ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಪಾಕ್ ಯುವತಿಯ ಗಡಿಪಾರು

ಬೆಂಗಳೂರು: ನಗರದಲ್ಲಿ ಅಕ್ರಮವಾಗಿ ಪಾಕಿಸ್ತಾನದ ಯುವತಿಯೊಬ್ಬಳು ನೆಲೆಸಿ ಕೊನೆಗೆ ಪೊಲೀಸರ ವಶ ಪಡೆಸಿಕೊಂಡಿದ್ದರು. ಇದೀಗ ಬೆಂಗಳೂರು ಪೊಲೀಸರು ಇಕ್ರಾ ಜೀವನಿಯನ್ನು ಗಡಿಪಾರು ಮಾಡಿದ್ದಾರೆ. ಆಕೆಯನ್ನು ಪಾಕಿಸ್ತಾನ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ.
ಈಕೆ ಉತ್ತರ ಪ್ರದೇಶದ ಮುಲಾಯಂ ಸಿಂಗ್ ಜೊತೆ ಬೆಂಗಳೂರಿಗೆ ಬಂದಿದ್ದಳು. ನಂತರ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿಗೆ ಸುಪರ್ದಿಗೆ ಒಪ್ಪಿಸಲಾಗಿತ್ತು. ಈಕೆ ಪಾಕ್ ಪ್ರಜೆ ಎಂಬುದು ಸಾಬೀತಾದ ಬಳಿಕ ವಿದೇಶಾಂಗ ಇಲಾಖೆಯ ಸಹಾಯದೊಂದಿಗೆ ಬೆಳ್ಳಂದೂರು ಪೊಲೀಸರು ವಾಘಾ - ಅಠಾರಿ ಗಡಿಯಲ್ಲಿ ಭಾನುವಾರ ಪಾಕಿಸ್ತಾನ ರಾಜತಾಂತ್ರಿಕ ಅಧಿಕಾರಿಗಳಿಗೆ ಒಪ್ಪಿಸುವ ಮೂಲಕ ಗಡಿಪಾರು ಮಾಡಿದ್ದಾರೆ.
ಏನಿದು ಪ್ರಕರಣ?
ಕಳೆದ ಏಳು ವರ್ಷದಿಂದ ಮುಲಾಯಂ ಸಿಂಗ್ ಯಾದವ್ ಬೆಂಗಳೂರಿನ ಕೆಲಸ ಮಾಡಿಕೊಂಡಿದ್ದ. ನಗರದ ಬೇರೆ ಬೇರೆ ಕಂಪನಿಗಳಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೂಡ ಕೆಲಸ ಮಾಡುತ್ತಿದ್ದನು. ಈತನಿಗೆ ಆನ್‌ಲೈನ್‌ನಲ್ಲಿ ಲೂಡೋ ಆಡುವ ಹವ್ಯಾಸವಿತ್ತು. ಈ ಆಟದ ಸಮಯದಲ್ಲೇ ಪಾಕ್ ಯುವತಿಯ ಪರಿಚಯವಾಗಿದೆ. ಪರಿಚಯ ಪ್ರೇಮಕ್ಕೆ ತಿರುಗಿ ಇಬ್ಬರು ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದರು.
ಗೆಳತಿ ಪಾಕಿಸ್ತಾನದಲ್ಲಿರುವ ಕಾರಣ ನೇರವಾಗಿ ಭಾರತಕ್ಕೆ ಬರಲು ಸಾಧ್ಯವಿಲ್ಲ ಎಂಬುದನ್ನು ತಿಳಿದುಕೊಂಡಿದ್ದ ಆತ ಕರಾಚಿಯಿಂದ ದುಬೈಗೆ, ದುಬೈಯಿಂದ ನೇಪಾಳದ ಕಠ್ಮಂಡುಗೆ ಕರೆಸಿಕೊಂಡಿದ್ದಾನೆ. ನೇಪಾಳದಲ್ಲಿ ಇಬ್ಬರು ಮದುವೆಯಾಗಿದ್ದು ಬಳಿಕ ಕಳೆದ ಸೆಪ್ಟೆಂಬರ್‌ನಲ್ಲಿ ಬಿಹಾರದ ಗಡಿ ಪ್ರವೇಶಿಸಿ ಪಾಟ್ನಾಗೆ ಬಂದಿದ್ದಾರೆ.