ಕೋರ್ಟ್‌ಗಳಲ್ಲಿ ಹೆಚ್ಚುತ್ತಿರುವ ನಕಲಿ ಶ್ಯೂರಿಟಿ ತಡೆಗೆ ಮಾರ್ಗಸೂಚಿ

ಕೋರ್ಟ್‌ಗಳಲ್ಲಿ ಹೆಚ್ಚುತ್ತಿರುವ ನಕಲಿ ಶ್ಯೂರಿಟಿ ತಡೆಗೆ ಮಾರ್ಗಸೂಚಿ

ಬೆಂಗಳೂರು,; ಸರ್ಕಾರಿ ಇಲಾಖೆಗಳಲ್ಲಿ ಮತ್ತು ಇತರೆಡೆಗಳಲ್ಲಿ ನಕಲಿ ದಾಖಲೆಗಳ ಹಾವಳಿ ಮಾಮೂಲಿ ಮತ್ತು ಅದು ಎಲ್ಲರಿಗೂ ತಿಳಿದಿರುವ ಸಂಗತಿಯೇ ಸರಿ.

ಆದರೆ, ಕೋರ್ಟ್‌ಗಳನ್ನೂ ಬಿಡುತ್ತಿಲ್ಲ ಈ ನಕಲಿ ದಾಖಲೆಗಳ ಹಾವಳಿ. ಅಪರಾಧ ಪ್ರಕರಣಗಳಲ್ಲಿ ಜಾಮೀನು ಪಡೆಯಲು ನಕಲಿ ದಾಖಲೆಗಳನ್ನು ಸಲ್ಲಿಸಿ ಶ್ಯೂರಿಟಿ ನೀಡುತ್ತಿರುವ ಪ್ರಕರಣಗಳ ಹೆಚ್ಚಾಗುತ್ತಿರುವ ಕುರಿತು ಹೈಕೋರ್ಟ್ ತೀವ್ರ ಕಳವಳ ವ್ಯಕ್ತ ಪಡಿಸಿದೆ.

ಜಾಮೀನಿಗಾಗಿ ಶ್ಯೂರಿಟಿ ನೀಡುವವರ ಆಧಾರ್ ಸೇರಿದಂಥೆ ಎಲ್ಲ ಬಗೆಯ ವೈಯಕ್ತಿಕ ವಿವರಗಳನ್ನು ಸಂಪೂರ್ಣ ಪರಿಶೀಲನೆಗೊಳಪಡಿಸಿ ಖಾತರಿ ಪಡಿಸಿಕೊಳ್ಳಬೇಕು ಎಂದು ವಿಚಾರಣಾ ನ್ಯಾಯಾಲಯಗಳಿಗೆ ಮಾರ್ಗಸೂಚಿ ನಿಗದಿಪಡಿಸಿದೆ.

ಮೃತಪಟ್ಟ ವ್ಯಕ್ತಿಯ ಹೆಸರು, ಆಧಾರ್ ಕಾರ್ಡ್ ಹಾಗೂ ಜಮೀನಿನ ನಕಲಿ ದಾಖಲೆಗಳನ್ನು ನೀಡಿ ಜಾಮೀನು ಪಡೆದಿರುವ ಪ್ರಕರಣ ರದ್ದು ಕೋರಿ ಸಂಬಂಧಿಕರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾ. ಸೂರಜ್ ಗೋವಿಂದರಾಜು ಅವರಿದ್ದ ಏಕಸದಸ್ಯಪೀಠ ಮಾರ್ಗಸೂಚಿ ನೀಡಿದೆ. ಅಲ್ಲದೆ, ಈ ಕುರಿತು ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್, ಹಂಗಾಮಿ ಸಿಜೆ ಅನುಮತಿ ಪಡೆದು ಕ್ರಿಮಿನಲ್ ಪ್ರಕರಣಗಳ ವಿಚಾರಣೆ ನಡೆಸುತ್ತಿರುವ ನ್ಯಾಯಾಲಯಗಳಿಗೆ ಸುತ್ತೋಲೆಗಳನ್ನು ಹೊರಡಿಸಬೇಕು ಎಂದು ಆದೇಶಿಸಿದೆ.

ಮಾರ್ಗಸೂಚಿಗಳೇನು?

· ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು, ಶ್ಯೂರಿಟಿ ನೀಡುವ ಜಮೀನುಗಳ ಕುರಿತು ಮಾಹಿತಿ ನೀಡುವುದಕ್ಕಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ಅಗತ್ಯ ತರಬೇತಿ ನೀಡಬೇಕು.

· ಶ್ಯೂರಿಟಿಯನ್ನು ಪಡೆದುಕೊಳ್ಳುವ ಸಂದರ್ಭದಲ್ಲಿ ಸಹಿ, ಹೆಬ್ಬರಳಿನ ಗುರುತಿನ ಚೀಟಿ ಹಾಗೂ ಭಾವಚಿತ್ರದೊಂದಿಗಿನ ದಾಖಲೆಗಳನ್ನು ಪಡೆದುಕೊಳ್ಳಬೇಕು.

· ಶ್ಯೂರಿಟಿ ಪಡೆದ ಸಮಯದಲ್ಲಿ ನ್ಯಾಯಾಲಯಗಳು, ಶ್ಯೂರಿಟಿ ದಾರನ ಸಂಪೂರ್ಣ ಹೆಸರು, ತಂದೆಯ ಹೆಸರು, ವಯಸ್ಸು, ವೃತ್ತಿ ಮತ್ತು ಸೇರಿದಂತೆ ಸಂಪೂರ್ಣ ಅಂಚೆ ವಿಳಾಸ ದಾಖಲಿಸಿಕೊಳ್ಳಬೇಕು

· ಬ್ಯಾಂಕ್ ಪಾಸ್ ಬುಕ್ ಅಥವಾ ಪಡಿತರ ಚೀಟಿ, ಆಧಾರ್ ಕಾರ್ಡ್‌ ಮತ್ತು ಇತರೆ ಗುರುತಿನ ಚೀಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು.

· ನಗದು ಶ್ಯೂರಿಟಿ ನೀಡಿದಲ್ಲಿ ಅಂತಹ ವ್ಯಕ್ತಿ ನೀಡಿರುವ ವಿಳಾಸದಲ್ಲಿ ನೆಲೆಸಿದ್ದಾರೆಯೇ ಎಂಬುದಕ್ಕೆ ಸಂಬಂಧಿಸಿದಂತೆ ಖಾತ್ರಿಪಡಿಸುವುದಕ್ಕಾಗಿ ಆಧಾರ್ ಕಾರ್ಡ್, ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ ಸೇರಿ ಇತರೆ ದಾಖಲೆ ಸಂಗ್ರಹಿಸಿ ನ್ಯಾಯಾಲಯಕ್ಕೆ ಸಲ್ಲಿಸಬೇಕು.

· ಜಾಮೀನಿಗಾಗಿ ಬರುವ ಶ್ಯೂರಿಟಿಯ ಆಸ್ತಿ ಪತ್ರಗಳನ್ನು ಸರ್ಕಾರದ ವೆಬ್‌ಸೈಟ್‌ಗಳಾದ ಕಾವೇರಿ ಹಾಗೂ ಭೂಮಿಯಲ್ಲಿ ಪರಿಶೀಲನೆಗೊಳಪಡಿಸಿಕೊಳ್ಳಬೇಕು. ಜತಗೆ, ಅಗತ್ಯವಿದ್ದಲ್ಲಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಂದ ಮತ್ತೊಮ್ಮೆ ಖಾತರಿ ಪಡಿಸಿಕೊಳ್ಳಬೇಕು.

· ನಕಲಿ ಆಧಾರ್ ಕಾರ್ಡ್‌ಗಳನ್ನು ಸಲ್ಲಿಸುವುದಕ್ಕೆ ತಡೆಯುವುದಕ್ಕಾಗಿ ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ(ಯುಐಡಿಎಐ)ಅವರು ಸಹಕಾರ ನೀಡಬೇಕು.

· ಶ್ಯೂರಿಟಿ ನೀಡುವರ ಕುರಿತು ನ್ಯಾಯಾಲಯಗಳ ಸಾಫ್ಟ್‌ವೇರ್‌ನಲ್ಲಿ ಸಂಬಂಧಪಟ್ಟ ಪೊಲೀಸ್ ಠಾಣೆಯ ಹೆಸರು, ಅಪರಾಧ ಸಂಖ್ಯೆ, ಆರೋಪಿತರ ಹೆಸರು ಸೇರಿದಂತೆ ವಿವರಗಳನ್ನು ನಮೂದು ಮಾಡಬೇಕು.

· ಜಾಮೀನು ನೀಡುವ ಸಂದರ್ಭದಲ್ಲಿ ಸಂಬಂಧ ಪಟ್ಟ ನ್ಯಾಯಾಲಯಗಳು ಸಾಕ್ಷಿದಾರರ ಭಾವಚಿತ್ರ, ಸಹಿ, ಹೆಬ್ಬೆರಳಿನ ಗುರುತುನ್ನು ಹಾಕಿ ದೃಢೀಕರಣ ಮಾಡಿರುವ ದಾಖಲೆ ಪರಿಗಣಿಸಬೇಕು. ಜತೆಗೆ, ಸ್ವಯಂ ದೃಢೀಕರಿಸಿರುವ ಆಧಾರ್ ಕಾರ್ಡ್‌ನ ನಕಲು ಪ್ರತಿ ಸಲ್ಲಿಸಬೇಕು.

· ಜಿಲ್ಲಾ ಪ್ರಧಾನ ನ್ಯಾಯಾಲಯಗಳ ನ್ಯಾಯಾಧೀಶರು ಮತ್ತು ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಅವರು ವಾರ್ಷಿಕ ತಪಾಸಣೆ ವೇಳೆ ಜಾಮೀನುದಾರರ ನೊಂದಣಿಯನ್ನು ಪರಿಶೀಲನೆಗೊಳಪಡಿಸಿಕೊಳ್ಳಬೇಕು.