ಇನ್​ಸ್ಪೆಕ್ಟರ್​ ನಂದೀಶ್ ಸಾವಿನ ಬೆನ್ನಿಗೇ ಮಾಜಿ ಕಮಿಷನರ್ ಭಾಸ್ಕರ್ ರಾವ್ ಗಂಭೀರ ಆರೋಪ; ಪೊಲೀಸರಿಗೆ ಕಿವಿಮಾತು

ಇನ್​ಸ್ಪೆಕ್ಟರ್​ ನಂದೀಶ್ ಸಾವಿನ ಬೆನ್ನಿಗೇ ಮಾಜಿ ಕಮಿಷನರ್ ಭಾಸ್ಕರ್ ರಾವ್ ಗಂಭೀರ ಆರೋಪ; ಪೊಲೀಸರಿಗೆ ಕಿವಿಮಾತು

ಬೆಂಗಳೂರು: ಇತ್ತೀಚೆಗೆ ಬೆಂಗಳೂರಿನಲ್ಲಿ ಸಾವಿಗೀಡಾದ ಕೆ.ಆರ್​.ಪುರ ಪೊಲೀಸ್ ಇನ್​ಸ್ಪೆಕ್ಟರ್​ ನಂದೀಶ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಮಾಜಿ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಪ್ರತಿಕ್ರಿಯಿಸಿದ್ದು ಮಾತ್ರವಲ್ಲದೆ, ಗಂಭೀರ ಆರೋಪ ಹೊರಿಸಿ ಸ್ಫೋಟಕ ಹೇಳಿಕೆಯನ್ನು ನೀಡಿದ್ದಾರೆ.

ನಂದೀಶ್ ಸಾವಿನ ಸುದ್ದಿ ಕೇಳಿ ದುಃಖವಾಯ್ತು ವೀಡಿಯೊ ಮಾಡಿ ಹಂಚಿಕೊಂಡಿರುವ ಅವರು, ಪೊಲೀಸ್ ಇಲಾಖೆ ಮಾತ್ರವಲ್ಲದೆ ಸರ್ಕಾರದ ಪ್ರತಿ ಇಲಾಖೆಯಲ್ಲೂ ಹುದ್ದೆಗಳನ್ನು ಮಾರಾಟಕ್ಕೆ ಇಡಲಾಗಿದೆ ಎಂದು ಆರೋಪಿಸಿದ್ದಾರೆ. ಇದಕ್ಕೆಲ್ಲ ಕಾರಣ ಸ್ಥಳೀಯ ಶಾಸಕರು, ಸಂಬಂಧಪಟ್ಟ ಸಚಿವರು ಹಾಗೂ ಮುಖ್ಯಮಂತ್ರಿ ಕಾರಣ ಎಂದೂ ಅವರು ಹೇಳಿದ್ದಾರೆ. ಸಿಎಂ ಸುಮ್ಮನೆ ಬಿಟ್ಟಿದ್ದಕ್ಕೆ ಈ ವಾತಾವರಣ ಸೃಷ್ಟಿಯಾಗಿದೆ ಎಂದು ಭಾಸ್ಕರ್ ರಾವ್ ಹೇಳಿದ್ದಾರೆ.

ಪ್ರತಿ ಹುದ್ದೆಯೂ ಲಕ್ಷದಿಂದ ಕೋಟಿ ರೂಪಾಯಿಗಳವರೆಗೆ ಮಾರಾಟವಾಗುತ್ತಿದೆ. ಇದು ಬಿಜೆಪಿ ಅವಧಿಯಲ್ಲಿ ಮಾತ್ರ ಅಂತೇನೂ ಅಲ್ಲ, ಹಿಂದೆ ಕಾಂಗ್ರೆಸ್​​ ಅವಧಿಯಲ್ಲೂ ನಡೆದಿತ್ತು ಎಂದು ಆರೋಪಿಸಿರುವ ಅವರು, ಪೊಲೀಸರಿಗೆ ಕಿವಿಮಾತು ಕೂಡ ಹೇಳಿದ್ದಾರೆ.

ನೀವು ಸಾವಿಗೀಡಾದರೆ ಆ ಸ್ಥಾನಕ್ಕೆ ಇನ್ನೊಬ್ಬನನ್ನು ನೇಮಕ ಮಾಡುತ್ತಾರೆ. ಆದರೆ ನಿಮ್ಮ ಮನೆಯವರಿಗೆ ಪರ್ಯಾಯ ಇರುವುದಿಲ್ಲ. ಒಂದು ವೇಳೆ ನೀವೂ ದುಡ್ಡು ಕೊಟ್ಟು ಬಂದಿದ್ದರೆ ತಲೆ ಕೆಡಿಸಿಕೊಳ್ಳಬೇಡಿ, ದುಡ್ಡು ಹೋದರೆ ಹೋಗಲಿ, ಆರೋಗ್ಯ ಕಾಪಾಡಿಕೊಳ್ಳಿ, ನಿಮ್ಮ ಪ್ರಾಣ ಮುಖ್ಯ ಎಂದು ಭಾಸ್ಕರ್ ರಾವ್ ಸಲಹೆ ನೀಡಿದ್ದಾರೆ.