ಲೇಔಟ್ ತೆರವಿಗೆ ವಿರೋಧ, ಕಾರ್ಯಚರಣೆ ವಿರುದ್ಧ ವಾಗ್ವಾದ

ಧಾರವಾಡ

ಮಟ್ಟಿ ಪ್ಲಾಟ್ನಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ ಲೇಔಟ್ಗಳ ತೆರವು ಕಾರ್ಯಾಚರಣೆ ವೇಳೆ ತೀವ್ರ ವಾಗ್ವಾದ ನಡೆದು, ಲೇಔಟ್ ಮಾಲೀಕರು ಕಾರ್ಯಾಚರಣೆಗೆ ಅಡ್ಡಿಪಡಿಸಿದ ಘಟನೆ ಧಾರವಾಡದಲ್ಲಿ ನಡೆದಿದೆ. ಮಟ್ಟಿ ಪ್ಲಾಟ್ನಲ್ಲಿ ಸ್ವದೇಶ ಲೇಔಟ್ ಎಂಬ ಹೆಸರಿನಡಿ ಅಕ್ರಮ ಲೇಔಟ್ಗಳನ್ನು ಮಾಡಲಾಗಿತ್ತು. ಲೇಔಟ್ಗೆ ವಿದ್ಯುತ್ ಸಂಪರ್ಕ ಕೂಡ ಕಲ್ಪಿಸಲಾಗಿದೆ. ಈ ಲೇಔಟ್ನಲ್ಲಿ ಬಡವರು ಈಗಾಗಲೇ ಹಣ ಕೊಟ್ಟು ಪ್ಲಾಟ್ ಕೂಡ ಖರೀದಿ ಮಾಡಿದ್ದಾರೆ. ಎನ್ಎ ಆಗದೇ ಹಾಗೂ ಯಾವುದೇ ಪರವಾನಿಗಿ ಇಲ್ಲದೇ ಲೇಔಟ್ ಮಾಡಲಾಗಿದೆ ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗೇಶ ಕಲಬುರ್ಗಿ ಹಾಗೂ ಅಧಿಕಾರಿಗಳು ನಿವೇಶನಗಳ ತೆರವು ಕಾರ್ಯಾಚರಣೆ ನಡೆಸಿದ್ರು. ಈ ವೇಳೆ ಲೇಔಟ್ ನಿರ್ಮಿಸಿದ ಮಾಲೀಕರು ಹಾಗೂ ಪ್ಲಾಟ್ ಖರೀದಿಸಿದವರು ತೆರವು ಕಾರ್ಯಾಚರಣೆಗೆ ತೀವ್ರ ಅಡ್ಡಿಪಡಿಸಿದ ಘಟನೆ ನಡೆಯಿತು. ನಮಗೆ ಸಮಯಾವಕಾಶ ಕೊಡಿ. ಲೇಔಟ್ಗಳನ್ನು ಅಧಿಕೃತಗೊಳಿಸಿಕೊಳ್ಳುತ್ತೇವೆ. ಈ ರೀತಿ ಹೇಳದೇ ಕೇಳದೇ ತೆರವು ಮಾಡಲು ಬಂದರೆ ಹೇಗೆ? ನಾವು ಕೂಲಿ, ನಾಲಿ ಮಾಡಿ ಪ್ಲಾಟ್ ಖರೀದಿಸಿದ್ದೇವೆ ಎಂದು ಲೇಔಟ್ ಮಾಲೀಕರು ಮತ್ತು ಪ್ಲಾಟ್ ಕೊಂಡುಕೊಂಡವರು ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ ಅವರೊಂದಿಗೆ ತೀವ್ರ ವಾಗ್ವಾದ ನಡೆಸಿ, ಕಾರ್ಯಾಚರಣೆಗೆ ಬಂದ ಜೆಸಿಬಿಗೆ ಅಡ್ಡಗಟ್ಟಿದ ಪ್ರಸಂಗವೂ ಜರುಗಿತು. ಅನಂತರ ಹುಡಾ ಅಧ್ಯಕ್ಷ ನಾಗೇಶ ಅವರು, ಅಕ್ರಮ ಇರುವುದನ್ನು ಸಕ್ರಮಗೊಳಿಸಿಕೊಳ್ಳುತ್ತೇವೆ. ಈಗ ಹಾಕಲಾಗಿರುವ ಕಲ್ಲು ಹಾಗೂ ವಿದ್ಯುತ್ ಕಂಬಗಳನ್ನು ತೆರವುಗೊಳಿಸಿ ಹುಡಾದಲ್ಲಿ ಅರ್ಜಿ ಹಾಕಿ ಅಧಿಕೃತವಾಗಿ ಲೇಔಟ್ ಮಾಡುತ್ತೇವೆ ಎಂದು ಲಿಖಿತ ರೂಪದಲ್ಲಿ ಕೊಡಿ, ತೆರವು ಕಾರ್ಯಾಚರಣೆ ನಿಲ್ಲಿಸುತ್ತೇವೆ. ಇದಕ್ಕೆ ಒಪ್ಪಿಗೆ ಸೂಚಿಸಿದ ಲೇಔಟ್ ಮಾಲೀಕರು ಆ ರೀತಿ ಲಿಖಿತ ರೂಪದಲ್ಲಿ ಭರವಸೆ ಕೊಟ್ಟಿದ್ದರಿಂದ ತೆರವು ಕಾರ್ಯಾಚರಣೆ ನಿಲ್ಲಿಸಲಾಯಿತು. ಒಂದು ಹಂತದಲ್ಲಿ ತೀವ್ರ ವಾಗ್ವಾದವೇ ನಡೆಯಿತು. ಪೊಲೀಸರು ಮಧ್ಯೆ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಅಲ್ಲದೇ ಹುಡಾ ಅಧ್ಯಕ್ಷರು ಕೂಡ ಅಕ್ರಮ ಇರುವುದನ್ನು ಸಕ್ರಗೊಳಿಸಿಕೊಳ್ಳಿ ಅದಕ್ಕೆ ಬೇಕಾದ ಸಹಕಾರ ನಾವು ಕೊಡುತ್ತೇವೆ ಎಂದು ಭರವಸೆ ಕೂಡ ನೀಡಿದ್ರು.