ʻಸಸ್ಯಾಹಾರ ಸೇವಿಸಿ ಗೋವಾ ಸಿಎಂ ಉಡುಪಿ ಮಠಕ್ಕೆ ಭೇಟಿʼ
ಉಡುಪಿ, ಅ.11- ಗೋವಾ ಮುಖ್ಯಮಂತ್ರಿ ಸಾವಂತ್ ಸಸ್ಯಾಹಾರ ಸೇವಿಸಿ ಉಡುಪಿ ಶ್ರೀಕೃಷ್ಣಮಠಕ್ಕೆ ಭೇಟಿ ನೀಡಿದ್ದಾರೆಯೇ ಹೊರತು ಮಾಂಸಾಹಾರ ಸೇವಿಸಿ ಹೋಗಿಲ್ಲ ಎಂದು ಉಡುಪಿ ಶಾಸಕ ಕೆ ರಘುಪತಿ ಭಟ್ ಸ್ಪಷ್ಟನೆ ನೀಡಿದ್ದಾರೆ.
ಉಡುಪಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಾವಂತ್ ಮಧ್ಯಾಹ್ನ ಊಟ ಮಾಡುವಾಗ ನಾನು ಜೊತೆಗೆ ಇದ್ದೆ. ಸಾವಂತ್ ಊಟಕ್ಕೆ ಯಾವುದೇ ಮಾಂಸಾಹಾರ ಸೇವಿಸಿಲ್ಲ. ಸಿಎಂ ಜೊತೆಗೆ ಬಂದಿದ್ದ ಸಿಬ್ಬಂದಿಗೆ ಮಾಂಸಾಹಾರ ಊಟದ ವ್ಯವಸ್ಥೆ ಇತ್ತು. ಸಿಎಂ ಸಾವಂತ್ ಮಾಂಸಾಹಾರ ಸೇವಿಸಿ ಮಠಕ್ಕೆ ಹೋಗಿದ್ದಾರೆ ಎಂದು ಆರೋಪಿಸುವವರ ಬಳಿ ಏನು ಸಾಕ್ಷ್ಯ ಇದೆ ನನಗೆ ಗೊತ್ತಿಲ್ಲ. ಹೋಟೆಲಿನ ಮೆನು ನೋಡಿ ಹೇಳಿದ್ದಾರೆಯೇ ಗೊತ್ತಿಲ್ಲ. ಸಿಎಂ ಜೊತೆ 40 – 50 ಅಧಿಕಾರಿಗಳು ಬಂದಿದ್ದರು. ಆರೋಪಿಸುವವರು ಹೋಟೆಲಿನ ಆರ್ಡರ್ ಮೆನು ನೋಡಿ ಹೇಳಿರಬಹುದು. ಅಧಿಕಾರಿ, ಸಿಬ್ಬಂದಿಗೆ ಮೀನನ್ನು ಆರ್ಡರ್ ಮಾಡಿದ್ದಾರೆ ಎಂದು ಅವರು ತಿಳಿಸಿದರು. ಚುನಾವಣೆ ಹತ್ತಿರ ಬಂದಿರುವುದರಿಂದ ಈ ಆರೋಪ ಬಂದಿದೆ. ಸಿದ್ದರಾಮಯ್ಯ ನಾನ್ ವೆಜ್ ತಿಂದು ದೇವಸ್ಥಾನಕ್ಕೆ ಹೋಗಿರುವ ವಿಡಿಯೋ ಫೋಟೊ ಸಮೇತ ಸಾಕ್ಷಿ ಇಟ್ಟು ಬಿಜೆಪಿ ಮಾತನಾಡಿತ್ತು. ಸಿದ್ದರಾಮಯ್ಯ ನಾನು ತಪ್ಪಿ ಹೋದೆ, ನೆನಪಿಲ್ಲ ಎಂದಿದ್ದರೇ ದೊಡ್ಡ ಸುದ್ದಿಯಾಗುತ್ತಿರಲಿಲ್ಲ. ಆದರೆ ಅವರು ನಾನು ದನದ ಮಾಂಸ ತಿಂದು ಹೋಗುತ್ತೇನೆ ಏನಾಗುತ್ತದೆ ಎಂದು ದರ್ಪದಿಂದ ಮಾತನಾಡಿದ್ದರು. ಕಾಂಗ್ರೆಸ್ ನವರು ಫೋಟೊ, ವೀಡಿಯೊ ನೀಡಿ ಮಾತನಾಡಲಿ ಎಂದು ರಘುಪತಿ ಭಟ್ ಹೇಳಿದರು.