ಓಮ್ರಿಕಾನ್ ಅತಂಕ: ಪುನಃ ತವರು ರಾಜ್ಯಗಳತ್ತ ಮುಖ ಮಾಡಿದ ಕಾರ್ಮಿಕರು

ಓಮ್ರಿಕಾನ್ ಅತಂಕ: ಪುನಃ ತವರು ರಾಜ್ಯಗಳತ್ತ ಮುಖ ಮಾಡಿದ ಕಾರ್ಮಿಕರು

ಬೆಂಗಳೂರು, ನ. 29: ಕೊರೊನಾ ಮೂರನೇ ಅಲೆ ಭೀತಿ ಹಿನ್ನೆಲೆಯಲ್ಲಿ ಮತ್ತೆ ಲಾಕ್ ಡೌನ್ ಮಾಡುತ್ತಾರೆ ಎಂಬ ಗಾಳಿ ಸುದ್ದಿಗಳಿಗೆ ಸಾರ್ವಜನಿಕರು ಅತಂಕಕ್ಕೆ ಒಳಗಾಗಿದ್ದಾರೆ. ಹೊರ ರಾಜ್ಯಗಳ ಕೆಲಸಗಾರರು ಮತ್ತೆ ಬೆಂಗಳೂರು ತೊರೆಯಲಾರಂಭಿಸಿದ್ದಾರೆ.

ರೈಲು ನಿಲ್ದಾಣ ಹಾಗೂ ಹೊರ ರಾಜ್ಯದ ಬಸ್ ಗಳನ್ನು ಬುಕ್ಕಿಂಗ್ ಮಾಡುವಲ್ಲಿ ನಿರತರಾಗಿದ್ದಾರೆ.

ಇದರ ನಡುವೆ ಕಟ್ಟು ನಿಟ್ಟಿನ ನಿಯಮ ಹೊರತು ಪಡಿಸಿ ಯಾವುದೇ ಲಾಕ್‌ಡೌನ್ ಜಾರಿಯಿಲ್ಲ ಎಂದು ಆರೋಗ್ಯ ಸಚಿವರ ಕಾರ್ಯಾಲಯ ಸ್ಪಷ್ಟಪಡಿಸಿದೆ.

ದಕ್ಷಿಣ ಆಫ್ರಿಕಾ ಸೇರಿದಂತೆ ಹಲವು ದೇಶಗಳಲ್ಲಿ ಕೋವಿಡ್ ರೂಪಾಂತರಿ ಓಮಿಕ್ರಾನ್ ಹಾವಳಿ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ವಿಶ್ವದ ಅನೇಕ ರಾಷ್ಟ್ರಗಳು ಮತ್ತೆ ಕೋವಿಡ್ ಸುರಕ್ಷತಾ ನಿಯಮಗಳನ್ನು ಬಿಗಿಗೊಳಿಸುತ್ತಿವೆ. ಕೊರೊನಾ ಮೂರನೇ ಅಲೆಯ ಭೀತಿ ಹಿನ್ನೆಲೆಯಲ್ಲಿ ಹೊರ ದೇಶಗಳಿಂದ ಭಾರತಕ್ಕೆ ಬರುವ ಪ್ರಜೆಗಳ ಕಡ್ಡಾಯ ಪರೀಕ್ಷೆಗೆ ಸೂಚನೆ ನೀಡಲಾಗಿದೆ. ರಾಜ್ಯದಲ್ಲೂ ಸಹ ಹೊರ ದೇಶಗಳಿಂದ ಬರುವರ ಮೇಲೆ ಹೆಚ್ಚಿನ ನಿಗಾ ಜತೆಗೆ ಹೆಚ್ಚುವರಿ ಸುರಕ್ಷತಾ ಕ್ರಮಗಳನ್ನು ಪಾಲಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೂಚಿಸಿದೆ.

ಅದರಂತೆ ಯುನೈಟೆಡ್ ಕಿಂಗ್ ಡಮ್, ದಕ್ಷಿಣ ಆಫ್ರಿಕಾ, ಬ್ರೆಜಿಲ್, ಬಾಂಗ್ಲಾದೇಶ, ಚೈನಾ, ನ್ಯೂಜಿಲಾಂಡ್, ಜಿಂಬಾಂಬ್ವೆ, ಸಿಂಗಪೂರ್, ಹಾಂಕಾಂಗ್ ಮತ್ತು ಇಸ್ರೇಲ್ ಮತ್ತಿತರ ರಾಷ್ಟ್ರಗಳಿಂದ ಬರುವರ ಮೇಲೆ ಪೋಸ್ಟ್ ಕೋವಿಡ್ ಪರೀಕ್ಷೆ ಜತೆಗೆ ಹೆಚ್ಚುವರಿ ಸುರಕ್ಷತಾ ಕ್ರಮ ಪಾಲನೆ ಮಾಡಲು ಸೂಚನೆ ನೀಡಲಾಗಿದೆ. ಓಮಿಕ್ರಾನ್ ರೂಪಾಂತರ ಕೊರೊನಾ ವೈರಸ್ ಪತ್ತೆಯಾದ ಬೆನ್ನಲ್ಲೇ ಅನೇಕ ರಾಷ್ಟ್ರಗಳು ಸುರಕ್ಷತಾ ಕ್ರಮ ಬಿಗಿಗೊಳಿಸಲು ಮುಂದಾಗಿವೆ.

ಲಾಕ್ ಡೌನ್ ಗಾಳಿ ಸುದ್ದಿ:

ರಾಜ್ಯಲ್ಲಿ ಒಮಿಕ್ರಾನ್ ರೂಪಾಂತರಿ ಕರೊನಾ ವೈರಸ್ ಪತ್ತೆಯಾದ ಬೆನ್ನಲ್ಲೇ, ಮುಂದಿನ ಹದಿನೈದು ದಿನಗಳ ಕಾಲ ಲಾಕ್‌ಡೌನ್ ಮಾಡಲಾಗುತ್ತದೆ ಎಂಬ ಸುದ್ದಿಗಳು ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿವೆ. ಇದು ಸಾರ್ವಜನಿಕರಲ್ಲಿ ಅತಂಕ ಮನೆ ಮಾಡಿಸಿದೆ. ಇದನ್ನೇ ನಂಬಿ ಬಿಹಾರ, ಉತ್ತರ ಪ್ರದೇಶದಿಂದ ಬೆಂಗಳೂರಿಗೆ ಬಂದಿದ್ದ ಕಾರ್ಮಿಕ ವರ್ಗ ಪುನಃ ಮರಳಲು ಸಿದ್ಧತೆ ಮಾಡಿಕೊಂಡಿದ್ದಾರೆ. ಗಾಳಿ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿದೆ. ಸುಳ್ಳು ಸುದ್ದಿಗಳನ್ನು ಹಬ್ಬಿಸುವ ಮೂಲಕ ಸಾರ್ವಜನಿಕರಲ್ಲಿ ಗೊಂದಲ ಮೂಡಿದೆ. ಅದರಲ್ಲೂ ಹೊರ ರಾಜ್ಯದ ಕಾರ್ಮಿಕ ವರ್ಗದಲ್ಲಿ ಅತಂಕ ಮನೆ ಮಾಡಿದ್ದು, ರೈಲು ನಿಲ್ದಾಣಗಳತ್ತ ಕೆಲವರು ಪ್ರಯಾಣ ಬೆಳೆಸಿದ್ದಾರೆ.

ಎರಡನೇ ಅಲೆಯಿಂದ ಹಲವು ತಿಂಗಳ ಕಾಲ ಲಾಕ್ ಡೌನ್ ಮಾಡಲಾಗಿತ್ತು. ಇದರಿಂದಾಗಿ ಎಲ್ಲಾ ಕ್ಷೇತ್ರಗಳ ಪ್ರಗತಿ ಕ್ಷೀಣಿಸಿದೆ. ಎಲ್ಲವನ್ನೂ ಮೆಟ್ಟಿ ನಿಂತು ಇದೀಗ ಚೇತರಿಸಿಕೊಳ್ಳುವ ಹಂತದಲ್ಲಿಯೇ ಮೂರನೇ ಸರಣಿಯ ಲಾಕ್ ಡೌನ್ ಸುದ್ದಿ ಭೀತಿ ಹುಟ್ಟಿಸಿದೆ. ಲಾಕ್ ಡೌನ್ ಮಾಡುವುದಿಲ್ಲ ಎಂದು ಸರ್ಕಾರ ಸ್ಪಷ್ಟನೆ ನೀಡಿದೆ. ಇದರ ಹೊರತಾಗಿಯೂ ಗಾಳಿ ಸುದ್ದಿಯನ್ನೇ ನಂಬಿ ಜನರು ಬೆಂಗಳೂರು ತೊರೆಯಲು ಮುಂದಾಗಿದ್ದಾರೆ.

ಗುಪ್ತಚರ ನಿಗಾ:

ಇನ್ನು ಓಮಿಕ್ರಾನ್ ರೂಪಾಂತರಿ ಕೊರೊನಾ ವೈರಸ್ ಅತಂಕ ಸೃಷ್ಟಿಸಿದ ಬೆನ್ನಲ್ಲೇ ರಾಜ್ಯದಲ್ಲಿ ಮೂರನೇ ಬಾರಿ ಲಾಕ್ ಡೌನ್ ಮಾಡಲು ಸರ್ಕಾರ ಸಿದ್ಧತೆ ಮಾಡಿಕೊಂಡಿದೆ ಎಂಬ ಗಾಳಿ ಸುದ್ದಿ ಹರಿದಾಡುತ್ತಿದೆ. ಈ ಕುರಿತು ಹೊರ ಬರುತ್ತಿರುವ ಗಾಳಿ ಸುದ್ದಿಗಳ ಮೇಲೆ ಗುಪ್ತಚರ ಇಲಾಖೆ ಕೂಡ ನಿಗಾ ಇಟ್ಟಿದೆ. ಸಾರ್ವಜನಿಕರಲ್ಲಿ ಅನಾವಶ್ಯಕವಾಗಿ ಭೀತಿ ಹುಟ್ಟಿಸಿದರೆ ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ಸುಳ್ಳು ಸುದ್ದಿ ಹಬ್ಬಿಸುತ್ತಿರುವರ ವಿವರ ಸಂಗ್ರಹಿಸಿ ಸರ್ಕಾರಕ್ಕೆ ಮಾಹಿತಿ ಸಲ್ಲಿಸುವ ಕಾರ್ಯದಲ್ಲಿ ಗುಪ್ತ ಚರ ಇಲಾಖೆ ಕಾರ್ಯೋನ್ಮುಖವಾಗಿದೆ ಎಂದು ಉನ್ನತ ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.

ರಾಜ್ಯದಲ್ಲಿ ಈಗಾಗಲೇ ಈಗಾಗಲೇ ಎರಡು ಲಾಕ್ ಡೌನ್ ಎದುರಿಸಿದ ಜನರು ಆರ್ಥಿಕವಾಗಿ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇನ್ನೂ ಚೇತರಿಸಿಕೊಳ್ಳದೇ ಸಾಲಗಳ ಸುಳಿಗೆ ಸಿಕ್ಕಿ ಒದ್ದಾಡುತ್ತಿದ್ದಾರೆ. ಇಂತಹ ಸಂಕಷ್ಟ ಸ್ಥಿತಿಯಲ್ಲಿ ಲಾಕ್‌ಡೌನ್ ಗಾಳಿ ಸುದ್ದಿ ಹರಿದಾಡುತ್ತಿದ್ದು, ಹೊರ ರಾಜ್ಯದ ಕಾರ್ಮಿಕರು, ಕೆಲಸಗಾರರು ತವರು ನೆಲಗಳತ್ತ ಮುಖ ಮಾಡುತ್ತಿದ್ದಾರೆ. ಕೊರೊನಾ ರೂಪಾಂತರಿ ವೈರಸ್ ಪತ್ತೆ ಹಿನ್ನೆಲೆಯಲ್ಲಿ ಹಿನ್ನೆಲೆಯಲ್ಲಿ ಮೂರನೇ ಲಾಕ್ ಡೌನ್ ಬಗ್ಗೆ ಸಾರ್ವಜನಿಕರಿಗೆ ಮೂಡಿರುವ ಗೊಂದಲ ಬಗ್ಗೆ ಸರ್ಕಾರ ಮಧ್ಯ ಪ್ರವೇಶಿಸಿ ಸ್ಪಷ್ಟನೆ ನೀಡುವುದು ಸೂಕ್ತ. ಇಲ್ಲದಿದ್ದರೆ ಅ ಭೀತಿಯಿಂದಲೇ ಮತ್ತಷ್ಟು ಸಮಸ್ಯೆಗಳು ಎದುರಾಗಲಿವೆ. ಈ ಬಗ್ಗೆ ಮುಖ್ಯಮಂತ್ರಿಗಳು ಲಾಕ್ ಡೌನ್ ಕುರಿತು ಮೂಡಿರುವ ಗೊಂದಲಗಳಿಗೆ ತೆರೆ ಎಳೆಯಬೇಕಾದ ಪರಿಸ್ಥಿತಿ ಒದಗಿ ಬಂದಿದೆ.