ಸ್ಥಿತ ಪ್ರಜ್ಞೆಯಿಂದ ಕೆಲಸ ಮಾಡಿ ಅಧಿಕಾರಿಗಳಿಗೆ ಸಿಎಂ ಚಾಟಿ

ಸ್ಥಿತ ಪ್ರಜ್ಞೆಯಿಂದ ಕೆಲಸ ಮಾಡಿ ಅಧಿಕಾರಿಗಳಿಗೆ ಸಿಎಂ ಚಾಟಿ

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಲ್ಲ ಜಿಲ್ಲಾಧಿಕಾರಿಗಳ ಜತೆ ಸಭೆ ನಡೆಸಿದರು. ಸಚಿವ ವಿ. ಸೋಮಣ್ಣ, ಆರ್. ಅಶೋಕ್, ಜೆ.ಸಿ. ಮಾಧುಸ್ವಾಮಿ, ಸುನಿಲ್ ಕುಮಾರ್ ಇದ್ದಾರೆ.

ಬೆಂಗಳೂರು, ಅ. ೧೭- ಸರ್ಕಾರದ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸಲು ಸಮಯ ಮತ್ತು ಸ್ಥಿತ ಪ್ರಜ್ಞೆತೆಯಿಂದ ಕಾರ್ಯನಿರ್ವಹಿಸಿ ಎಂದು ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಅಧಿಕಾರಿಗಳಿಗೆ ಸೂಚಿಸಿದರು.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿಂದು ನಡೆದ ಜಿಲ್ಲಾಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಮುಖ್ಯಸ್ಥರುಗಳ ಸಭೆಯ ಆರಂಭದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ಸರ್ಕಾರದ ಜನಪರ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವ ಜವಾಬ್ದಾರಿ ಜಿಲ್ಲಾಧಿಕಾರಿಗಳದ್ದು, ಈ ಜವಾಬ್ದಾರಿ ನಿರ್ವಹಣೆಯಲ್ಲಿ ವಿಳಂಬ ಮತ್ತು ನಿರ್ಲಕ್ಷ್ಯ ತೋರಿದರೆ ಅದನ್ನು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.ಯಾವುದೇ ಜಿಲ್ಲಾಧಿಕಾರಿ ಮನಸ್ಸಿಟ್ಟು ಕೆಲಸ ಮಾಡಬೇಕು. ಉದಾಸೀನ ಮನೋಭಾವ ಸರಿಯಲ್ಲ. ಇದನ್ನು ನಾನು ಸಹಿಸುವುದಿಲ್ಲ. ಜವಾಬ್ದಾರಿ ಅರಿತು ಕೆಲಸ ಮಾಡಿ ಎಂದು ಜಿಲ್ಲಾಧಿಕಾರಿಗಳಿಗೆ ಕಿವಿ ಮಾತು ಹೇಳಿದರು.
ಜಿಲ್ಲಾಧಿಕಾರಿಗಳಾಗಿ ಕಾರ್ಯನಿರ್ವಹಿಸುವುದು ಯಾವುದೇ ಒಬ್ಬ ಐಎಎಸ್ ಅಧಿಕಾರಿಗೆ ಒಂದು ಮಹತ್ವಪೂರ್ಣ ಅವಕಾಶ. ಈ ಅವಕಾಶವನ್ನು ಬಳಸಿಕೊಂಡು ಜನಪರ ಕೆಲಸ ಮಾಡಿ. ಜನಪರ ಕೆಲಸ ಮಾಡುವಾಗ ನಿರ್ಲಕ್ಷ್ಯ ಬೇಡ. ಮನಸ್ಸಿಟ್ಟು ಕೆಲಸ ಮಾಡಿ ಎಂದರು.ಜಿಲ್ಲಾಧಿಕಾರಿಯಾಗಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸಿದ ನಂತರ ನೀವು ಯಾವ ರೀತಿ ಒಳ್ಳೆಯ ಕೆಲಸ ಮಾಡಿ ಹೆಜ್ಜೆ ಗುರುತು ಬಿಡುತ್ತೀರಿ ಎನ್ನುವುದು ಮುಖ್ಯ. ಬಹಳಷ್ಟು ಅಧಿಕಾರಿಗಳು ಜಿಲ್ಲಾಧಿಕಾರಿಯ ಅಧಿಕಾರ ಭಾಗವನ್ನಷ್ಟೇ ನೋಡುತ್ತಾರೆ. ಆ ಹುದ್ದೆ ಜವಾಬ್ದಾರಿ ಮತ್ತು ಆಡಳಿತದ ಪರಿಣಾಮವನ್ನು ಗಮನಕ್ಕೆ ತೆಗೆದುಕೊಳ್ಳುವುದಿಲ್ಲ. ಇದು ಸರಿಯಲ್ಲ. ಪರಿಣಾಮಕಾರಿಯಾಗಿ, ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ ಎಂದು ತಾಕೀತು ಮಾಡಿದರು.ಬಜೆಟ್ ಕಾರ್ಯಕ್ರಮಗಳು ಸಂಪೂರ್ಣವಾಗಿ ಅನುಷ್ಠಾನವಾಗಬೇಕು. ಆ ನಿಟ್ಟಿನಲ್ಲಿ ಗಮನಹರಿಸಿ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಸಮಸ್ಯೆ, ತೊಂದರೆಗಳಿದ್ದಲ್ಲಿ ನನ್ನ ಗಮನಕ್ಕೆ ತನ್ನಿ ಎಲ್ಲವನ್ನು ಸರಿಪಡಿಸುತ್ತೇನೆ ಎಂದು ಮುಖ್ಯಮಂತ್ರಿಗಳು ಹೇಳಿದರು.
ಆಡಳಿತ ಮಾಡುವುದು ಬೇರೇ, ಆಳುವುದೇ ಬೇರೆ. ಇದನ್ನು ಗಮನದಲ್ಲಿರಿಸಿಕೊಂಡು ಕೆಲಸ ಮಾಡಿ. ನೀವು ಆಡಳಿತದ ಭಾಗವಾಗಿದ್ದೀರಿ. ನಿಮಗೆ ಹೆಚ್ಚಿನ ಅಧಿಕಾರವೂ ಇದೆ. ನೀವು ಕೈಗೊಳ್ಳುವ ನಿರ್ಣಯಗಳು ಆಡಳಿತ ನಿರ್ವಹಣೆಯಲ್ಲಿ ಬಹಳ ಮುಖ್ಯ. ಹಾಗಾಗಿ ಸಮಯ ಪ್ರಜ್ಞೆ, ಸ್ಥಿತ ಪ್ರಜ್ಞತೆಯಿಂದ ತೀರ್ಮಾನಗಳನ್ನು ಮಾಡಿ ಎಂದರು.
ಯಾವುದೇ ಒಂದು ಒಳ್ಳೆಯ ಕೆಲಸ ಮಾಡಬೇಕೆಂದರೂ ಮನಸ್ಸಿಟ್ಟು ಕೆಲಸ ಮಾಡಿ. ಸಕಾಲಿಕ ತೀರ್ಮಾನಗಳನ್ನು ಕೈಗೊಳ್ಳುವ ಮೂಲಕ ಉತ್ತಮ ಆಡಳಿತಕ್ಕೆ ಸರ್ಕಾರದೊಂದಿಗೆ ಸ್ಪಂದಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಕರೆ ನೀಡಿದ ಮುಖ್ಯಮಂತ್ರಿಗಳು, ಸಮಸ್ಯೆಗಳಿದ್ದರೇ ಸರ್ಕಾರದ ಗಮನಕ್ಕೆ ತಂದು ಸೂಕ್ತ ಮಾರ್ಗದರ್ಶನ ಪಡೆಯಿರಿ ಎಂದು ಸಲಹೆ ನೀಡಿದರು.
ಇಂದಿನ ಸಭೆಯಲ್ಲಿ ಎಲ್ಲ ಜಿಲ್ಲಾಧಿಕಾರಿಗಳು ಮುಕ್ತವಾಗಿ ಎಲ್ಲವನ್ನು ಹಂಚಿಕೊಳ್ಳಬೇಕು. ಯಾವುದೇ ತೊಂದರೆ, ಸಮಸ್ಯೆಗಳಿದ್ದರೆ ಈ ಸಭೆಯಲ್ಲಿ ಹೇಳಿ ಸರಿಪಡಿಸುತ್ತೇನೆ ಎಂದು ಮುಖ್ಯಮಂತ್ರಿಗಳು ಹೇಳಿದರು.ಬಜೆಟ್ ಅನುಷ್ಠಾನ ಕುರಿತಂತೆ ಸರ್ಕಾರಿ ಆದೇಶಗಳಾಗಿವೆ. ತಳ ಹಂತದಲ್ಲಿ ಅವುಗಳ ಅನುಷ್ಠಾನಕ್ಕೆ ಕ್ರಮ ಕೈಗೊಂಡು ವರ್ಷಾಂತ್ಯದಲ್ಲಿ ಗುರಿ ಸಾಧಿಸವಂತೆ ಸೂಚನೆ ನೀಡಿದರು .ಮುಖ್ಯಮಂತ್ರಿಗಳ ಜಿಲ್ಲಾಧಿಕಾರಿಗಳೊಂದಿಗಿನ ಈ ಸಭೆಯಲ್ಲಿ ಸಚಿವರಾದ ಆರ್ ಅಶೋಕ್, ಮಾಧುಸ್ವಾಮಿ, ವಿ. ಸೋಮಣ್ಣ, ಬಿ.ಸಿ. ಪಾಟೀಲ್, ಸುನೀಲ್‌ಕುಮಾರ್, ಬಿ. ಶ್ರೀರಾಮುಲು, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ಸೇರಿದಂತೆ ವಿವಿಧ ಇಲಾಖೆಗಳ ಅಪರ ಮುಖ್ಯ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು ಹಾಗೂ ಎಲ್ಲ ಜಿಲ್ಲಾಧಿಕಾರಿಗಳು ಪಾಲ್ಗೊಂಡಿದ್ದರು.