ಬ್ಯಾರಿಕೇಡ್ ಹಾರಿ ಪ್ರಧಾನಿಗಳತ್ತ ನುಗ್ಗಿದ ಬಾಲಕ, ವೈಫಲ್ಯದ ಬಗ್ಗೆ ಕಮಿಷನರ್ ಸ್ಪಷ್ಟನೆ

ಹುಬ್ಬಳ್ಳಿ ಜನವರಿ 13: ರಾಷ್ಟ್ರೀಯ ಯುವಜನೋತ್ಸವ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಗುರುವಾರ ವಾಣಿಜ್ಯನಗರಿ ಹುಬ್ಬಳ್ಳಿಗೆ ಆಗಮಿಸಿದ್ದರು. ಬಿಗಿ ಪೊಲೀಸ್ ಬಂದೋಬಸ್ತ್ ನಡುವೆಯೇ ಬಾಲಕನೊಬ್ಬ ಬ್ಯಾರಿಕೇಡ್ ದಾಟಿ ಪ್ರಧಾನ ಮಂತ್ರಿಗೆ ಹೂವಿನ ಹಾರ ಹಾಕಲು ಓಡಿ ಬಂದ ಘಟನೆ ನಡೆದಿದೆ.
ಈ ಬಗ್ಗೆ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್ ರಮಣ್ ಗುಪ್ತಾ ಮಾತನಾಡಿದ್ದು, ಪ್ರಧಾನಿಗಳಿಗೆ ಭದ್ರತಾ ಲೋಪವಾಗಿಗೆ ಎನ್ನುವ ಆರೋಪದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ರೋಡ್ ಶೋ ವೇಳೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಹೂಮಾಲೆ ಹಾಕಲು ಬಾಲಕನಿಂದ ಯತ್ನ ಪ್ರಕರಣ ಇದು ಭದ್ರತಾ ಲೋಪ ಅಲ್ಲ. ರೋಡ್ ಶೋ ವೇಳೆ ಲಕ್ಷಾಂತರ ಜನರು ಸೇರಿದ್ದರು. ಇಂತಹ ಸಂದರ್ಭದಲ್ಲಿ ಬಾಲಕ ಬ್ಯಾರಿಕೇಡ್ ಹಾರಿ ಬಂದಿದ್ದಾನೆ. ಈ ಬಗ್ಗೆ ಪರಿಶೀಲನೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ಬ್ಯಾರಿಕೇಡ್ ಹಾರಿ ಬಂದ ಬಾಲಕನನ್ನು ನಮ್ಮ ಭದ್ರತಾ ಸಿಬ್ಬಂದಿ ತಕ್ಷಣವೇ ತಡೆದಿದ್ದಾರೆ. ಅತಿ ಉತ್ಸಾಹದಿಂದ ಬಾಲಕ ಈ ರೀತಿ ಮಾಡಿದ್ದಾನೆ. ಪ್ರಕರಣ ಸಂಬಂಧ ವಿಚಾರಣೆ ನಡೆಯುತ್ತಿದೆ. ಈ ಪ್ರಕರಣದ ಬಗ್ಗೆ ಕುಲಂಕೂಷವಾಗಿ ಪರಿಶೀಲನೆ ಬಳಿಕ ಹೆಚ್ಚಿನ ಮಾಹಿತಿ ನೀಡುವುದಾಗಿ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಆಗಮನ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ 7 ಜನ ಎಸ್‌ಪಿ ದರ್ಜೆ ಅಧಿಕಾರಿಗಳು, 25 ಡಿವೈಎಸ್‌ಪಿಗಳು, 60 ಪಿಐ, 18 ಕೆಎಸ್‌ಆರ್‌ಪಿ ಸೇರಿದಂತೆ ಗರುಡಾ, ಸಿಎಆರ್, ಡಿಎಆರ್ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜನೆ ಮಾಡಲಾಗಿತ್ತು.
ಆದರೆ ಪ್ರಧಾನ ಮಂತ್ರಿಗಳ ರೋಡ್ ಶೋ ವೇಳೆ ಭದ್ರತಾ ಲೋಪವೊಂದು ಕಂಡು ಬಂದಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಭರ್ಜರಿ ರೋಡ್ ಶೋ ನಡೆಸಿ ಅಭಿಮಾನಿತಗಳತ್ತ ಕೈ ಬೀಸಿ ಮೆರವಣಿಗೆ ನಡೆಸುತ್ತಿದ್ದ ವೇಳೆ ಭದ್ರತಾ ಲೋಪವಾಗಿದೆ. ಬ್ಯಾರಿಕೇಡ್ ಹಾರಿ ಮೋದಿ ಕಾರಿನತ್ತ ನುಗ್ಗಿದ ಬಾಲಕ ಮೋದಿಗೆ ಹೂವಿನ ಹಾರ ಹಾಕಲು ಯತ್ನಿಸಿದ್ದಾನೆ. ಇದನ್ನು ನೋಡಿದ ಪ್ರಧಾನಿ ನರೇಂದ್ರ ಮೋದಿಯವರು ಬಾಲಕನ ಕೈಯಲ್ಲಿದ್ದ ಹೂವಿನ ಹಾರ ತೆಗೆದುಕೊಂಡು ತಮ್ಮ ಭದ್ರತಾ ಸಿಬ್ಬಂದಿಗೆ ನೀಡಿದ್ದಾರೆ.
ಬಾಲಕ ಖುದ್ದು ಮೋದಿ ಕೈಗೆ ಹೂವಿನ ಹಾರ ಕೊಡಲು ಯತ್ನಿಸಿದ್ದ ಎನ್ನಲಾಗಿದೆ. ಬಳಿಕ ಭದ್ರತಾ ಸಿಬ್ಬಂದಿ ಹಾಗೂ ನಿಯೋಜಿತ ಪೊಲೀಸ್ ಸಿಬ್ಬಂದಿ ಬಾಲಕನ್ನು ಎಳೆದೊಯ್ದಿದ್ದಾರೆ. ಪೊಲೀಸರ ಕರ್ತವ್ಯ ಲೋಪ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದು ಈ ಬಗ್ಗೆ ತನಿಖೆ ಮುಂದುವರಿದಿದೆ.