ಡಿ.31ರ ಕರ್ನಾಟಕ ಬಂದ್ ಮುಂದೂಡಲು ಪ್ರವೀಣ್ ಶೆಟ್ಟಿ ಮನವಿ

ಬೆಂಗಳೂರು, ಡಿಸೆಂಬರ್ 29: ವಿವಿಧ ಕನ್ನಡ ಪರ ಸಂಘಟನೆಗಳು ಡಿ.31ರಂದು ಕರೆ ನೀಡಿದ್ದ ಕರ್ನಾಟಕ ಬಂದ್ ಅನ್ನು ಮುಂದೂಡಬೇಕೆಂದು ಕರವೇ ಅಧ್ಯಕ್ಷ ಪ್ರವೀಣ್ ಶೆಟ್ಟಿ ಮನವಿ ಮಾಡಿದ್ದಾರೆ.
ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್) ಕಾರ್ಯಕರ್ತರು ನಡೆಸಿರುವ ಪುಂಡಾಟಿಕೆ ವಿರೋಧಿಸಿರುವ ವಿವಿಧ ಕನ್ನಡ ಪರ ಸಂಘಟನೆಗಳು ಕರ್ನಾಟಕ ಬಂದ್ ಮಾಡಲು ನಿರ್ಧರಿಸಿದ್ದವು.
ಕರ್ನಾಟಕ ಬಂದ್‌ಗೆ ಕರ್ನಾಟಕದ ರಾಜಕಾರಣಿಗಳು, ಕೆಲವು ಕನ್ನಡಪರ ಸಂಘಟನೆಗಳು, ಚಲನಚಿತ್ರೋದ್ಯಮದ ಹಲವರು ಬೆಂಬಲ ನೀಡಿರಲಿಲ್ಲ. ಅಲ್ಲದೇ ಕೊರೊನಾ ಲಾಕ್‌ಡೌನ್‌ನಿಂದ ಈಗಷ್ಟೇ ಚೇತರಿಸಿಕೊಳ್ಳುತ್ತಿರುವ ಬೀದಿ ಬದಿ ವ್ಯಾಪಾರಿಗಳಿಗೆ ಬಂದ್‌ನಿಂದ ನಷ್ಟವಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು.
ಕರ್ನಾಟಕ ಬಂದ್‌ಗೆ ಎರಡೇ ದಿನ ಬಾಕಿ ಉಳಿದಿರುವಾಗಲೇ ಹಲವು ವಲಯಗಳಿಂದ ಇನ್ನೂ ಪರಿಪೂರ್ಣ ಬೆಂಬಲ ಸಿಕ್ಕಿರಲಿಲ್ಲ. ಈ ಪರಿಣಾಮ ಬಂದ್ ಯಶಸ್ವಿಗೊಳಿಸುವುದಕ್ಕೆ ಕನ್ನಡಪರ ಸಂಘಟನೆಗಳು ಹರಸಾಹಸ ಪಡಬೇಕಾದ ಸ್ಥಿತಿ ಎದುರಾಯಿತು. ಆದ್ದರಿಂದ ಸದ್ಯಕ್ಕೆ ಮುಂದೂಡಲು ಪ್ರವೀಣ್ ಶೆಟ್ಟಿ ಮನವಿ ಮಾಡಿ ಪತ್ರ ಬರೆದಿದ್ದಾರೆ.
ಹೋಟೆಲ್, ಪಬ್, ಬಾರ್ ಮಾಲೀಕರು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯವರು ಕೇವಲ ನಾವು ನೈತಿಕ ಬೆಂಬಲ ನೀಡುತ್ತೇವೆ ಎಂದು ತಿಳಿಸಿವೆ. ಹೀಗಾಗಿ ಕನ್ನಡಪರ ಸಂಘಟನೆಗಳು ನೈತಿಕ ಬೆಂಬಲಕ್ಕೆ ಅಸಮಾಧಾನ ವ್ಯಕ್ತಪಡಿಸಿವೆ.
ಇತ್ತೀಚೆಗೆ ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಸತ್ಯಾಗ್ರಹ, ಕಾಲ್ನಡಿಗೆ ಜಾಥಾದ ಮೂಲಕ ಸಾರ್ವಜನಿಕರಲ್ಲಿ ಮನವಿ, ಮಲ್ಲೇಶ್ವರಂನಲ್ಲಿ ಉರುಳು ಸೇವೆ ಮಾಡಿ ಬಂದ್‌ಗೆ ಕನ್ನಡಪರ ಸಂಘಟನೆಗಳು ಬೆಂಬಲ ಕೋರಿವೆ. ಈ ವೇಳೆ 100ಕ್ಕೂ ಹೆಚ್ಚು ಹೋರಾಟಗಾರರಿಂದ ಉರುಳು ಸೇವೆ ಮೂಲಕ ಮನವಿ ಮಾಡಲಾಯಿತು. ಇದು ಕನ್ನಡಿಗರ ಸ್ವಾಭಿಮಾನದ ಪ್ರಶ್ನೆಯಾಗಿರುವುದರಿಂದ ಬಂದ್ ಮಾಡಲೇಬೇಕು ಎಂದು ಸಂಘಟನೆಗಳು ಪಣತೊಟ್ಟಿವೆ.
ಬಂದ್‌ಗೆ ಬೆಂಬಲ ಬೇಡ ಎಂದು ಸರ್ವ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ 30ಕ್ಕೂ ಹೆಚ್ಚು ಸಂಘಟನೆಗಳಿಂದ ಡಿ.30ರಂದು ನಗರದಲ್ಲಿ ಮೆರವಣಿಗೆ ಮಾಡಲು ನಿರ್ಧರಿಸಲಾಗಿದೆ. ಇನ್ನು ಹಲವು ಸಂಘಟನೆಗಳು ನೈತಿಕ ಬೆಂಬಲ ನೀಡುವುದಾಗಿ ಘೋಷಿಸಿವೆ. ನೈತಿಕ ಬೆಂಬಲ ಬೇಡ ಸಂಪೂರ್ಣ ಬೆಂಬಲ ಬೇಕು ಎಂದು ಕನ್ನಡಪರ ಸಂಘಟನೆಗಳು ಒತ್ತಾಯಿಸಿವೆ.