ಕನ್ನಡ ಔನ್ನತ್ಯಕ್ಕೆ 3 ಸಂಕಲ್ಪ: ವರ್ಷದಲ್ಲಿ 1 ಲಕ್ಷ ಹುದ್ದೆ ಭರ್ತಿ, ರಾಜ್ಯೋತ್ಸವ ಪ್ರಶಸ್ತಿಗಿರಲ್ಲ ವಯಸ್ಸಿನ ಮಿತಿ, ಕನ್ನಡ ಕಡ್ಡಾಯಕ್ಕೆ ಡಿಸೆಂಬರ್​ನಲ್ಲಿ ಶಾಸನ

ಕನ್ನಡ ಔನ್ನತ್ಯಕ್ಕೆ 3 ಸಂಕಲ್ಪ: ವರ್ಷದಲ್ಲಿ 1 ಲಕ್ಷ ಹುದ್ದೆ ಭರ್ತಿ, ರಾಜ್ಯೋತ್ಸವ ಪ್ರಶಸ್ತಿಗಿರಲ್ಲ ವಯಸ್ಸಿನ ಮಿತಿ, ಕನ್ನಡ ಕಡ್ಡಾಯಕ್ಕೆ ಡಿಸೆಂಬರ್​ನಲ್ಲಿ ಶಾಸನ

ಬೆಂಗಳೂರು: ರಾಜ್ಯದ ಎಲ್ಲ ಕ್ಷೇತ್ರಗಳಲ್ಲಿ ಕನ್ನಡ ಕಡ್ಡಾಯ ಬಳಕೆಯ ಶಾಸನ ಜಾರಿಗೆ ಕಾಲಮಿತಿ… ವರ್ಷದೊಳಗೆ ಒಂದು ಲಕ್ಷ ಸರ್ಕಾರಿ ಹುದ್ದೆ ಭರ್ತಿ… ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಗೆ ಸಾಧನೆ ಮಾನದಂಡವೇ ಹೊರತು, ಇಲ್ಲ ವಯಸ್ಸಿನ ಮಿತಿ… 67ನೇ ಕನ್ನಡ ರಾಜ್ಯೋತ್ಸವ ಆಚರಣೆಯ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಾಡಿನ ಜನತೆಗೆ ಮಾಡಿದ ಪ್ರಮುಖ ವಾಗ್ದಾನಗಳಿವು.

ಮಂಗಳವಾರ ರಾಜಧಾನಿಯ ಕಂಠೀರವ ಕ್ರೀಡಾಂಗಣದಲ್ಲಿ ಕನ್ನಡ ಧ್ವಜಾರೋಹಣ ಮತ್ತು ಸಂಜೆ ರವೀಂದ್ರ ಕಲಾಕ್ಷೇತ್ರದಲ್ಲಿ 67 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭಗಳಲ್ಲಿ ಪಾಲ್ಗೊಂಡು ಮಾತನಾಡಿದ ಸಿಎಂ ಬೊಮ್ಮಾಯಿ, ಕನ್ನಡದ ವಿಧೇಯಕವನ್ನು ಡಿಸೆಂಬರ್​ನಲ್ಲಿ ಬೆಳಗಾವಿಯಲ್ಲಿ ನಡೆಯಲಿರುವ ವಿಧಾನಸಭೆ ಅಧಿವೇಶನದಲ್ಲಿ ಮಂಡಿಸಿ, ಅನುಮೋದನೆ ಪಡೆಯಲಾಗುವುದು ಎಂದರು.

ರಾಜ್ಯದಲ್ಲಿ 2.5 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿಯಿವೆ. ಮುಂದಿನ 2 ವರ್ಷಗಳಲ್ಲಿ ಈ ಹುದ್ದೆಗಳನ್ನು ಸಂಪೂರ್ಣವಾಗಿ ಭರ್ತಿ ಮಾಡಲಾಗುವುದು. ಈ ವರ್ಷ ಒಂದು ಲಕ್ಷ ಉದ್ಯೋಗ ನೀಡಲಾಗುವುದು. ಹುದ್ದೆಗಳು ತುಂಬಿದಾಗ ಕನ್ನಡಿಗರ ಕೈಗಳಿಗೆ ಉದ್ಯೋಗ ದೊರೆತು, ಆರ್ಥಿಕ ಬಲ ತುಂಬಿದಂತಾಗುತ್ತದೆ. ಆ ನಿಟ್ಟಿನಲ್ಲಿ ಶೈಕ್ಷಣಿಕ ಹಾಗೂ ಔದ್ಯೋಗಿಕ ಕ್ರಾಂತಿ ಆಗಲಿದೆ ಎಂದು ಬೊಮ್ಮಾಯಿ ಈ ವೇಳೆ ಹೇಳಿದರು.

ಕನ್ನಡಕ್ಕಾಗಿ ದುಡಿಯುತ್ತೇವೆ, ಬದುಕುತ್ತೇವೆ ಎಂಬ ಸಂಕಲ್ಪವನ್ನು ಮಾಡೋಣ. ಕನ್ನಡ ನಮ್ಮ ಉಸಿರು, ನಮ್ಮ ಸರ್ವಸ್ವ ಎಂದು ತಿಳಿದು ಎಲ್ಲರೂ ಶ್ರಮಿಸೋಣ.

ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ

ಭಾರತದ ಪ್ರತಿಯೊಂದು ಭಾಷೆ ಮಾತೃಭಾಷೆ. ಎಲ್ಲ ಭಾಷೆಗಳೂ ರಾಷ್ಟ್ರ ಭಾಷೆಗಳೇ ಆಗಿವೆ. ಕನ್ನಡ ನಮ್ಮ ಮಾತೃ ಭಾಷೆಯೂ ಹೌದು, ನಮ್ಮ ರಾಷ್ಟ್ರ ಭಾಷೆಯೂ ಹೌದು. ಮುಂದಿನ ಅಧಿವೇಶನದಲ್ಲಿ ಭಾಷಾ ಬಳಕೆಯ ಮಸೂದೆ ಮಂಡನೆ ಯಾಗಲಿದ್ದು, ಭಾಷೆಗೆ ಕಾನೂನಿನ ಕವಚವನ್ನು ಕೊಟ್ಟಿರುವ ಪ್ರಥಮ ಸರ್ಕಾರ ನಮ್ಮದು. ಈ ಕಾನೂನಿನ ಬಗ್ಗೆ ವ್ಯಾಖ್ಯಾನ, ಸಾರ್ವಜನಿಕವಾಗಿ ಮುಕ್ತ ಚರ್ಚೆಗಳಾಗಲಿ, ಸರ್ಕಾರ ಎಲ್ಲರ ಸಲಹೆಯನ್ನೂ ಮುಕ್ತವಾಗಿ ಸ್ವೀಕರಿಸಲಿದೆ ಎಂದರು. ಕನ್ನಡಕ್ಕೆ ಕಾನೂನು ರೂಪಿಸುವುದು ಒಂದು ಹಂತವಾದರೆ, ಕನ್ನಡಕ್ಕಾಗಿ ಬದುಕಬೇಕೆನ್ನುವ ಭಾವ ಹೃದಯಾಂತ ರಾಳದಿಂದ ಬರಬೇಕು. ಕನ್ನಡ ನಮ್ಮ ಅಂತರಂಗದಲ್ಲಿ, ರಾಜ್ಯದೆಲ್ಲೆಡೆ ಡಿಂಡಿಮವನ್ನು ಬಾರಿಸಲಿ. ನವ ಕರ್ನಾಟಕದ ನಿರ್ವಣದಿಂದ ನವಭಾರತ ನಿರ್ವಣವಾಗಲಿ ಎಂದು ಆಶಿಸಿದರು.

ಖಾಸಗಿ ವಲಯದಲ್ಲಿ ಉದ್ಯೋಗಾವಕಾಶ: 3-4 ವರ್ಷಗಳಲ್ಲಿ ಖಾಸಗಿ ವಲಯದಲ್ಲಿ 3 ಲಕ್ಷಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಯಾಗಲಿದೆ. ಕರ್ನಾಟಕ ಪ್ರಗತಿಪರವಾದ ರಾಜ್ಯವಾಗಿದ್ದು, 7 ಲಕ್ಷ ಕೋಟಿ ಬಂಡವಾಳ ಹರಿದುಬರಲಿದೆ. ತನ್ಮೂಲಕ ರಾಜ್ಯ ಅಭಿವೃದ್ಧಿ ಹೊಂದಲಿದೆ ಎಂದು ಸಿಎಂ ಹೇಳಿದರು. ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಸಂಸದ ಪಿ.ಸಿ. ಮೋಹನ್, ವಿಧಾನ ಪರಿಷತ್ ಸದಸ್ಯರಾದ ಬಸವರಾಜ ಹೊರಟ್ಟಿ, ಗೋವಿಂದರಾಜು, ಶಾಸಕ ರಿಜ್ವಾನ್ ಅರ್ಷದ್, ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ ಮತ್ತಿತರರು ಉಪಸ್ಥಿತರಿದ್ದರು.

ರಾಷ್ಟ್ರೀಯ ಶಿಕ್ಷಣ ನೀತಿ ಅನ್ವಯ ಶಾಲಾ ಶಿಕ್ಷಣದ ಎಲ್ಲ ಹಂತಗಳಲ್ಲಿ ಕನ್ನಡ ಭಾಷೆಯನ್ನು ಅಳವಡಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಕನ್ನಡ ಮಾಧ್ಯಮದ 100 ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳನ್ನು ಉನ್ನತೀಕರಿಸಲಾಗಿದೆ.

| ಬಿ.ಸಿ. ನಾಗೇಶ್ ಶಿಕ್ಷಣ ಸಚಿವ

ನಾಡು ಕಟ್ಟಲು ಕಾಣಿಕೆ ಏನು?: ಏಕೀಕರಣದ ಹೋರಾಟದಿಂದ ಸೃಷ್ಟಿಯಾದ ಕನ್ನಡ ನಾಡು ಹಿರಿಯರ ಕನಸು. ಆರೂವರೆ ದಶಕಗಳ ಈ ಪಯಣದಲ್ಲಿ ಸಿಂಹಾವಲೋಕನದ ಅವಶ್ಯಕತೆಯಿದೆ. ಜತೆಗೆ, ಪ್ರತಿಯೊಬ್ಬ ಕನ್ನಡಿಗ ಕನ್ನಡ ನಾಡನ್ನು ಕಟ್ಟಲು ತನ್ನ ಕಾಣಿಕೆ ಏನು? ದುಡಿಮೆ ಏನು? ಎಂಬುದನ್ನು ಕೇಳಿಕೊಳ್ಳಬೇಕು. ನಾಡಿನ ಅಭಿವೃದ್ಧಿಗೆ ಶ್ರಮಿಸಿದರೆ ಇಡೀ ವಿಶ್ವದಲ್ಲಿಯೇ ಕರ್ನಾಟಕ ಅತ್ಯಂತ ಶ್ರೇಷ್ಠ ಎನಿಸಿಕೊಳ್ಳಲಿದೆ ಎಂದು ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.

8 ಸಾವಿರ ವಿವೇಕ ಕೊಠಡಿ: ಈ ವರ್ಷ 8 ಸಾವಿರ ಶಾಲಾ ಕೊಠಡಿಗಳನ್ನು ನಿರ್ವಿುಸಲಾಗುತ್ತಿದ್ದು, ಇದೊಂದು ದಾಖಲೆ. 1956ರಲ್ಲಿ ಕರ್ನಾಟಕ ರಚನೆಯಾದ ಮೇಲೆ ಯಾವುದೇ ಸರ್ಕಾರ ಒಂದು ವರ್ಷದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಶಾಲಾ ಕೊಠಡಿಗಳ ನಿರ್ವಣಕ್ಕೆ ಅನುಮತಿ ನೀಡಿರಲಿಲ್ಲ. ಮುಂದಿನ ಮೂರು ವರ್ಷ ಈ ಕೆಲಸ ಮಾಡಿದರೆ ಶಾಲಾ ಕೊಠಡಿಗಳ ಕೊರತೆ ನೀಗಲಿದೆ. ವಿವೇಕ ಹೆಸರಿನಡಿ ಯೋಜನೆ ಜಾರಿಗೊಳಿಸಲಾಗಿದೆ ಎಂದು ವಿವರಿಸಿದರು.