇಲಾಖೆ ಅಧಿಕಾರಿಗಳು ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.

ಎಲ್ಲಾ ಇಲಾಖೆಗಳಲ್ಲಿ ಫಲಾನುಭವಿಗಳಿಗೆ ಸೌಲಭ್ಯ ವಿತರಿಸಿದರು. ಫಲಾನುಭವಿಗಳನ್ನು ಮಾತನಾಡಿಸಿದರು. ಅಂಗವಿಕಲರಿಗೆ ಸೌಲಭ್ಯ ವಿತರಿಸಿ ಅವರೊಂದಿಗೆ ಫೋಟೊ ತೆಗೆಸಿಕೊಂಡರು.