ನಾಳೆ ಉತ್ತರಾಖಂಡಕ್ಕೆ ಪ್ರಧಾನಿ ಮೋದಿ: ₹17,500 ಕೋಟಿ ಮೊತ್ತದ ಯೋಜನೆಗಳಿಗೆ ಚಾಲನೆ

ನಾಳೆ ಉತ್ತರಾಖಂಡಕ್ಕೆ ಪ್ರಧಾನಿ ಮೋದಿ: ₹17,500 ಕೋಟಿ ಮೊತ್ತದ ಯೋಜನೆಗಳಿಗೆ ಚಾಲನೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಉತ್ತರಾಖಂಡದ ಹಲ್‌ದ್ವಾನಿಗೆ ಭೇಟಿ ನೀಡಲಿದ್ದು, ₹17,500 ಕೋಟಿ ಮೊತ್ತದ 23 ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.

23 ಯೋಜನೆಗಳ ಪೈಕಿ ₹14,100 ಕೋಟಿ ಮೊತ್ತದ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಇದರಲ್ಲಿ ನೀರಾವರಿ, ರಸ್ತೆ, ಗೃಹ ನಿರ್ಮಾಣ, ಆರೋಗ್ಯ ಮೂಲಸೌಕರ್ಯ, ಕೈಗಾರಿಕೆ, ನೈರ್ಮಲ್ಯ, ಕುಡಿಯುವ ನೀರು, ನೀರು ಸರಬರಾಜು ಯೋಜನೆಗಳೂ ಸೇರಿವೆ.

₹3,400 ಕೋಟಿ ಮೊತ್ತದ ಯೋಜನೆಗಳನ್ನು ಪ್ರಧಾನಿ ಉದ್ಘಾಟಿಸಲಿದ್ದಾರೆ. ಇದರಲ್ಲಿ ರಸ್ತೆ ಅಗಲೀಕರಣ, ಪಿತೋರಗಢದ ಜಲವಿದ್ಯುತ್, ನೈನಿತಾಲ್‌ನ ಒಳಚರಂಡಿ ಜಾಲ ಯೋಜನೆಗಳು ಸೇರಿವೆ.

₹5,750 ಕೋಟಿ ವೆಚ್ಚದ ಲಖ್ವಾರ್ ವಿವಿಧೋದ್ದೇಶ ಯೋಜನೆಗೂ ಮೋದಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. 1976ರಲ್ಲೇ ರೂಪಿಸಲಾಗಿದ್ದ ಈ ಯೋಜನೆ ದಶಕಗಳಿಂದ ನನೆಗುದಿಗೆ ಬಿದ್ದಿತ್ತು.

ಉತ್ತರಾಖಂಡ, ಉತ್ತರ ಪ್ರದೇಶ, ಹರಿಯಾಣ, ದೆಹಲಿ, ಹಿಮಾಚಲ ಪ್ರದೇಶ ಹಾಗೂ ರಾಜಸ್ಥಾನಗಳಲ್ಲಿ ಸುದೀರ್ಘ ಅವಧಿಯಿಂದ ನನೆಗುದಿಗೆ ಬಿದ್ದಿರುವ ದೇಶದ ಹಿತಾಸಕ್ತಿಗೆ ಸಂಬಂಧಿಸಿದ ಯೋಜನೆಗಳನ್ನು ಶೀಘ್ರ ಕಾರ್ಯಗತಗೊಳಿಸುವುದು ಮೋದಿ ಅವರ ಉದ್ದೇಶವಾಗಿದೆ ಎಂದು ಪ್ರಧಾನಿ ಕಾರ್ಯಾಲಯ ಪ್ರಕಟಣೆಯಲ್ಲಿ ತಿಳಿಸಿದೆ.